More

    ನೆರೆಬೆಂಚಿಯಲ್ಲಿ ಹೆಚ್ಚಿದ ಜ್ವರ, ಮೈಕೈ ನೋವು

    ಕುಷ್ಟಗಿ: ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ಹಲವರು ಜ್ವರ, ಮೈಕೈ ನೋವಿನಿಂದ ಬಳಲುತ್ತಿದ್ದು, ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಹಲವು ದಿನಗಳಿಂದ ಸಮಸ್ಯೆ ಇದ್ದು, ತಾಲೂಕು ಆಡಳಿತ ಸ್ಪಂದಿಸದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

    ಗ್ರಾಮದ ಪ್ರತಿ ಮನೆಯಲ್ಲಿಯೂ ಒಬ್ಬರಿಗಾದರೂ ಜ್ವರ, ಮೈಕೈ ನೋವು ಕಾಣಿಸಿಕೊಳ್ಳುತ್ತಿದೆ. ನಿತ್ಯ ಆಸ್ಪತ್ರೆಗೆ ಅಲೆಯುತ್ತಿರುವ ಗ್ರಾಮಸ್ಥರಿಗೆ ಗ್ರಾಮದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಸಮಸ್ಯೆಗೆ ಕಾರಣವೇನೆಂಬುದನ್ನು ಪತ್ತೆ ಹಚ್ಚುವಲ್ಲಿ ಗ್ರಾಪಂ ಹಾಗೂ ತಾಲೂಕು ಆಡಳಿತ ವಿಫಲವಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

    ಇದನ್ನು ಓದಿ: ನಿಯಮಿತ ಆಹಾರ, ವ್ಯಾಯಾಮ ಆರೋಗ್ಯಕ್ಕೆ ಪೂರಕ

    ಶಿಸ್ತು ಕ್ರಮದ ಎಚ್ಚರಿಕೆ: ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ರವಿ ಎಸ್.ಅಂಗಡಿ, ರೋಗಿಗಳನ್ನು ವಿಚಾರಿಸಿ ಕೂಡಲೇ ಎಲ್ಲ ರೋಗಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿ ಆನಂದ ಗೋಟೂರ್‌ಗೆ ಸೂಚಿಸಿದರು. ನಂತರ ಮಾತನಾಡಿದ ತಹಸೀಲ್ದಾರ್ ರವಿ, ಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯ ಇರುವುದಿಲ್ಲ. ಹೀಗಾಗಿ ಎಲ್ಲ ರೋಗಿಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.

    ಕಾಯಿಲೆಗೆ ತುತ್ತಾಗುತ್ತಿರುವವರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಒಬ್ಬರಿಗೆ ಚಿಕೂನ್‌ಗುನ್ಯಾ ದೃಢವಾಗಿದೆ. ಇನ್ನುಳಿದಂತೆ ವೈರಲ್ ಫೀವರ್ ಎಂದು ಗುರುತಿಸಿರುವ ಆರೋಗ್ಯ ಇಲಾಖೆ ಜ್ವರಪೀಡಿತರಿಗೆ ಚಿಕಿತ್ಸೆ ನೀಡಲು ಮುಂದಾಗಿದೆ.

    ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚಿಸಲಾಗಿದೆ. ನಿರ್ಲಕ್ಷ್ಯ ಮುಂದುವರಿದರೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಲಾಗಿದೆ ಎಂದು ತಿಳಿಸಿದರು.

    ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ಗ್ರಾಮದಲ್ಲಿ ಮನೆ ಮಾಡಿದ ಮಲಿನತೆ ಹಾಗೂ ಗ್ರಾಮಸ್ಥರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಕುರಿತು ‘ಚಿಕೂನ್‌ಗುನ್ಯಾಕ್ಕೆ ಗ್ರಾಮಸ್ಥರು ತತ್ತರ’ ಶೀರ್ಷಿಕೆ ಅಡಿ ಜ.14ರಂದು ವಿಜಯವಾಣಿಯಲ್ಲಿ ವಿಸ್ತೃತ ವರದಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂಬಂಧ ಗ್ರಾಪಂ ಪಿಡಿಒ ಸೇರಿದಂತೆ ಯಾವುದೇ ಅಧಿಕಾರಿಗಳೂ ಸಹ ಗ್ರಾಮಕ್ಕೆ ಭೇಟಿ ನೀಡುವ ಸೌಜನ್ಯವನ್ನೂ ತೋರಲಿಲ್ಲ. ಸಮಸ್ಯೆ ಉಲ್ಬಣಗೊಂಡು ಸದ್ಯ ಇಡೀ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts