More

    ಮಳೆ ನಿರೀಕ್ಷೆಯಲ್ಲಿ ಜನ

    ಉಪ್ಪಿನಂಗಡಿ: ಸುಡುವ ಸೆಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಳೆಯ ನಿರೀಕ್ಷೆ ಸುಳ್ಳಾಗುತ್ತಿದೆ. ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿ ನದಿಯಲ್ಲಿ ಮಾತ್ರ ತೃಪ್ತಿದಾಯಕ ನೀರಿನ ಹರಿವು ಇದ್ದರೂ, ನೀರಿನ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವುದು ಚಿಂತೆಗೆ ಕಾರಣವಾಗಿದೆ.

    ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಣೆಕಟ್ಟು ಕಟ್ಟಿರುವುದರಿಂದ ನದಿಯಲ್ಲಿನ ಹಿನ್ನೀರು ಸಂಗ್ರಹ ಈ ಬಾರಿ ನದಿಪಾತ್ರದ ಜನತೆಗೆ ಅದರಲ್ಲೂ ಮುಖ್ಯವಾಗಿ ಕೃಷಿಕರಿಗೆ ಸಂತಸವನ್ನು ಉಂಟು ಮಾಡಿತ್ತು. ಆದರೆ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಕುಸಿದಾಗ ಎಎಂಆರ್ ಅಣೆಕಟ್ಟಿನಿಂದ ನೀರು ಒದಗಿಸಲಾಗಿತ್ತು. ಇದರಿಂದಾಗಿ ಸರಪ್ಪಾಡಿ ಮತ್ತು ಕಡೆಶ್ವಾಲ್ಯ ಅಣೆಕಟ್ಟಿನಲ್ಲಿ ನೀರು ಬರಿದಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಮಸ್ಯೆಯಾಗಿತ್ತು. ಜಿಲ್ಲೆಯ ಜನತೆಯ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಸಮತೋಲನ ಜಲಾಶಯವಾಗಿ ಪರಿಗಣಿಸಲ್ಪಟ್ಟ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದ 3.7 ಮೀಟರ್ ಹಿನ್ನೀರಿನಿಂದ 2.1 ಮೀಟರ್ ನೀರನ್ನು ಏಪ್ರಿಲ್ 17ರಂದು ಸರಪ್ಪಾಡಿ ಹಾಗೂ ಕಡೆಶ್ವಾಲ್ಯ ಅಣೆಕಟ್ಟೆಗೆ ಹರಿಯಬಿಟ್ಟ ಬಳಿಕ ಬಿಳಿಯೂರು ಅಣೆಕಟ್ಟಿನಲ್ಲಿ 1.6 ಮೀಟರ್‌ನಷ್ಟು ಮಾತ್ರ ಹಿನ್ನೀರು ಸಂಗ್ರಹವಾಗಿತ್ತು.

    ನೇತ್ರಾವತಿ ನದಿಪಾತ್ರದ ಕೆಲವೊಂದು ಭಾಗಗಳಲ್ಲಿ ಬಳಿಕದ ದಿನಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ನದಿಯ ನೀರಿನ ಮಟ್ಟದಲ್ಲಿ ಒಂದು ಅಡಿಯಷ್ಟು ಏರಿಕೆ ಕಂಡು ಬಂದಿದೆ.

    ಕೃಷಿಕರಿಗೆ ಎದುರಾದ ಸಮಸ್ಯೆ

    ನದಿಯ ಒಡಲಿನಲ್ಲಿ ಸುಮಾರು 3 ಮೀಟರ್‌ನಷ್ಟು ಎತ್ತರಕ್ಕೆ ನೀರು ಸಂಗ್ರಹಗೊಂಡಿದ್ದರಿಂದ ಅದಕ್ಕೆ ಅನುಗುಣವಾಗಿ ಪಂಪ್ ಅಳವಡಿಸಿ ಕೃಷಿಗೆ ನೀರುಣಿಸುತ್ತಿದ್ದ ಕೃಷಿಕರಿಗೆ ನೀರಿನ ಮಟ್ಟ ಕುಸಿತದಿಂದಾಗಿ ಸಮಸ್ಯೆ ಎದುರಾಯಿತು. ಪಂಪ್‌ಸೆಟ್‌ಗಳನ್ನು ಮತ್ತೆ ನದಿಪಾತ್ರಕ್ಕೆ ಸ್ಥಳಾಂತರಿಸಿ ಕೃಷಿ ಬೆಳೆಗಳಿಗೆ ನೀರುಣಿಸುವ ಕೆಲಸ ಮಾಡಬೇಕಾಗಿ ಬಂದಿದೆ.

    ಪೇಟೆಯ ತ್ಯಾಜ್ಯ ನೀರು ಸೇರ್ಪಡೆ

    ನದಿಯ ನೀರಿನ ಮಟ್ಟ ಕುಸಿದು ಮರಳು ಕಾಣುತ್ತಿರುವುದರಿಂದ ನದಿಯಲ್ಲಿ ಬೇಸಗೆಯ ಕಾಲದಲ್ಲಿ ನೀರಿನಾಟಕ್ಕೆ ಮುಗಿಬೀಳುತ್ತಿದ್ದ ಜನತೆ ಮತ್ತೆ ನದಿಗಿಳಿಯಲು ಉತ್ಸುಕರಾಗಿದ್ದಾರೆ. ಆದರೆ ಪೇಟೆಯ ತ್ಯಾಜ್ಯ ನೀರು ನದಿಗೆ ಸೇರುತ್ತಿರುವುದನ್ನು ಕಾಣುವ ಜನ ಮಾತ್ರ ನದಿ ನೀರಿನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

    ಮಳೆ ವಿಳಂಬವಾದರೆ ಸಮಸ್ಯೆ

    ಕಳೆದ ವರ್ಷ ಮಳೆಗಾಲ ವಿಳಂಬವಾಗಿ ಪ್ರಾರಂಭವಾಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನದಿಯು ಸಂಪೂರ್ಣ ಬತ್ತಿ ಹೋಗಿ, ಪರಿಸರವಾದಿಗಳು ಕ್ರಿಕೆಟ್ ಆಡಿ ನದಿಯ ದುಸ್ಥಿತಿಯತ್ತ ಗಮನ ಸೆಳೆದಿದ್ದರು. ಈ ಬಾರಿಯೂ ಮಳೆ ವಿಳಂಬವಾದರೆ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿ ಮತ್ತಷ್ಟು ನೀರನ್ನು ಬಿಳಿಯೂರು ಅಣೆಕಟ್ಟಿನಿಂದ ಹರಿಯಬಿಡಬೇಕಾಗಿ ಬಂದಲ್ಲಿ ನದಿಯ ನೀರು ಸಂಪೂರ್ಣ ಬರಿದಾಗುವ ಭೀತಿ ಎದುರಾಗಿದೆ.
    ನೆಕ್ಕಿಲಾಡಿಯಲ್ಲೂ ಸಂಗ್ರಹ ಕುಸಿತ: ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ಕುಮಾರಧಾರಾ ನದಿಗೆ ನೆಕ್ಕಿಲಾಡಿಯಲ್ಲಿ ಕಟ್ಟಲಾದ ಕಿಂಡಿ ಅಣೆಕಟ್ಟೆಯಲ್ಲಿಯೂ ಈ ಬಾರಿ ದಿನದಿಂದ ದಿನಕ್ಕೆ ನೀರಿನ ಸಂಗ್ರಹ ಕುಸಿತವಾಗುತ್ತಿದೆ. ಬಿಳಿಯೂರು ಅಣೆಕಟ್ಟಿನಲ್ಲಿ ಸಮೃದ್ಧ ನೀರು ಸಂಗ್ರಹಣೆಗೊಂಡಾಗ ಇಲ್ಲಿನ ಕಿಂಡಿ ಅಣೆಕಟ್ಟಿನಲ್ಲಿಯೂ ಅದರ ಹಿನ್ನೀರು ಸಂಗ್ರಹಗೊಂಡಿತ್ತು. ಇದರಿಂದಾಗಿ ಈ ವರ್ಷವಿಡೀ ಸಮೃದ್ಧ ನೀರು ಲಭಿಸುತ್ತದೆ ಎಂಬ ನಿರೀಕ್ಷೆ ಬಿಳಿಯೂರು ಅಣೆಕಟ್ಟಿನಿಂದ ನೀರು ಬಿಟ್ಟಾಕ್ಷಣ ಹುಸಿಯಾಗಿದೆ. ನೆಕ್ಕಿಲಾಡಿ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸಲಾಗಿದೆಯಾದರೂ ನೀರಿನ ಪ್ರಮಾಣದಲ್ಲಿ ಗಣನೀಯ ಕುಸಿತ ಕಾಣಿಸಿದೆ.
    ಏನಿದ್ದರೂ ವರುಣ ದೇವನ ಕೃಪೆಯನ್ನು ನಿರೀಕ್ಷಿಸುತ್ತಾ ಈ ಬಾರಿಯ ಬೇಸಿಗೆಯನ್ನು ಕಳೆಯಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts