

ನವದೆಹಲಿ: ಅಂತರ್ಜಲ ಪೋಲಾಗುವುದನ್ನು ಮತ್ತು ದುರ್ಬಳಕೆಯಾಗುತ್ತಿರುವುದನ್ನು ತಡೆಯುವುದಕ್ಕೆ ಸಮರ್ಪಕ ಕ್ರಮಗಳನ್ನು ಯಾಕೆ ತಗೊಂಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ತರಾಟೆಗೆ ತೆಗೆದುಕೊಂಡಿದೆ. ಅಂತರ್ಜಲಕ್ಕೆ ಸಂಬಂಧಿಸಿ ನಿಶ್ಚಿತ ಸಮಯ ಮಿತಿಯೊಳಗಿನ ಕಾರ್ಯಯೋಜನೆ ರೂಪಿಸಬೇಕಾದ ಅವಶ್ಯಕತೆ ಇದೆ. ಅದೇ ರೀತಿ, ಅದರ ಮೇಲೆ ನಿಗಾ ಕೂಡ ಇರಿಸಬೇಕಾದ್ದು ಅಗತ್ಯ ಎಂದು ಎನ್ಜಿಟಿ ಹೇಳಿದೆ.
ಎನ್ಜಿಟಿ ಚೇರ್ಪರ್ಸನ್ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಜಲಶಕ್ತಿ ಸಚಿವಾಲಯ ಮತ್ತು ದೆಹಲಿ ಜಲ ಮಂಡಳಿ ಸಲ್ಲಿಸಿದ ಪ್ರತಿಕ್ರಿಯೆ ಪರಿಶೀಲಿಸಿದ ಬಳಿಕ ಸ್ಪಷ್ಟ ನೀತಿ ರೂಪಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಸಾಮಾನ್ಯ ಮತ್ತು ಹಾರಿಕೆಯ ಅಂಶಗಳಷ್ಟೇ ಇವೆ. ಎಲ್ಲ ರಾಜ್ಯಗಳಿಗೂ ಪತ್ರ ಬರೆಯಲಾಗಿದೆ ಎಂಬ ಉತ್ತರವಿದೆ. ಜಲಶಕ್ತಿ ಸಚಿವಾಲಯದ ಇಂತಹ ಉತ್ತರಗಳು ಜನರಲ್ಲಿ ವಿಶ್ವಾಸ ಮೂಡಿಸಲಾರವು ಎಂದು ಅವರು ಹೇಳಿದರು.
ಗಾಝಿಯಾಬಾದ್ನ ಬಿಜೆಪಿ ಕೌನ್ಸಿಲರ್ ರಾಜೇಂದ್ರ ತ್ಯಾಗಿ ಮತ್ತು ಫ್ರೆಂಡ್ಸ್ ಎಂಬ ಎನ್ಜಿಒ ಸಲ್ಲಿಸಿದ್ದ ದೂರು ಅರ್ಜಿಯ ವಿಚಾರಣೆಯನ್ನು ನ್ಯಾಯಾಧಿಕರಣ ಕೈಗೆತ್ತಿಕೊಂಡಿದ್ದು, ಇದಕ್ಕೆ ಜಲಶಕ್ತಿ ಸಚಿವಾಲಯ ಮತ್ತು ದೆಹಲಿ ಜಲ ಮಂಡಳಿಗಳು ಅಫಿಡವಿಟ್ ಸಲ್ಲಿಸಿದ್ದವು. (ಏಜೆನ್ಸೀಸ್)