More

    ವಿಮಾನಯಾನ ಅವಲಂಬನೆ ತಗ್ಗಲಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೀಗೊಂದು ಭವಿಷ್ಯ ನುಡಿದಿದ್ದೇಕೆ?

    ಬೆಂಗಳೂರು ಗ್ರಾಮಾಂತರ: ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ಭವಿಷ್ಯವೊಂದನ್ನು ನುಡಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು ಮಾತನಾಡಿದ ಅವರು ಈ ವಿಷಯವೊಂದನ್ನು ಹೇಳಿದ್ದು, ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

    ಹೊಸಕೋಟೆ ತಾಲೂಕು ಕರಿಬೀರನಹೊಸಹಳ್ಳಿಯಲ್ಲಿ ಭಾಗದಲ್ಲಿ ನಡೆಯುತ್ತಿರುವ ಬೆಂಗಳೂರು ಚೆನ್ನೈ ಎಕ್ಸ್​​ಪ್ರೆಸ್ ಹೆದ್ದಾರಿ ಕಾಮಗಾರಿ ಪ್ರಗತಿಯನ್ನು ಗುರುವಾರ ವೈಮಾನಿಕ ಪರೀಕ್ಷೆ ನಡೆಸಿ ಮಾತನಾಡಿದರು.
    ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ಭವಿಷ್ಯದಲ್ಲಿ ವಿಮಾನಯಾನದ ಅವಲಂಬನೆ ತಗ್ಗಲಿದೆ. ಕಡಿಮೆ ಅವಧಿಯಲ್ಲಿ ಜನ ಸಾಮಾನ್ಯರು ಇವೆರಡು ಮಹಾನಗರಗಳ ನಡುವೆ ರಸ್ತೆ ಸಾರಿಗೆ ಮೂಲಕ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಬಹುದು ಎಂದು ಅವರು ಭವಿಷ್ಯ ನುಡಿದರು.

    ದೇಶದಲ್ಲೇ ಚೆನ್ನೈ ಹಾಗೂ ಬೆಂಗಳೂರು ಮಹಾನಗರಗಳು ವೇಗವಾಗಿ ಅಭಿವೃದ್ಧಿಯಾಗುತ್ತಿವೆ. ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ದುಪ್ಪಟ್ಟಾಗುತ್ತಿದೆ. ವಾಹನ ದಟ್ಟಣೆ, ಇಂಧನ, ಸಮಯ ಉಳಿತಾಯಕ್ಕೆ ಈ ಹೆದ್ದಾರಿಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು. 2024ರ ಫೆಬ್ರವರಿ ವೇಳೆಗೆ ಈ ಎಕ್ಸ್‌ಪ್ರೆಸ್ ಹೈವೇ ಲೋಕಾರ್ಪಣೆಗೊಳ್ಳಲಿದೆ. ಜನವರಿ ಆರಂಭದಲ್ಲೇ ಉದ್ಘಾಟಿಸುವ ಚಿಂತನೆ ಇದ್ದು ಕಾಮಗಾರಿ ಚುರುಕುಗೊಳಿಸಲಾಗಿದೆ ಎಂದರು.

    ಪ್ರಸ್ತುತ ಬೆಂಗಳೂರಿನಿಂದ ಚೆನ್ನೈಗೆ ರಸ್ತೆ ಮೂಲಕ ಪ್ರಯಾಣಿಸಲು ಆರೇಳು ತಾಸು ಬೇಕಾಗುತ್ತದೆ. ಆದರೆ ಈ ಹೆದ್ದಾರಿ ಸಂಚಾರಕ್ಕೆ ಮುಕ್ತವಾದ ಬಳಿಕ ಕೇವಲ ಮೂರೇ ತಾಸು ಸಾಕಾಗುತ್ತದೆ. ಇದರಿಂದ ಎರಡೂ ಮಹಾನಗರಗಳ ನಡುವಿನ ಪ್ರವಾಸೋದ್ಯಮ ಹಾಗೂ ಲಾಜಿಸ್ಟಿಕ್ ಪ್ರಗತಿ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದರು.

    ಸ್ಯಾಟಲೈಟ್ ಟೋಲ್: ಹೆದ್ದಾರಿಯಲ್ಲಿ ಸ್ಯಾಟಲೈಟ್ ಟೋಲ್ ವ್ಯವಸ್ಥೆ ಮಾಡಲಾಗುವುದು. ಇದರಿಂದ ಟೋಲ್​ಗಳಲ್ಲಿ ವಾಹನ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗುತ್ತದೆ. ಫಾಸ್ಟ್ ಟ್ಯಾಗ್ ಮೂಲಕ ಸ್ಕ್ಯಾನ್ ಆಗಿ ವಾಹನ ಸವಾರರು ಯಾವುದೇ ಗಡಿಬಿಡಿ ಇಲ್ಲದೆ ಪ್ರಯಾಣಿಸಬಹುದು ಎಂದು ಹೇಳಿದರು.

    ರಸ್ತೆ ನಿರ್ಮಾಣಕ್ಕೆ ಘನತ್ಯಾಜ್ಯ: ಬೆಂಗಳೂರಿನಂಥ ನಗರಗಳಲ್ಲಿ ತ್ಯಾಜ್ಯ ಸಮಸ್ಯೆ ಬಿಗಡಾಯಿಸಿದೆ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಘನತ್ಯಾಜ್ಯ ಬಳಸಲಾಗುವುದು. ಈ ಮೂಲಕ ಕಡಿಮೆ ವೆಚ್ಚದ ಜತೆಗೆ ತ್ಯಾಜ್ಯ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ಗಡ್ಕರಿ ತಿಳಿಸಿದರು.

    ರೈತರಿಗೆ ಅನ್ಯಾಯ ಆಗಲ್ಲ: ರಸ್ತೆ ನಿರ್ಮಾಣ ಕಾಮಗಾರಿಗೆ ಮಾಡಿಕೊಳ್ಳುವ ಭೂ-ಸ್ವಾಧೀನದಿಂದ ಯಾವುದೇ ರೈತರಿಗೂ ಅನ್ಯಾಯವಾಗುವುದಿಲ್ಲ. ವೈಜ್ಞಾನಿಕ ಬೆಲೆಯನ್ನೇ ನೀಡಲಾಗುತ್ತಿದೆ. ಜತೆಗೆ ಎಲ್ಲಿಯೂ ದಬ್ಬಾಳಿಕೆ ಮಾಡದೆ ರೈತರ ಮನವೊಲಿಸಿಯೇ ಕಾಮಗಾರಿಗೆ ನಡೆಸಲಾಗುತ್ತಿದೆ ಎಂದರು. ಸಂಸದ ಪ್ರತಾಪ್ ಸಿಂಹ, ಸಂಸದ ಮುನಿಸ್ವಾಮಿ, ಸಚಿವ ಸಿ.ಸಿ.ಪಾಟೀಲ್, ಎಂಟಿಬಿ ನಾಗರಾಜ್, ಜಿಲ್ಲಾಧಿಕಾರಿ ಆರ್.ಲತಾ ಇದ್ದರು.

    ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

    ಆಸ್ಪತ್ರೆಯಲ್ಲಿದ್ದ ವಿವಾಹಿತ ಪ್ರೇಯಸಿಯನ್ನು ತಡರಾತ್ರಿಯಲ್ಲಿ ಅಪ್ಪಿಕೊಂಡವ ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳ್ಕೊಂಡ!

    ಎಬಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts