More

    ಹಾಸ್ಟೆಲ್ ಕಟ್ಟಡ ಉಪಯೋಗ ಶೂನ್ಯ

    ವಿಜಯವಾಣಿ ಸುದ್ದಿಜಾಲ ಬಂಟ್ವಾಳ

    ದ.ಕ.ಜಿಲ್ಲೆಯ ಮೂರನೇ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗಿರಿಗುಡ್ಡೆಯಲ್ಲಿರುವ ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ಬಳಿ ನಿರ್ಮಾಣಗೊಂಡಿರುವ 2 ಹಾಸ್ಟೆಲ್ ಕಟ್ಟಡಗಳ ಒಂದರಲ್ಲಿ ಹಿಂದುಳಿದ ವರ್ಗಗಳ ಇಲಾಖೆ(ಬಿಸಿಎಂ)ಯ ಹಾಸ್ಟೆಲ್ ಕಾರ್ಯಾಚರಿಸುತ್ತಿದ್ದು, ಮತ್ತೊಂದು ಹಾಸ್ಟೆಲ್ ಕಟ್ಟಡವನ್ನು ಉಪಯೋಗಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯಬೇಕಿದೆ.

    ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಪ್ರತಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಬಳಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಅದೇ ರೀತಿ ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪಕ್ಕದಲ್ಲೇ ಬಾಲಕರು ಹಾಗೂ ಬಾಲಕಿಯರ ನೂತನ ಹಾಸ್ಟೆಲ್ ಕಟ್ಟಡ ನಿರ್ಮಿಸಿರುತ್ತದೆ. ಆದರೆ ಈ ಕಟ್ಟಡಗಳಿಗೆ ವಿದ್ಯಾರ್ಥಿಗಳು ಬಾರದೆ ಇದ್ದ ಹಿನ್ನೆಲೆಯಲ್ಲಿ ಅದು ಖಾಲಿಯಾಗಿಯೇ ಇತ್ತು.

    ಇದೇ ರೀತಿ ಬಂಟ್ವಾಳ ಪಾಲಿಟೆಕ್ನಿಕ್ ಕಾಲೇಜು ಬಳಿಯೂ ಹಾಸ್ಟೆಲ್ ಕಟ್ಟಡ ಖಾಲಿ ಇದೆ. ಹಾಲಿ ಕಾರ್ಯಾಚರಿಸುತ್ತಿರುವ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಖಾಲಿ ಇರುವ ಹಾಸ್ಟೆಲ್ ಕಟ್ಟಡವನ್ನು ಬಳಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಡಿಮೆ ಇರುವುದರಿಂದ ಖಾಲಿ ಇರುವ ಬಿಸಿಡಬ್ಲ್ಯುಡಿ ಇಲಾಖೆಗೆ ಅಗತ್ಯ ಬೀಳುವುದಿಲ್ಲ. ಈ ನಿಟ್ಟಿನಲ್ಲಿ ಖಾಲಿ ಇರುವ ಹಾಸ್ಟೆಲ್ ಕಟ್ಟಡವನ್ನು ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನವರೇ ಬಳಕೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ.

    ಸರ್ಕಾರದ ಆದೇಶದಂತೆ ಹಸ್ತಾಂತರ

    ಕಳೆದ ವರ್ಷ ರಾಜ್ಯ ಸರ್ಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಬಳಿ ಖಾಲಿ ಇರುವ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅಧೀನದ ವಿದ್ಯಾರ್ಥಿ ನಿಲಯ ಕಟ್ಟಡಗಳನ್ನು ತಾತ್ಕಾಲಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ(ಬಿಸಿಡಬ್ಲ್ಯುಡಿ)ಗೆ ನೀಡಲು ತೀರ್ಮಾನಿಸಿತ್ತು. ಅದರಂತೆ ಸುಮಾರು 224 ಹಾಸ್ಟೆಲ್ ಕಟ್ಟಡಗಳ ಪೈಕಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 71ವಿದ್ಯಾರ್ಥಿ ನಿಲಯ ಕಟ್ಟಡಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ(ಬಿಸಿಡಬ್ಲ್ಯುಡಿ)ಗೆ ನೀಡಲು ಆದೇಶಿಸಲಾಗಿತ್ತು. ಹೀಗಾಗಿ ಬಂಟ್ವಾಳ ಪಾಲಿಟೆಕ್ನಿಕ್ ಕಾಲೇಜು ಬಳಿ ನಿರ್ಮಾಣಗೊಂಡಿದ್ದ 2 ಹಾಸ್ಟೆಲ್ ಕಟ್ಟಡಗಳ ಪೈಕಿ ಒಂದನ್ನು ಕಳೆದ ವರ್ಷ ಬಿಸಿಡಬ್ಲ್ಯುಡಿ ಇಲಾಖೆಗೆ ನೀಡಿದ್ದು, ಪ್ರಸ್ತುತ ಅದರಲ್ಲಿ ಬಿ.ಸಿ.ರೋಡಿನ ತಲಪಾಡಿಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಕಾರ್ಯಾಚರಿಸುತ್ತಿದೆ. ಇದರಿಂದ ಇಲಾಖೆಗೆ ಪ್ರತಿ ತಿಂಗಳು 70 ಸಾವಿರ ರೂ. ಬಾಡಿಗೆ ವೆಚ್ಚ ಉಳಿತಾಯವಾಗಿ ವಾರ್ಷಿಕ 8.50 ಲಕ್ಷ ರೂ. ಉಳಿಯುತ್ತಿದೆ.

    ಪಾವತಿ ಆಧಾರದಲ್ಲಿ ಬಳಕೆಗೆ ಅವಕಾಶ

    ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಪಕ್ಕದಲ್ಲಿ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಉಚಿತವಾಗಿ ನೀಡುತ್ತದೆ. ಆದರೆ ಅಲ್ಲಿ ಊಟೋಪಚಾರ ಹಾಗೂ ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳೇ ಪಾವತಿಸುವ ಆಧಾರದಲ್ಲಿ ಇಲಾಖೆ ಕಟ್ಟಡ ನಿರ್ಮಿಸುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ವಿವಿಧ ಇಲಾಖೆಗಳ ಮೂಲಕ ಊಟೋಪಚಾರ ಸಹಿತ ಎಲ್ಲವೂ ಉಚಿತವಾಗಿ ಸಿಗುವ ಹಾಸ್ಟೆಲ್‌ಗಳಿರುವುದರಿಂದ ಬಹುತೇಕ ಕಡೆ ಇಂತಹ ಹಾಸ್ಟೆಲ್ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿರುತ್ತದೆ.

    ಪಾಲಿಟೆಕ್ನಿಕ್ ಪಕ್ಕದ ಒಂದು ಹಾಸ್ಟೆಲ್ ಕಟ್ಟಡವನ್ನು ಈಗಾಗಲೇ ಹಿಂದುಳಿದ ವರ್ಗಗಳ ಇಲಾಖೆಗೆ ನೀಡಲಾಗಿದ್ದು, ಮತ್ತೊಂದು ಕಟ್ಟಡ ಅವರಿಗೆ ಅವಶ್ಯಕತೆ ಬೀಳುವ ಸಾಧ್ಯತೆ ಕಡಿಮೆ. ಹೀಗಾಗಿ ನಮ್ಮ ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಕಟ್ಟಡವನ್ನು ಬಳಕೆ ಮಾಡುವ ಪ್ರಯತ್ನ ಮಾಡಲಾಗುವುದು.
    – ಭಗವಾನ್‌ಪ್ರಸಾದ್, ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್, ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts