More

    ಕೆರೆ ಅಭಿವೃದ್ಧಿಗೆ ನಿರ್ಲಕ್ಷ: ಅಂತರ್ಜಲ, ನೀರಿನ ಮಟ್ಟ ಇಳಿಕೆ: ರಾಮ ಸಮುದ್ರದಲ್ಲಿ ಸಮೃದ್ಧ ಜಲ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಸಮೃದ್ಧ ಜಲಸಂಪತ್ತು ಹೊಂದಿದ್ದ ತಾಲೂಕಿನ ನೂರಾರು ಕೆರೆಗಳು ಇಂದು ಹೂಳು, ಭೂಕಬಳಿಕೆ ಹಾಗೂ ನಿರ್ವಹಣೆ ಕೊರತೆಯಿಂದ ಕಣ್ಮರೆಯಾಗುವ ಹಂತ ತಲುಪಿದೆ. ಕೆಲವೊಂದು ಕೆರೆಗಳು ಅಭಿವೃದ್ಧಿ ಕಂಡರೆ, ಇನ್ನೂ ಹಲವು ಅಭಿವೃದ್ಧಿ ನಿರೀಕ್ಷೆಯಲ್ಲಿದೆ.

    ಹಲವು ವರ್ಷಗಳಿಂದಲೂ ರೈತಾಪಿ ಜನರು ಕೆರೆಯ ನೀರನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಕೆರೆ ಅಭಿವೃದ್ಧಿ ಬಗ್ಗೆ ಉತ್ಸಾಹವಿಲ್ಲದೆ ಸಾಕಷ್ಟು ಸಣ್ಣಪುಟ್ಟ ಕೆರೆಗಳು ಮಾಯವಾದರೆ ದೊಡ್ದ ಕೆರೆಗಳು ವಿಶಾಲ ಜಲ ಸಂಪತ್ತು ಹೊಂದಿದ್ದರೂ ಹೆಚ್ಚು ಕಾಲ ಅಂತರ್ಜಲ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿವೆ. ಕೆರೆಯ ತುಂಬ ಹೂಳು ತುಂಬಿ ನೀರು ಸಂಗ್ರಹ ಸಾಮರ್ಥ್ಯವೂ ಕುಠಿತವಾಗಿದೆ.

    ಕಾರ್ಕಳ ತಾಲೂಕಿನಲ್ಲಿ ಒಟ್ಟು 152 ಕೆರೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ಬೆರಳೆಣಿಕೆ ಕೆರೆಗಳ ಹೂಳೆತ್ತಲಾಗಿದ್ದರೂ, ಸರ್ಕಾರದ ಅನುದಾನ ಸೂಕ್ತ ರೀತಿಯಲ್ಲಿ ಸದ್ಭಳಕೆಯಾಗಿದೆ ಎನ್ನುವ ಮಟ್ಟಕ್ಕೆ ತೃಪ್ತಿಕರವಾಗಿಲ್ಲ. ಒಟ್ಟು 126 ಎಕರೆ ಪ್ರದೇಶದಲ್ಲಿರುವ 152 ಕೆರೆಗಳು ತಾಲೂಕಿಗೆ ನಿರೀಕ್ಷಿತ ಮಟ್ಟದಲ್ಲಿ ಅಂತರ್ಜಲ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

    ಅಂತರ್ಜಲ ಕುಸಿತ

    ಹಿಂದಿನ ವರ್ಷಗಳಿಗೆ ಮಳೆಗಾಲದಲ್ಲಿ ಎರಡು ಮೂರು ತಿಂಗಳಲ್ಲಿ ಗುಡ್ಡ, ತೋಡುಗಳಲ್ಲಿ ಹರಿದು ಕೆರೆ ಸೇರುತ್ತಿದ್ದ ನೀರು ಕೆರೆಯಲ್ಲಿ ಸಂಗ್ರಹಗೊಂಡು ವರ್ಷದುದ್ದಕ್ಕೂ ಬಳಕೆಗೆ ಯೋಗ್ಯವಾಗಿತ್ತು, ಆದರೆ ಇತ್ತಿಚೀನ ದಿನಗಳಲ್ಲಿ ಬೇಸಿಗೆ ಬಿಸಿಗೆ ಕೆರೆಗಳು ಕೂಡ ಬಹುಬೇಗನೆ ಬತ್ತುವ ಸ್ಥಿತಿ ನಿರ್ಮಾಣಗೊಂಡಿದೆ. ಬೆರಳೆಣಿಕೆಯ ಕೆರೆಗಳು ಮಾತ್ರ ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರದಿಂದ ಅಭಿವೃದ್ಧಿ ಕಂಡಿದೆ. ಮುಂದೆ ತಾಲೂಕಿನ ಎಲ್ಲ ಕೆರೆಗಳು ಸರಿಯಾದ ವೇಳೆಗೆ ಹೂಳು ತೆಗೆದು ನಿರ್ವಹಣೆಗೊಂಡಲ್ಲಿ ತಾಲೂಕಿನ ಅಂತರ್ಜಲ ವೃದ್ಧಿಗೆ ಪ್ರಮುಖ ಕಾರಣವಾಗುತ್ತದೆ.

    ಅಭಿವೃದ್ಧಿಗೊಂಡ ಕೆರೆಗಳು

    ಕಾರ್ಕಳದ ನಗರ ಭಾಗದಲ್ಲಿರುವ ಅಪಾರ ಜಲಸಂಪತ್ತು ಹೊಂದಿರುವ ಆನೆಕೆರೆ 24.91 ಎಕರೆ ವಿಸ್ತೀರ್ಣವಿದೆ. ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆದಿದೆ. ಸುತ್ತಲೂ ವಾಕಿಂಗ್ ಟ್ರಾೃಕ್ ನಿರ್ಮಿಸಲಾಗಿದೆ. ಅಭಿವೃದ್ಧಿ ಜತೆಯಲ್ಲಿ ಅತಿಕ್ರಮಣದಿಂದ ಕೆರೆಯ ಗಾತ್ರ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದೆ. ಕಾರ್ಕಳ ಪೇಟೆಗೆ ದೊಡ್ಡ ಆಸರೆಯಾಗಿರುವ ರಾಮ ಸಮುದ್ರ ಕೆರೆಯೂ 46.85 ಎಕರೆ ವಿಸ್ತೀರ್ಣ ಹೊಂದಿರುವ ದೊಡ್ಡ ಕೆರೆಯಾಗಿದೆ. ನಗರ ಭಾಗಕ್ಕೆ ಇದು ಪ್ರಮುಖ ಜಲಮೂಲವಾಗಿದೆ. ಈ ಕೆರೆ ಅಭಿವೃದ್ಧಿಯ ಕಾಮಗಾರಿ ನಡೆಯಬೇಕಾಗಿದೆ. ಕಾರ್ಕಳದ ಸ್ವಚ್ಛ ಭಾರತ್ ತಂಡ ರಾಮಸಮುದ್ರವನ್ನು ಶ್ರಮದಾನದ ಮೂಲಕ ಶುಚಿಗೊಳಿಸಿದೆ, ಆದರೆ ಸರ್ಕಾರ ಈವರೆಗೆ ಅಭಿವೃದ್ಧಿ ಪಡಿಸುವ ಕೆಲಸ ಮಾಡಿಲ್ಲ.

    ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ನಗರದ ನಾಗರಬಾವಿ ಹಾಗೂ ದೇವಳದ ಹಲವು ಕೆರೆಗಳು ಅಭಿವೃದ್ಧಿ ಕಂಡಿದೆ. ಆನೆಕೆರೆ ಬಳಿಯ ಸಿಗಡಿಕೆರೆ 5.99 ಎಕರೆ ವಿಸ್ತೀರ್ಣ ಹೊಂದಿದ್ದು ಒಂದು ಕಾಲದಲ್ಲಿ ಹೂಳು ತುಂಬಿ ನೀರು ಸಂಗ್ರಹ ಸಾಮರ್ಥ್ಯ ಕುಠಿತವಾಗಿತ್ತು, 2016-17ರಲ್ಲಿ ಶಾಸಕ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ, ಸಮಗ್ರ ಅಭಿವೃದ್ಧಿ ಕಂಡಿದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಸಹಭಾಗಿತ್ವದಲ್ಲಿ ಕೆರ್ವಾಶೆ ಮತ್ತು ಕುಕ್ಕುಂದೂರಿನ ಕೆರೆಗಳು, ಸರ್ಕಾರದ ಅನುದಾನದಿಂದ ನಲ್ಲೂರು ಮತ್ತು ಹಿರ್ಗಾನದ ಹರಿಯಪ್ಪನ ಕೆರೆಗಳು ಸೇರಿದಂತೆ ಇತರ ಗ್ರಾಮಗಳಲ್ಲಿರುವ ಹಲವು ಕೆರೆಗಳು ಅಭಿವೃದ್ಧಿ ಕಂಡಿದೆ.

    ಕೆರೆಗಳ ವಿಸ್ತೀರ್ಣ

    ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸಮೃದ್ಧ ಜಲ ಸಂಪತ್ತು ಹೊಂದಿರುವ 17 ಕೆರೆಗಳಿವೆ. ಈ ಪೈಕಿ ಒಂದಷ್ಟು ಅಭಿವೃದ್ಧಿಗೊಂಡರೆ ಇನ್ನೂ ಹಲವು ಕೆರೆಗಳು ಕಾಯಕಲ್ಪಕ್ಕೆ ಕಾಯುತ್ತಿದೆ. ತಾಲೂಕಿನ ಆನೆಕೆರೆ ಬಳಿಯ ಸಿಗಡಿಕೆರೆ 5.99 ಎಕರೆ, ಆನೆಕೆರೆ 24.91, ರಾಮಸಮುದ್ರ 46.85, ಉಮಾಮಹೇಶ್ವರ ದೇವಳದ ಕೆರೆ 0.73, ಗಾಂಧಿ ಮೈದಾನ ಬೈಲು ಕೆರೆ 0.10, ವಿನಾಯಕಬೆಟ್ಟು ದೇವಳ ಬಳಿಯ ಕೆರೆ 0.70, ಮರ್ತಪ್ಪ ಶೆಟ್ಟಿ ಕಾಲನಿ ಕೆರೆ 0.18, ಹಾತಾವು ಕೆರೆ 0.47, ಮಹಾಲಿಂಗೇಶ್ವರ ದೇವಳ ಕೆರೆ 0.35, ಕೋರ್ಟು ಸಮೀಪದ ಪದೋಳಿ 0.26, ಮಠದ ಬೆಟ್ಟು(ಭಾರತ್ ಬೀಡಿ) 0.16, ಕಾಬೆಟ್ಟು ಶಾಲಾ ಬಳಿಯ ಕೆರೆ 0.27, ತಾವರೆಕೆರೆ 7.98, ಮತ್ತು ನಾಗರಬಾವಿ 0.40, ಹಿರಿಯಂಗಡಿ ಕೆರೆ 0.40, ಹಿರಿಯಂಗಡಿ ಕೇಶವ ಹೌಸ್ ಬಳಿಯ ಕೆರೆ 0.27 ಎಕರೆ ವಿಸ್ತೀರ್ಣ ಹೊಂದಿದೆ.

    ತಾಲೂಕಿನಲ್ಲಿರುವ ಕೆರೆಗಳು

    ಕಾರ್ಕಳ ತಾಲೂಕಿನಲ್ಲಿ ಒಟ್ಟು 152 ಕೆರೆಗಳಿದ್ದು, 126.27 ಎಕರೆ ವಿಸ್ತೀರ್ಣ ಹೊಂದಿವೆ. ಬೆಳ್ಮಣ್ ಗ್ರಾಮದಲ್ಲಿ-3, ದುರ್ಗ-3, ರೆಂಜಾಳ-3, ಸಾಣೂರು-4, ಸೂಡ-8, ಎಳ್ಳಾರೆ-2, ಹಿರ್ಗಾನ-3, ಇನ್ನ-23, ಕಡ್ತಲ-1, ಕಲ್ಯಾ-7, ಬೋಳ-16, ಕಣಜಾರು-1, ಇರ್ವತ್ತೂರು-3, ಕೆರ್ವಾಶೆ-1, ಕಾಂತಾವರ-2, ಕಾರ್ಕಳ ಪುರಸಭಾ ವ್ಯಾಪ್ತಿ-17, ಕೆದಿಂಜೆ-1, ಕೌಡೂರು-5, ಕುಕ್ಕುಜೆ-4, ಕುಕ್ಕುಂದೂರು-7, ಮಾಳ-1, ಮರ್ಣೆ-2, ಮುಂಡೂರು-9, ನಂದಳಿಕೆ-7, ನೀರೆ-2, ನಿಂಜೂರು-1, ನೂರಾಲ್‌ಬೆಟ್ಟು-2, ಪಳ್ಳಿ-2, ಮಿಯ್ಯರು-5, ಮುಡಾರು-2 ಕೆರೆಗಳಿವೆ.


    ರಾಮಸಮುದ್ರದ ಹೂಳೆತ್ತಿ ಅಭಿವೃದ್ಧಿಪಡಿಸಿದಲ್ಲಿ ಕಾರ್ಕಳ ಜನತೆಗೆ ಅತಿ ದೊಡ್ಡ ಜಲಸಂಪನ್ಮೂಲ ಒದಗಿಸಲು ಸಾಧ್ಯವಾಗುತ್ತದೆ. ಪುರಸಭೆ ವ್ಯಾಪ್ತಿಯ ಹಲವು ಕೆರೆಗಳ ಹೂಳೆತ್ತುವ ಕಾರ್ಯ ಈಗಾಗಲೇ ಸರ್ಕಾರ ಹಾಗೂ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ನಡೆದಿದೆ. ಇನ್ನೂ ಕೆಲವೊಂದು ಕೆರೆಗಳ ಹೂಳೆತ್ತುವ ಕಾರ್ಯ ನಡೆಯಬೇಕಾಗಿದೆ.

    -ರೂಪಾ ಟಿ.ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts