More

    ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ ಕಾನ್‌ವೇ ಈಗ ಕಿವೀಸ್ ಗೆಲುವಿನ ರೂವಾರಿ!

    ಕ್ರೈಸ್ಟ್‌ಚರ್ಚ್: ನಾಲ್ಕು ದಿನಗಳ ಹಿಂದಷ್ಟೇ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನ್ಯೂಜಿಲೆಂಡ್‌ನ ಎಡಗೈ ಬ್ಯಾಟ್ಸ್‌ಮನ್ ಡೆವೋನ್ ಕಾನ್‌ವೇ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿರಲಿಲ್ಲ. ಇದೀಗ ಡೆವೋನ್ ಕಾನ್‌ವೇ (99*ರನ್, 59 ಎಸೆತ, 10 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 53 ರನ್‌ಗಳಿಂದ ಸುಲಭ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಆತಿಥೇಯ ಕಿವೀಸ್ ತಂಡ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ 2ನೇ ಪಂದ್ಯ ಗುರುವಾರ ಡುನೆಡಿನ್‌ನಲ್ಲಿ ನಡೆಯಲಿದೆ.

    ಸ್ಫೋಟಕ ಬ್ಯಾಟ್ಸ್‌ಮನ್ ಡೆವೋನ್ ಕಾನ್‌ವೇ ಇತ್ತೀಚೆಗೆ ಐಪಿಎಲ್ ಆಟಗಾರರ ಹರಾಜಿನಲ್ಲಿ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ಆದರೆ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಇದರ ಬೆನ್ನಲ್ಲೇ ಅವರು ಬಿರುಸಿನ ಬ್ಯಾಟಿಂಗ್‌ನಿಂದ ಗಮನಸೆಳೆದಿದ್ದಾರೆ. ಇದರಿಂದಾಗಿ ಐಪಿಎಲ್ ತಂಡಗಳು ಅವರನ್ನು ಖರೀದಿಸದೆ ತಪ್ಪು ಮಾಡಿದೆವು ಎಂದು ತಲೆಚಚ್ಚಿಕೊಳ್ಳುವಂತಾಗಿದೆ. ‘ಕಾನ್‌ವೇ ಆಟ 4 ದಿನ ತಡವಾಯಿತು. ಆದರೆ ಎಂಥಾ ಇನಿಂಗ್ಸ್’ ಎಂದು ಟೀಮ್ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ಟ್ವೀಟಿಸಿ ಕಾನ್‌ವೇ ಕಾಲೆಳೆದಿದ್ದಾರೆ.

    ಇದನ್ನೂ ಓದಿ: 9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದ ಜೋಕೊವಿಕ್, 18ನೇ ಗ್ರಾಂಡ್ ಸ್ಲಾಂ ಕಿರೀಟ

    ಹ್ಯಾಗ್ಲೆ ಓವಲ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕಿವೀಸ್ ತಂಡ ಒಂದು ಹಂತದಲ್ಲಿ ಕೇವಲ 19 ರನ್‌ಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿತ್ತು. ಆಗ ತಂಡಕ್ಕೆ ಆಸರೆಯಾದ ಕಾನ್‌ವೇ 5 ವಿಕೆಟ್‌ಗೆ 184 ರನ್‌ಗಳ ಉತ್ತಮ ಮೊತ್ತ ಪೇರಿಸಲು ನೆರವಾದರು.

    ದಕ್ಷಿಣ ಆಫ್ರಿಕಾ ಮೂಲದ ಕಾನ್‌ವೇ ಚೊಚ್ಚಲ ಶತಕಕ್ಕೆ ಕೊನೇ ಎಸೆತದಲ್ಲಿ ಕೇವಲ 2 ರನ್ ಅಗತ್ಯವಿತ್ತು. ಆದರೆ 1 ರನ್ ಗಳಿಸಲಷ್ಟೇ ಶಕ್ತರಾದರು. ಪ್ರತಿಯಾಗಿ ಸ್ಪಿನ್ನರ್ ಇಶ್ ಸೋಧಿ (28ಕ್ಕೆ 4) ದಾಳಿಗೆ ಕುಸಿದ ಆಸೀಸ್, 17.3 ಓವರ್‌ಗಳಲ್ಲಿ 131 ರನ್‌ಗೆ ಆಲೌಟ್ ಆಯಿತು. ಮಿಚೆಲ್ ಮಾರ್ಷ್ (45) ಅವರೊಬ್ಬರು ಮಾತ್ರ ಪ್ರತಿರೋಧ ತೋರಿದರು. ಆಸ್ಟ್ರೇಲಿಯಾ ತಂಡ ಸರಣಿಗೆ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್‌ಗೆ ವಿಶ್ರಾಂತಿ ನೀಡಿದೆ.

    ನ್ಯೂಜಿಲೆಂಡ್: 5 ವಿಕೆಟ್‌ಗೆ 184 (ಗುಪ್ಟಿಲ್ 0, ಸೀರ್ಟ್ 1, ವಿಲಿಯಮ್ಸನ್ 12, ಕಾನ್‌ವೇ 99*, ಫಿಲಿಪ್ಸ್ 30, ನೀಶಾಮ್ 26, ಸ್ಯಾಮ್ಸ್ 40ಕ್ಕೆ 2, ರಿಚರ್ಡ್‌ಸನ್ 31ಕ್ಕೆ 2, ಸ್ಟೋಯಿನಿಸ್ 17ಕ್ಕೆ 1), ಆಸ್ಟ್ರೇಲಿಯಾ: 17.3 ಓವರ್‌ಗಳಲ್ಲಿ 131 (ವೇಡ್ 12, ಫಿಂಚ್ 1, ಮಿಚೆಲ್ ಮಾರ್ಷ್ 45, ಮ್ಯಾಕ್ಸ್‌ವೆಲ್ 1, ಸ್ಟೋಯಿನಿಸ್ 8, ಅಗರ್ 23, ಇಶ್ ಸೋಧಿ 28ಕ್ಕೆ 4, ಸೌಥಿ 10ಕ್ಕೆ 2, ಬೌಲ್ಟ್ 22ಕ್ಕೆ 2). ಪಂದ್ಯಶ್ರೇಷ್ಠ: ಡೆವೋನ್ ಕಾನ್‌ವೇ.

    ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದು ಜೋಕ್ ಎಂದುಕೊಂಡಿದ್ದ ತೆವಾಟಿಯಾ!

    100ನೇ ಟೆಸ್ಟ್ ಆಡಲು ಸಜ್ಜಾದ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮ

    ಭಾರತ-ಇಂಗ್ಲೆಂಡ್ ನಡುವಿನ ಅಹರ್ನಿಶಿ ಟೆಸ್ಟ್‌ಗೂ ಸ್ಪಿನ್ ಪಿಚ್ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts