More

    ಕಬ್ಬಿಗೆ ಕವಿದ ಕರೊನಾ ಮಂಕು

    ಅನ್ಸಾರ್ ಇನೋಳಿ/ ಸಂದೀಪ್ ಸಾಲ್ಯಾನ್ ಬಂಟ್ವಾಳ
    ಚೌತಿ ಹಬ್ಬ ಬಂತೆಂದರೆ ಕಬ್ಬು ಬೆಳೆಗಾರರಿಗೆ ಸುಗ್ಗಿ… ಒಂಬತ್ತು ತಿಂಗಳು ಜೋಪಾನ ಮಾಡಿ ಸಾಕಿ ಬೆಳೆಸಿದ ಫಸಲಿಗೆ ಬೆಲೆ ಬರುವ ಕಾಲ. ಆದರೆ ಈ ಬಾರಿಯ ಕರೊನಾ ಮಹಾಮಾರಿ ಕಬ್ಬು ಬೆಳೆಗಾರರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಉತ್ತಮ ಬೆಳೆ ಬಂದಿದ್ದರೂ ಸರಿಯಾದ ಮಾರುಕಟ್ಟೆಯಿಲ್ಲದೆ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ.
    ಮಾತೆ ಮೇರಿ ಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ತುಳಸಿಪೂಜೆ ಸಂದರ್ಭ ಕಬ್ಬಿಗೆ ಭಾರಿ ಬೇಡಿಕೆಯಿರುತ್ತದೆ. ಲಕ್ಷಾಂತರ ರೂ. ವ್ಯಯಿಸಿ ಎಕರೆಗಟ್ಟಲೆ ಜಮೀನಿನಲ್ಲಿ ಬೆಳೆದ ಇಷ್ಟೊಂದು ಕಬ್ಬನ್ನು  ಏನು ಮಾಡುವುದು? ಎನ್ನುವ ಚಿಂತೆ ಕಬ್ಬು ಬೆಳೆಗಾರರನ್ನು ಕಾಡಲಾರಂಭಿಸಿದೆ.
    ಬಳ್ಕುಂಜೆ, ಹರೇಕಳ ಭಾಗದಲ್ಲಿ ಬೆಳೆ: ಮಂಗಳೂರು ತಾಲೂಕಿನ ಹೊರವಲಯದ ಬಳ್ಕುಂಜೆ ಪ್ರದೇಶದಲ್ಲಿ 45ಕ್ಕಿಂತಲೂ ಅಧಿಕ ಕುಟುಂಬ, ಹರೇಕಳದ ಕುತ್ತಿಮುಗೇರ್, ಬೈತಾರ್, ಕಡವಿನ ಬಳಿ, ಪಾವೂರು, ಮುನ್ನೂರು ಮತ್ತು ಅಂಬ್ಲಮೊಗರು ಗ್ರಾಮಗಳ 50 ಮಂದಿ ಬೆಳೆದ ಕಬ್ಬು ಕಟಾವಿಗೆ ಸಿದ್ಧಗೊಂಡಿದೆ. ಆದರೆ ಕರೊನಾ ಹಿನ್ನೆಲೆ ಹಬ್ಬಗಳ ಆಚರಣೆಗೂ ಸರ್ಕಾರ ಕಡಿವಾಣ ಹಾಕಿರುವುದರಿಂದ ಈ ಬಾರಿ ಕಬ್ಬಿಗೆ ಬೇಡಿಕೆ ಇಲ್ಲದಂತಾಗಿದೆ. ಹಿಂದೆ ಹರೇಕಳ ಭಾಗದಲ್ಲಿ 100 ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದ ಕಬ್ಬು ಸದ್ಯ 50 ಎಕರೆಯಷ್ಟೇ ಬೆಳೆಸಲಾಗುತ್ತಿದೆ.
    ಬಿಳಿ ಕಬ್ಬಿಗೂ ಬೇಡಿಕೆ ಕಡಿಮೆ: ಹರೇಕಳದಲ್ಲಿ ಊರಿನ ಹಾಗೂ ಕಿಜಿ ಕಬ್ಬು ಬೆಳೆಸಲಾಗುತ್ತಿದೆ. ಕಿಜಿ ಕಬ್ಬು ಕಪ್ಪು ಬಣ್ಣದ್ದು, ಸಿಹಿಯಾಗಿದ್ದರೂ ತಿನ್ನಲು ಕಠಿಣ. ಇದರ ಸಿಹಿ ಹಾಗೂ ದೊಡ್ಡ ಗಾತ್ರದಿಂದ ಜ್ಯೂಸ್ ಮಾಡುವವರು ಇದನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಊರಿನ ಕಬ್ಬು ತೆಳ್ಳಗಾಗಿ, ಸಣ್ಣ ಗಾತ್ರ, ಬಿಳಿ ಬಣ್ಣ ಹೊಂದಿದೆ. ಸಿಹಿ ಕಡಿಮೆಯಾಗಿರುವುದರಿಂದ ಜ್ಯೂಸ್ ಅಂಗಡಿಗಳಲ್ಲಿ ಬೇಡಿಕೆಯೂ ಕಡಿಮೆ. ಆದರೆ ಈ ಕಬ್ಬು ಮಕ್ಕಳ ಆರೋಗ್ಯ ವೃದ್ಧಿಗೆ ಪೂರಕ. ಸಮುದ್ರ ರಾಜನಿಗೆ ಪೂಜೆ ಸಲ್ಲಿಸುವ ಸಂದರ್ಭ ಊರಿನ ಕಬ್ಬು ಬಳಸಲಾಗುತ್ತದೆ. ಆದರೆ ಪ್ರಸ್ತುತ ಯಾವ ಕಬ್ಬಿಗೂ ಬೇಡಿಕೆ ಇಲ್ಲ.
     ಚೌತಿ ಹಬ್ಬಕ್ಕೆ ಕಬ್ಬು ವ್ಯಾಪಾರವಾಗಿಲ್ಲ ಎಂದು ಕಬ್ಬು ಬೆಳೆಗಾರರು ಹತಾಶರಾಗುವುದು ಬೇಡ. ಮಳೆಗಾಲ ಮುಗಿದ ಕೂಡಲೇ ಬೆಲ್ಲ ತಯಾರಿಗೆ ರೈತರು ಬೆಳೆದ ಕಬ್ಬನ್ನು ನ್ಯಾಯಯುತ ಬೆಲೆಗೆ ಖರೀದಿಸುವ ಬಗ್ಗೆ ರೈತ ಸಂಘ ಜಿಲ್ಲಾಡಳಿತದ ಗಮನ ಸೆಳೆಯಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜೇಶ್ ನಾಕ್ ಅವರೊಂದಿಗೆ ಚರ್ಚೆ ನಡೆಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಬ್ಬು ಬೆಳೆಗಾರರು ತಾಳ್ಮೆ ವಹಿಸುವುದು ಅಗತ್ಯ.
     ಮನೋಹರ ಶೆಟ್ಟಿ, ರೈತ ಸಂಘ ಹಸಿರುಸೇನೆ ಕಾರ್ಯದರ್ಶಿ

    ಹಬ್ಬಗಳ ಸಂದರ್ಭ ಕಬ್ಬಿಗೆ ವಿಶೇಷ ಸ್ಥಾನ ಇರುವುದರಿಂದ ಹೆಚ್ಚು ಆದಾಯವಿಲ್ಲದಿದ್ದರೂ ಪ್ರತಿವರ್ಷ ನಾಲ್ಕು ಗ್ರಾಮಗಳಲ್ಲಿ ಕೃಷಿಕರು ಕಬ್ಬು ಬೆಳೆಯುತ್ತಿದ್ದರು. ಈ ವರ್ಷ ಕರೊನಾದಿಂದ ಹಬ್ಬಗಳಿಲ್ಲದೆ ಬೆಳೆಸಿದ ಕಬ್ಬು ನಿಷ್ಪ್ರಯೋಜಕವಾಗುತ್ತಿದೆ.
     ಭಾಸ್ಕರ ರೈ ಕಬ್ಬು ಬೆಳೆಗಾರ
    ಬಳ್ಕುಂಜೆಯಲ್ಲಿ ಸುಮಾರು ಎರಡೂವರೆ ಲಕ್ಷದಷ್ಟು ಕಬ್ಬು ಇದೆ. 45 ಕುಟುಂಬ ಇಲ್ಲಿ ಕಬ್ಬು ಬೆಳೆಸುತ್ತಿವೆ. ಚೌತಿ ಸಂದರ್ಭ ಮೂಲ್ಕಿ, ಸುರತ್ಕಲ್, ಕಾಪು, ಉಡುಪಿ, ಕಾರ್ಕಳಕ್ಕೆ ಇಲ್ಲಿಂದಲೆ ಕಬ್ಬು ಹೋಗುತ್ತಿತ್ತು. ಆದರೆ ಕರೊನಾದಿಂದಾಗಿ ಈ ಬಾರಿ ಕಬ್ಬು ವ್ಯಾಪಾರವಾಗದೆ ಉಳಿದಿವೆ.
     ಗೋಪಾಲ ಭಂಡಾರಿ, ಕಬ್ಬು ಬೆಳೆಗಾರರು, ಬಳ್ಕುಂಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts