More

    ಸ್ವಾಲಂಬಿಯಾಗಿಸುವ ಶಿಕ್ಷಣ ಅಗತ್ಯ

    ಚಿಕ್ಕಮಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಲಿಕೆಯಿಂದ ಹೊರಬಂದ ನಂತರವೂ ನಾನೇ ಸಾಧಿಸಬಲ್ಲೆ ಎನ್ನುವ ಸ್ವಾವಲಂಬನೆಯ ಭರವಸೆ ಮೂಡಿಸುವ ಅಂಶಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಬುಧವಾರ ಜಿಲ್ಲಾ ಅನುದಾನರಹಿತ ಶಾಲೆಗಳ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಎಐಟಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ನೂತನ ಶಿಕ್ಷಣ ನೀತಿ ಅಂಕ ಆಧಾರಿತವಲ್ಲ. ಕಲಿಕಾ ಹಂತದಲ್ಲೇ ವಿದ್ಯಾರ್ಥಿಯನ್ನು ಸ್ವಾವಲಂಬಿಯಾಗಿಸುವ ಜ್ಞಾನಾಧಾರಿತ ಎಂದರು.

    ಪ್ರಥಮ ರ್ಯಾಂಕ್ ಗಳಿಸಿದ ಬಹಳಷ್ಟು ಮಂದಿ ಸಾಮಾನ್ಯ ಜ್ಞಾನದಲ್ಲಿ ದಡ್ಡರಾಗಿದ್ದು, ಶೇ.98 ಅಂಕ ಗಳಿಸಿದವರು ಕೇವಲ ಇನ್ನೆರಡು ಅಂಕ ಬರಲಿಲ್ಲವೆಂದು ಆತ್ಮಹತ್ಯೆಗೆ ಮುಂದಾಗುತ್ತಾರೆ. ನಮ್ಮಲ್ಲಿ ಸ್ವಂತಿಕೆಯ ಶಿಕ್ಷಣ ನೀತಿ ಇದುವರೆಗೂ ಪರಿಪೂರ್ಣವಾಗಿ ರೂಪುಗೊಳ್ಳದ ಕಾರಣ ಸಮಗ್ರ ಜೀವನ ನೋಡುವ ದೃಷ್ಟಿಕೋನ ಬರಲೇ ಇಲ್ಲ. ಬದಲಿಗೆ ಭಾಗ ಭಾಗವಾಗಿ ಸಮಾಜವನ್ನು ನೋಡುವ ದೃಷ್ಟಿಕೋನ ಬೆಳೆಸಿಕೊಂಡು ಅನರ್ಥಗಳನ್ನು ನಾವೇ ತಂದುಕೊಂಡಿದ್ದೇವೆ ಎಂದು ವಿಷಾದಿಸಿದರು.

    ಶಿಕ್ಷಣದ ಉದ್ದೇಶ, ದಾರಿ ಸ್ಪಷ್ಟವಾಗದಿದ್ದರೆ ಕೇವಲ ಪದವಿ ಹಾಗೂ ಹಣ ಗಳಿಕೆಯ ಮಾಧ್ಯಮವಾದರೆ ಮುಂದೇನು ಎಂಬ ಪ್ರಶ್ನೆ ಎದುರಾಗುತ್ತದೆ. ಶಿಕ್ಷಣ ಹಣ ಗಳಿಕೆ ಹಾಗೂ ಪದವಿಗೆ ಸೀಮಿತಗೊಂಡಾಗ ಬದುಕಿನ ಗುರಿಯಲ್ಲಿ ಅನಿಶ್ಚಿತತೆ ಕಾಡುತ್ತದೆ. ಈಗಲೂ ನಮ್ಮ ಶಿಕ್ಷಣ ನಮ್ಮನ್ನು ಹಾಗೆಯೇ ಇಟ್ಟಿದೆ ಎಂದರು.

    ಶತಮಾನಗಳ ಕಾಲ ಅನ್ನ, ಔಷಧ, ಅಕ್ಷರ ವ್ಯಾಪಾರದ ಸರಕಾಗಿರಲಿಲ್ಲ. ಇಂದು ನೀರು ಬಹುದೊಡ್ಡ ವ್ಯಾಪಾರದ ವಸ್ತು. ಹಿಂದೆ ಹಸಿವು ನೀಗಿಸುತ್ತಿದ್ದ ಅನ್ನಛತ್ರಗಳು ಇಂದು ಶೇ.10ರಷ್ಟು ಜಿಡಿಪಿ ಕಟ್ಟುವಷ್ಟರ ಮಟ್ಟಿಗೆ ಬೆಳೆದ ಹೋಟೆಲ್ ಉದ್ಯಮವಾಗಿದೆ. ಹಿಂದೆ ಕುಬೇರನಿಂದ ಕುಚೇಲನವರೆಗೆ ಸಮಾನ ಶಿಕ್ಷಣ ನೀಡುವ ಸಮಾಜ ಆಶ್ರಿತ ಗುರುಕುಲಗಳಿದ್ದವು. ಇಂದು ಶಿಕ್ಷಣವೂ ಒಂದು ದೊಡ್ಡ ಉದ್ಯಮವಾಗಿದೆ. ಔಷಧ ಉದ್ಯಮ ಅಂತಾರಾಷ್ಟ್ರೀಯ ಮಟ್ಟದ ಲಾಬಿಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಹೊಸ ಶಿಕ್ಷಣ ನೀತಿ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು.

    ಡಾ. ಸಂಕೇಶ್ವರ ಅಂಥವರ ಯಶೋಗಾಥೆ ಪಠ್ಯವಾಗಲಿ: ಒಂದು ಲಾರಿಯಿಂದ ಉದ್ಯಮ ಆರಂಭಿಸಿ ಸಹಸ್ರಾರು ಮಂದಿಗೆ ಉದ್ಯೋಗ ಕಲ್ಪಿಸಿರುವ ಉದ್ಯಮಿ ಡಾ. ವಿಜಯ ಸಂಕೇಶ್ವರ ಅಂಥವರ ಯಶೋಗಾಥೆಗಳು ಪಠ್ಯಪುಸ್ತಕದಲ್ಲಿ ಬರಬೇಕು. ಹೀಗೆಂದವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿ ಸದಸ್ಯ ಡಾ. ಟಿ.ವಿ.ಕಟ್ಟೀಮನಿ.

    ಶಿರಸಿಯಲ್ಲಿ ಓರ್ವ ರೈತನ ವಾರ್ಷಿಕ ಆದಾಯ 12 ಲಕ್ಷ ರೂ. ಆದರೆ ಅವರಿಗೆ ಇರುವುದು ಕೇವಲ ಒಂದು ಎಕರೆ ಹೊಲ. ಅವರು ಅದರಲ್ಲಿ ಅಷ್ಟು ಸಾಧನೆ ಮಾಡುತ್ತಿದ್ದಾರೆ. 3ನೇ ತರಗತಿವರೆಗೆ ವ್ಯಾಸಂಗ ಮಾಡಿದ ಚೆನ್ನೈನ ದೊಡ್ಡ ಉದ್ಯಮಿ ಜಿ.ಡಿ.ನಾಯ್ಡು ಅವರನ್ನು ಭೇಟಿ ಮಾಡಲು ಸರ್ ಎಂ.ವಿಶ್ವೇಶ್ವರಯ್ಯ ಕೂಡ ತೆರಳುತ್ತಿದ್ದರು. ಇಂಥ ಸಾಧಕರ ವಿಷಯಗಳಿಂದ ಮಕ್ಕಳು ಸ್ಪೂರ್ತಿಗೊಳ್ಳುತ್ತಾರೆ ಎಂದರು.

    ವಿದ್ಯೆಗೂ ಕಾಯಕಕ್ಕೂ ಸಂಬಂಧ ಕಲ್ಪಿಸಬೇಕು ಎನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ. ಮಕ್ಕಳಿಗೆ ಸಾಧಕರ ಯಶೋಗಾಥೆಗಳನ್ನು ಪರಿಚಯಿಸಬೇಕು. ಪಠ್ಯಪುಸ್ತಕದಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ಇರಲಿದೆ. ಅಷ್ಟಕ್ಕೂ ಇಂದಿನ ಪ್ರಮಾಣ ಪತ್ರಗಳಿಗೂ ಶಿಕ್ಷಣಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಜಾಗೃತ ಸತ್ಪ್ರಜೆಗಳಾಗಿಸುವ ಮೌಲ್ಯ ಕೇಂದ್ರಿತ ಶಿಕ್ಷಣ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

    ಶಿಕ್ಷಕರ ಮೇಲಿದೆ ಅನುಷ್ಠಾನದ ಹೊಣೆ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿ ಸದಸ್ಯ, ಆಂಧ್ರದ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಡಾ. ಟಿ.ವಿ.ಕಟ್ಟೀಮನಿ ಹೇಳಿದರು.

    ಪ್ರಾಥಮಿಕ ಹಂತದಲ್ಲಿ ವೈಜ್ಞಾನಿಕ ಆಸಕ್ತಿ ಇರುವ ಮಕ್ಕಳನ್ನು ಅದೇ ಕ್ಷೇತ್ರದಲ್ಲಿ ಉತ್ತೇಜಿಸಬೇಕು. ಅದಕ್ಕೆ ಪೂರಕವಾದ ಮೂಲ ತತ್ವಗಳನ್ನು ಒದಗಿಸಬೇಕು ಎನ್ನುವುದು ಈ ಶಿಕ್ಷಣ ನೀತಿ ಉದ್ದೇಶ. ನಮ್ಮಲ್ಲಿ ಗ್ರಾಮ ಮಟ್ಟದ ಸಂಶೋಧಕರು ಅದ್ಭುತವಾದ ಪ್ರತಿಭೆ ಹೊಂದಿದ್ದಾರೆ. ಆದರೆ ಅವರಲ್ಲಿ ಒಂದೇ ಕೊರತೆ ಎಂದರೆ ಇಂಗ್ಲಿಷ್ ಭಾಷಾ ಜ್ಞಾನ. ಆದರೆ ಎಸಿ ಕೊಠಡಿಯಲ್ಲಿ ಕುಳಿತವರಲ್ಲಿ ಏನಿಲ್ಲವೆಂದರೂ ಇಂಗ್ಲಿಷ್ ಹಾಗೂ ಸಂಪರ್ಕ ಮಾಧ್ಯಮದ ಜ್ಞಾನ ಇದೆ. ಇಬ್ಬರನ್ನೂ ಸೇರಿಸಿ ಸಂಶೋಧನೆ ಬರೆಸಿದರೆ ಅನುಕೂಲವಾಗುತ್ತದೆ. ಇದು ಸಹ ಈ ಶಿಕ್ಷಣ ನೀತಿಯಲ್ಲಿ ಕಾನೂನಾಗುತ್ತಿದೆ ಎಂದರು.

    ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹಾಗೂ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ಮಾತನಾಡಿದರು. ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಚ್.ನರೇಂದ್ರ ಪೈ, ಶಂಕರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಡಿಡಿಪಿಐ ಬಿ.ವಿ.ಮಲ್ಲೇಶಪ್ಪ, ಎಐಟಿ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್, ಬಿಇಒ ಎಸ್.ಆರ್.ಮಂಜುನಾಥ್, ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಎಂ.ಎನ್.ಷಡಕ್ಷರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts