More

    ನಿಯಮಿತ ಆಹಾರ, ವ್ಯಾಯಾಮ ಆರೋಗ್ಯಕ್ಕೆ ಪೂರಕ

    ಎನ್.ಆರ್.ಪುರ: ನಿಯಮಿತ ಆಹಾರ, ವ್ಯಾಯಾಮ ಹಾಗೂ ದುಶ್ಚಟಗಳಿಂದ ದೂರವಿದ್ದರೆ ಕಾಯಿಲೆಯಿಂದ ಹೊರಬರಬಹುದು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ನರಸಿಂಹಮೂರ್ತಿ ಹೇಳಿದರು.

    ಪಟ್ಟಣದ ರಾಘವೇಂದ್ರ ಬಡಾವಣೆಯ ನಿವಾಸಿ ಅಸೋಸಿಯೇಷನ್‌ನ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ಕಾಯಿಲೆಗಳ ಕುರಿತು ಮಾಹಿತಿ ನೀಡಿದರು.
    ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಟೈಫಾಯಿಡ್, ಮಲೇರಿಯಾ, ಕ್ಷಯ ಮತ್ತಿತರ ರೋಗಗಳು ವೈರಸ್, ಬ್ಯಾಕ್ಟೀರಿಯಾ, ಕಲುಷಿತ ನೀರು, ಅಪೌಷ್ಟಿಕ ಆಹಾರ ಸೇವನೆಯಿಂದ ಬರುತ್ತವೆ. ಡೆಂೆ, ಚಿಕೂನ್‌ಗುನ್ಯಾ ರೋಗಗಳು ಸೊಳ್ಳೆ ಕಡಿತದಿಂದ ಬರುತ್ತವೆ. ಅಸಾಂಕ್ರಾಮಿಕ ರೋಗಗಳಾದ ಡಯಾಬಿಟಿಸ್, ಬಿಪಿ, ಪಾರ್ಶ್ವವಾಯು, ಕ್ಯಾನ್ಸರ್ ಕಾಯಿಲೆಗಳು ಒತ್ತಡ ಮತ್ತು ಜೀವನಶೈಲಿಯಿಂದ ಬರುತ್ತವೆ ಎಂದು ತಿಳಿಸಿದರು.
    ಈ ಹಿಂದೆ 50 ವರ್ಷದ ನಂತರ ಬರುತ್ತಿದ್ದ ಡಯಾಬಿಟಿಸ್ (ಮಧುಮೇಹ) ಕಾಯಿಲೆ ಈಗ 25 ವರ್ಷದೊಳಗಿನವರಿಗೂ ಬರುತ್ತಿದೆ. ಮಧುಮೇಹ ಕಾಯಿಲೆ ಬಂದಾಗ ಪ್ರತಿ ಮೂರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರತಿದಿನ 45 ನಿಮಿಷ ವ್ಯಾಯಾಮ, ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ನಿಯಂತ್ರಣಕ್ಕೆ ಬರುತ್ತದೆ ಎಂದರು.
    ಕ್ಯಾನ್ಸರ್ ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಸಂಪೂರ್ಣ ಗುಣಪಡಿಸಲು ಸಾಧ್ಯ. ಯಾವುದೇ ಕಾಯಿಲೆಗಳು ಬಂದಾಗ ಮನೆಮದ್ದು ಮಾಡುವುದಕ್ಕಿಂತ ಆರಂಭಿಕ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸಬೇಕು. ಕಾಯಿಲೆಯಿಂದ ಗುಣಮುಖವಾಗಲು ಸಮಯ ಬೇಕಾಗುತ್ತದೆ. ಇದಕ್ಕೆ ವೈದ್ಯರ ಮಾರ್ಗದರ್ಶನ ಪಡೆದು, ಔಷಧವನ್ನು ಸಮರ್ಪಕವಾಗಿ ತೆಗೆದುಕೊಳ್ಳಬೇಕು. ಯಾವುದೇ ಕಾಯಿಲೆಗಳ ಬಗ್ಗೆ ಇರುವ ತಪ್ಪು ಮಾಹಿತಿಯಿಂದ ಹೊರಬೇಕು. ಹರ್ಬಲ್ ಉತ್ಪನ್ನಗಳ ಬಗ್ಗೆ ಬರುವ ಜಾಹೀರಾತುಗಳಿಂದ ಎಚ್ಚರಿಕೆಯಿಂದ ಇರಬೇಕು. 13 ವರ್ಷ ವ್ಯಾಸಂಗ ಮಾಡಿ ವೈದ್ಯಕೀಯ ಪದವಿ ಪಡೆಯುವ ವೈದ್ಯರು ನೀಡುವ ಔಷಧಗಳನ್ನು ನಂಬಿಕೆಯಿಂದ ತೆಗೆದುಕೊಳ್ಳಬೇಕು. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಂದ ದೂರವಿದ್ದರೆ ಎಂತಹ ಕಾಯಿಲೆಗಳಿಂದಲೂ ಹೊರಬರಬಹುದು ಎಂದ ಸಲಹೆ ನೀಡಿದರು.
    ಪಪಂ ಸ್ಥಾಯಿಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ನಿವಾಸಿ ಅಸೋಸಿಯೇಷನ್‌ನ ಸಮುದಾಯ ಭವನಕ್ಕೆ ನಿವೇಶನ ಗುರುತಿಸಲಾಗಿದೆ. ಶಾಸಕರು ಶೀಘ್ರವೇ ಶಂಕುಸ್ಥಾಪನೆ ನೆರವೇರಿಸುವರು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೊಸದಾಗಿ ಕೊಳವೆಬಾವಿ ಕೊರೆಸಲು ಅನುದಾನ ಬಿಡುಗಡೆಯಾಗಿದೆ ಎಂದರು.
    ನಿವಾಸಿ ಅಸೋಸಿಯೇಷನ್ ಸದಸ್ಯ ಗುಣಪಾಲ್‌ಜೈನ್ ಮಾತನಾಡಿ, ರಾಘವೇಂದ್ರ ಬಡಾವಣೆಯಲ್ಲಿ ಜಾತಿ, ಧರ್ಮ ತಾರತಮ್ಯವಿಲ್ಲದೆ ವಾಸಿಸುತ್ತಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಪ್ರತ್ಯೇಕ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ, ಉದ್ಯಾನ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.
    ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕಪಡೆದಿದ್ದ ಬಡಾವಣೆಯ ಅನ್ವಿತ್ ಶೆಟ್ಟಿ, ಅಮೋಘ ಅಂಟೋನಿ ಅವರನ್ನು ಪುರಸ್ಕರಿಸಲಾಯಿತು. ಪಪಂ ಸದಸ್ಯೆ ರೇಖಾ, ಅಸೋಸಿಯೇಷನ್ ಗೌರವಾಧ್ಯಕ್ಷ ಜಿ.ಎಚ್.ಸುಂದರೇಶ್, ಅಧ್ಯಕ್ಷೆ ಶೀಲಾ ಸುಂದರೇಶ್, ಕಾರ್ಯದರ್ಶಿ ಸವಿತಾ ದಕ್ಷಿಣಾಮೂರ್ತಿ, ಹಿರಿಯರಾದ ನಾಗಭೂಷಣ್, ರಾಮಕೃಷ್ಣ, ಸವಿನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts