More

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕನಾಗಲು ಯಾರ‌್ಯಾರು ಪೈಪೋಟಿಯಲ್ಲಿದ್ದಾರೆ ಗೊತ್ತೇ?

    ಬೆಂಗಳೂರು: ಐಪಿಎಲ್ 14ನೇ ಆವೃತ್ತಿಗೆ ಮುನ್ನ ಹೊಸ ನಾಯಕನನ್ನು ಹುಡುಕಬೇಕಾದ ಸವಾಲು ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎದುರಾಗಿದೆ. ಇದಕ್ಕೆ ಕಾರಣ ಹಾಲಿ ನಾಯಕ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಗಾಯಗೊಂಡಿರುವುದು. ಎಡಗೈ ಕೀಲು ತಪ್ಪಿರುವುದರಿಂದ ಶಸಚಿಕಿತ್ಸೆಗೆ ಒಳಗಾಗಲಿರುವ ಅವರು, ಸಂಪೂರ್ಣ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಡೆಲ್ಲಿಗೆ ಹೊಸ ನಾಯಕನ ಆಯ್ಕೆ ಅನಿವಾರ‌್ಯವಾಗಿದ್ದು, ಇದಕ್ಕಾಗಿ ಡೆಲ್ಲಿ ತಂಡದ ಮುಂದೆ ಇರುವ ಕೆಲ ಆಯ್ಕೆಗಳ ವಿವರ ಇಲ್ಲಿದೆ.

    ಆರ್. ಅಶ್ವಿನ್, ರಿಷಭ್ ಪಂತ್, ಅಜಿಂಕ್ಯ ರಹಾನೆ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಲ್ಲದೆ 19 ವಯೋಮಿತಿ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಪೃಥ್ವಿ ಷಾ ಮತ್ತು ದೆಹಲಿಯ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ಪೈಪೋಟಿಯಲ್ಲಿದ್ದಾರೆ.

    ಇದನ್ನೂ ಓದಿ: ಭಾರತಕ್ಕೆ ಆಂಗ್ಲರ ಎದುರು ಹ್ಯಾಟ್ರಿಕ್ ಸರಣಿ ಗೆಲುವು, ಅಂತಿಮ ಏಕದಿನದಲ್ಲಿ ಕೊಹ್ಲಿ ಪಡೆ ವಿಕ್ರಮ

    ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್‌ನಲ್ಲಿ ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದ ನಾಯಕರಾಗಿದ್ದರು. 2018, 2019ರ ಆವೃತ್ತಿಯಲ್ಲಿ ಪಂಜಾಬ್ ತಂಡ ಅವರ ಸಾರಥ್ಯದಲ್ಲಿ ಆಡಿದ 28 ಪಂದ್ಯಗಳಲ್ಲಿ 12ರಲ್ಲಿ ಗೆದ್ದು 16ರಲ್ಲಿ ಸೋತಿತ್ತು. ಆದರೆ ಇವೆರಡೂ ಸಂದರ್ಭದಲ್ಲಿ ಪಂಜಾಬ್ ತಂಡ ಪ್ಲೇಆಫ್​ಗೇರಿರಲಿಲ್ಲ. ಹೀಗಾಗಿ ನಾಯಕತ್ವ ಅನುಭವವಿದ್ದರೂ, ದಾಖಲೆ ಉತ್ತಮವಾಗಿರದೆ ಇರುವುದು ಅಶ್ವಿನ್‌ಗೆ ಹಿನ್ನಡೆಯಾಗಿದೆ.

    ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಪ್ರಸಕ್ತ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವವಿಲ್ಲ. ಆದರೆ ಶ್ರೇಯಸ್ ಅಯ್ಯರ್ ನಾಯಕರಾಗಿದ್ದಾಗ, ರಿಷಭ್ ಪಂತ್ ಉಪನಾಯಕರಾಗಿದ್ದರು. ಹೀಗಾಗಿ ಸಹಜವಾಗಿಯೇ ಶ್ರೇಯಸ್ ಗೈರಿನಲ್ಲಿ ಪಂತ್ ನಾಯಕರಾಗಿ ಬಡ್ತಿ ಪಡೆಯುವ ನಿರೀಕ್ಷೆ ಹೆಚ್ಚಿದೆ. ಈ ನಡುವೆ 23 ವರ್ಷದ ಪಂತ್‌ಗೆ ಇಷ್ಟು ಬೇಗ ತಂಡದ ನಾಯಕತ್ವ ಒಪ್ಪಿಸಿದರೆ ಭಾರವಾಗಬಹುದೇ ಎಂಬ ಭೀತಿಯೂ ಇದೆ. ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡವನ್ನು ಮುನ್ನಡೆಸಿದ ಅನುಭವವೂ ಇರುವುದು ಅವರಿಗೆ ಪ್ಲಸ್ ಪಾಯಿಂಟ್.

    ಸ್ಟೀವನ್ ಸ್ಮಿತ್ ಈ ಹಿಂದೆ ಪುಣೆ ಸೂಪರ್‌ಜೈಂಟ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಾಯಕರಾಗಿದ್ದರು. ಹಾಗಿದ್ದರೂ, ಕಳೆದ ಹರಾಜಿನಲ್ಲಿ ಕೇವಲ 2.2 ಕೋಟಿ ರೂ. ಮೊತ್ತಕ್ಕೆ ಡೆಲ್ಲಿ ತಂಡವನ್ನು ಕೂಡಿಕೊಂಡಿರುವ ಸ್ಮಿತ್, ಇದು ಇನ್ನೂ ಹೊಸ ತಂಡವಾಗಿದೆ. ಐಪಿಎಲ್‌ನಲ್ಲಿ ಅವರ ನಾಯಕತ್ವ ದಾಖಲೆಯೂ ಮಿಶ್ರ ಫಲ ಹೊಂದಿದೆ. 43 ಪಂದ್ಯಗಳಲ್ಲಿ 25ರಲ್ಲಿ ಗೆದ್ದು 17ರಲ್ಲಿ ಸೋತಿದ್ದಾರೆ. 2017ರಲ್ಲಿ ಪುಣೆ ತಂಡ ಇವರ ನಾಯಕತ್ವದಲ್ಲೇ ರನ್ನರ್‌ಅಪ್ ಆಗಿದ್ದರೆ, 2020ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಕೊನೇ ಸ್ಥಾನ ಪಡೆದಿತ್ತು. ಹೀಗಾಗಿ ಸ್ಮಿತ್‌ಗೆ ನಾಯಕತ್ವ ವಹಿಸುವ ಮುನ್ನ ಡೆಲ್ಲಿ ತಂಡ ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ. ಸ್ಮಿತ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳದಿದ್ದರೆ, ಅದರ ಪರಿಣಾಮ ತಂಡದ ಮೇಲೆಯೂ ಬೀರುವ ಅಪಾಯ ಇರುತ್ತದೆ.

    ಇದನ್ನೂ ಓದಿ:  VIDEO | ಐಸಿಸಿ ನಿಯಮದ ದೋಷದಿಂದಾಗಿ ರಿಷಭ್ ಪಂತ್‌ಗೆ 4 ರನ್ ನಷ್ಟ!

    ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕರಾಗಿ ಉತ್ತಮ ಯಶಸ್ಸು ಕಂಡಿರುವ ಅಜಿಂಕ್ಯ ರಹಾನೆ ಐಪಿಎಲ್‌ನಲ್ಲೂ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 25 ಪಂದ್ಯಗಳಲ್ಲಿ 9ರಲ್ಲಿ ಗೆದ್ದು 16ರಲ್ಲಿ ಸೋತಿದ್ದಾರೆ. ಆದರೆ 2020ರ ಐಪಿಎಲ್‌ನಲ್ಲಿ ಡೆಲ್ಲಿ ತಂಡದಲ್ಲಿ ಅವರಿಗೆ ಕಾಯಂ ಸ್ಥಾನವೇ ಇರಲಿಲ್ಲ. ಹೀಗಾಗಿ ಈ ಬಾರಿ ರಹಾನೆಗೆ ನಾಯಕತ್ವ ವಹಿಸುವುದಾದರೆ ಕಾಯಂ ಸ್ಥಾನವನ್ನೂ ನೀಡಬೇಕಾಗುತ್ತದೆ.

    ಇನ್ನು ಪೃಥ್ವಿ ಷಾ ಕಿರಿಯರ ಕ್ರಿಕೆಟ್‌ನಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದರೂ, ಡೆಲ್ಲಿ ತಂಡದ ನಾಯಕತ್ವ ವಹಿಸಲು ಇನ್ನೂ ಪಕ್ವತೆ ಪಡೆದಿಲ್ಲ ಎಂದೇ ಹೇಳಲಾಗುತ್ತದೆ. ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ರನ್ ಪ್ರವಾಹ ಹರಿಸಿದ್ದರೂ, ಭಾರತ ತಂಡದಲ್ಲಿ ಅವರು ಕಂಡಿರುವ ವೈಫಲ್ಯ ಹಿನ್ನಡೆಯಾಗಿದೆ.

    ಶಿಖರ್ ಧವನ್ ದೆಹಲಿಯವರೇ ಆಗಿರುವುದರಿಂದ ತವರಿನ ತಂಡವನ್ನು ಮುನ್ನಡೆಸುವ ಸ್ಪರ್ಧೆಯಲ್ಲಿ ಕಾಣಿಸಿದ್ದಾರೆ. ಈ ಹಿಂದೆ ಸನ್‌ರೈಸರ್ಸ್‌ ತಂಡದ ನಾಯಕತ್ವ ವಹಿಸಿದ ಅನುಭವವೂ ಅವರಿಗೆ ಇದೆ. ಆದರೆ ಇವರನ್ನು ಡೆಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ನಾಯಕತ್ವಕ್ಕೆ ಇನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ.

    VIDEO: ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಹೊಸ ಜೆರ್ಸಿಗಿದೆ ಐದು ವಿಶೇಷತೆಗಳು.!

    ಮದುವೆ ಬೆನ್ನಲ್ಲೇ ಸಂಜನಾ ಕೆಲಸಕ್ಕೆ ಹಾಜರ್! ಬುಮ್ರಾ ಹನಿಮೂನ್‌ಗೆ ಯಾರ ಜತೆ ಹೋದರು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts