More

    ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದು ಜೋಕ್ ಎಂದುಕೊಂಡಿದ್ದ ತೆವಾಟಿಯಾ!

    ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಹರಿಯಾಣ ಪರ ಆಡಲು ಕೋಲ್ಕತದಲ್ಲಿರುವ ಆಲ್ರೌಂಡರ್ ರಾಹುಲ್ ತೆವಾಟಿಯಾ ಶನಿವಾರ ರಾತ್ರಿ ಹೋಟೆಲ್ ಕೋಣೆಯಲ್ಲಿ ಇನ್ನೇನು ನಿದ್ದೆಗೆ ಜಾರುವಷ್ಟರಲ್ಲಿ ಇದ್ದಾಗ ಅಲ್ಲಿಗೆ ಆಗಮಿಸಿದ ಸಹ-ಆಟಗಾರ ಹಾಗೂ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ವಿಷಯವನ್ನು ತಿಳಿಸಿದರು. ಆದರೆ ಚಾಹಲ್ ಜೋಕ್ ಮಾಡುತ್ತಿದ್ದಾರೆ ಎಂದೇ ತಿಳಿದ ತೆವಾಟಿಯಾ ಅದನ್ನು ನಂಬಲಿಲ್ಲ. ಆಗ ಚಾಹಲ್ ಮೊಬೈಲ್ ತೆಗೆದು ಅದರಲ್ಲಿ ಭಾರತ ತಂಡ ಆಯ್ಕೆಯ ಸುದ್ದಿಯಲ್ಲಿ ತೋರಿಸಿದರು. ಇದರಿಂದ ತೆವಾಟಿಯಾ ಸಂಭ್ರಮದಲ್ಲಿ ತೇಲಾಡಿದ್ದರು.

    ಕಳೆದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ತೆವಾಟಿಯಾ, ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ವಿಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದರು. ‘ನನಗೆ ಜೀವನ ಯಾವಾಗಲೂ ಸವಾಲೆಸೆದಿದೆ. ಹರಿಯಾಣದಲ್ಲಿ ಭಾರತ ಪರ ಆಡಿದ ಮೂವರು (ಚಾಹಲ್, ಅಮಿತ್ ಮಿಶ್ರಾ, ಜಯಂತ್ ಯಾದವ್) ಸ್ಪಿನ್ನರ್‌ಗಳಿದ್ದಾರೆ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಬಾಚಿಕೊಳ್ಳುವ ಸವಾಲು ನನ್ನ ಮುಂದಿರುತ್ತದೆ. ಐಪಿಎಲ್ ಬಳಿಕ ಜನರು ನನ್ನನ್ನು ಗುರುತಿಸಲಾರಂಭಿಸಿದ್ದರು. ಹೀಗಾಗಿ ಉತ್ತಮ ನಿರ್ವಹಣೆ ತೋರಿದರೆ ಭಾರತ ತಂಡ ಪ್ರವೇಶಿಸುವ ವಿಶ್ವಾಸ ನನಗಿತ್ತು’ ಎಂದು ತೆವಾಟಿಯಾ ಹೇಳಿದ್ದಾರೆ. ಈ ನಡುವೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರಾಹುಲ್ ತೆವಾಟಿಯಾ (73ರನ್, 39 ಎಸೆತ, 4 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು.

    ಇದನ್ನೂ ಓದಿ: 9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದ ಜೋಕೊವಿಕ್, 18ನೇ ಗ್ರಾಂಡ್ ಸ್ಲಾಂ ಕಿರೀಟ

    ‘ನಾನು ಇದುವರೆಗೆ ವಿರಾಟ್ ಕೊಹ್ಲಿ ವಿರುದ್ಧ ಐಪಿಎಲ್‌ನಲ್ಲಿ ಹಲವು ಬಾರಿ ಆಡಿದ್ದೇನೆ. ಇದೀಗ ಅವರೊಂದಿಗೆ ಆಡುವ ಮತ್ತು ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಅವಕಾಶ ಲಭಿಸಿದೆ. ಈ ಬಗ್ಗೆ ಕಾತರಗೊಂಡಿರುವೆ. ವಿಶ್ವದ ಕೆಲ ಅತ್ಯುತ್ತಮ ಕ್ರಿಕೆಟಿಗರ ಜತೆ ಆಡಿ ಅವರಿಂದ ಸಾಕಷ್ಟು ಕಲಿತುಕೊಳ್ಳಲಿದ್ದೇನೆ’ ಎಂದು ರಾಹುಲ್ ತೆವಾಟಿಯಾ ಹೇಳಿದ್ದಾರೆ.

    ಸೂರ್ಯಕುಮಾರ್ ಹರ್ಷ
    ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಉತ್ತಮ ನಿರ್ವಹಣೆ ತೋರಿ ಗಮನಸೆಳೆಯುತ್ತ ಬಂದಿರುವ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೊನೆಗೂ ತಮ್ಮ ಪರಿಶ್ರಮಕ್ಕೆ ಫಲ ದೊರೆತಿರುವುದಕ್ಕೆ ಸಂಭ್ರಮಿಸಿದ್ದು, ‘ಅತಿ ವಾಸ್ತವಿಕತಾ’ ಎಂದು ಬಣ್ಣಿಸಿದ್ದಾರೆ. ಸೂರ್ಯಕುಮಾರ್ ಅವರನ್ನು ಈ ಹಿಂದೆ ಆಸೀಸ್ ಪ್ರವಾಸದಿಂದ ಕೈಬಿಟ್ಟಿದ್ದು ಕ್ರಿಕೆಟ್ ವಲಯದಿಂದ ಟೀಕೆಗೆ ಗುರಿಯಾಗಿತ್ತು. ಭಾರತ ಟಿ20 ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ 30 ವರ್ಷದ ಸೂರ್ಯಕುಮಾರ್, ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದ ಪಿಚ್ ಮೇಲೆ ಕುಳಿತಿರುವ ಚಿತ್ರದೊಂದಿಗೆ, ‘ಅತಿ ವಾಸ್ತವಿಕ ಅನುಭವ’ ಎಂದು ಟ್ವೀಟಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲೂ 77 ಪ್ರಥಮ ದರ್ಜೆ ಪಂದ್ಯಗಳಲ್ಲಿ 5,326 ರನ್ ಗಳಿಸಿರುವ ಅನುಭವಿ ಅವರಾಗಿದ್ದಾರೆ. ಸೂರ್ಯಕುಮಾರ್ ಆಯ್ಕೆಯ ಬಗ್ಗೆ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಸಹಿತ ಕೆಲ ಭಾರತೀಯ ಕ್ರಿಕೆಟಿಗರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

    ಸಚಿನ್ ತೆಂಡುಲ್ಕರ್ ಅಭಿನಂದನೆ
    ಭಾರತ ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್, ರಾಹುಲ್ ತೆವಾಟಿಯಾ, ಇಶಾನ್ ಕಿಶನ್ ಮತ್ತು ಆಸೀಸ್ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ, ಗಾಯದಿಂದಾಗಿ ಪ್ರವಾಸ ತಪ್ಪಿಸಿಕೊಂಡಿದ್ದ ವರುಣ್ ಚಕ್ರವರ್ತಿಗೆ ದಿಗ್ಗಜ ಸಚಿನ್ ತೆಂಡುಲ್ಕರ್ ಶುಭಾಶಯ ತಿಳಿಸಿದ್ದಾರೆ. ಸಚಿನ್ ಭಾನುವಾರ ಟ್ವಿಟರ್‌ನಲ್ಲಿ ಈ ನಾಲ್ವರನ್ನು ಟ್ಯಾಗ್ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವರುಣ್ ಚಕ್ರವರ್ತಿ ಟ್ವಿಟರ್‌ನಲ್ಲೇ ಧನ್ಯವಾದ ತಿಳಿಸಿದ್ದಾರೆ.

    ಯುವಿ​ ದಾಖಲೆ ಮುರಿದ ಕ್ರಿಸ್​ ಮೋರಿಸ್​! ದಾಖಲೆಯ ಮೌಲ್ಯಕ್ಕೆ ಬಿಡ್​ ಆದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts