More

    ದೇಶಕ್ಕಾಗಿ ಉತ್ತಮ ಕೆಲಸ ಮಾಡೋಣ: ಮಾಜಿ ಶಾಸಕ ಎಂ.ವಿ.ನಾಗರಾಜ್ ಕರೆ

    ನೆಲಮಂಗಲ: ದೇಶಕ್ಕಾಗಿ ರಕ್ತ ಹರಿಸುವುದು ಬೇಡ. ಬದಲಾಗಿ ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುವ ಸಂಕಲ್ಪ ಮಾಡಬೇಕಿದೆ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜ್ ಅಭಿಪ್ರಾಯಪಟ್ಟರು.


    ಭಾರತ ವಿಭಜನೆಗೊಂಡ ಕರಾಳ ದಿನದ ಅಂಗವಾಗಿ ನಗರದಲ್ಲಿ ತಾಲೂಕು ಬಿಜೆಪಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಮೌನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ್ಯೋತ್ಸವೆಂದರೆ ಒಂದು ದಿನ ಧ್ವಜ ಹಾರಿಸಿ ಸುಮ್ಮನಾಗುವುದಲ್ಲ. ದೇಶದ ಸ್ವತಂತ್ರಕ್ಕಾಗಿ ಹೋರಾಟ ಮಾಡಿ ಪ್ರಾಣಬಿಟ್ಟ ಮಹನೀಯರನ್ನು ನಿತ್ಯವೂ ಸ್ಮರಿಸುವ ಅಗತ್ಯವಿದೆ ಎಂದರು.

    ಮಳೆಗಾಳಿಯೆನ್ನದೆ, ಜೀವದ ಹಂಗು ತೊರೆದು ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ಧೈರ್ಯ ತುಂಬುವ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ಅರ್ಥ ತಂದುಕೊಡಬೇಕಿದೆ. ಜಗತ್ತು ಬೆರಗಾಗುವ ರೀತಿಯಲ್ಲಿ ದೇಶವನ್ನು ಪರಮೋಚ್ಚ ಸ್ಥಿತಿಗೆ ಕೊಂಡೊಯ್ಯುವ ಮೂಲಕ ಭಾರತವನ್ನು ಜಗದ್ಗುರುವನ್ನಾಗಿಸುವ ನಿಟ್ಟಿನಲ್ಲಿ ವಿವೇಕಾನಂದರು ಕಂಡಿದ್ದ ಕನಸನ್ನು ನನಸು ಮಾಡಬೇಕು ಎಂದರು.

    ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ ಮಾತನಾಡಿ, ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು. ಸ್ವಾರ್ಥಿಗಳಾಗದೇ ದೇಶಾಭಿಮಾನಿಗಳ ಸಾಲಿಗೆ ಸೇರ್ಪಡೆಯಾಗಬೇಕು ಎಂದು ತಿಳಿಸಿದರು.

    ನಗರದ ವಿರ್ವರ್ಸ್‌ ಕಾಲನಿಯ ಶ್ರೀ ಚೌಡೇಶ್ವರ ದೇವಾಲಯದಿಂದ ಆರಂಭಗೊಂಡ ಪಂಜಿನ ಮೌನ ಮೆರವಣಿಗೆ ತಾಲೂಕು ಕಚೇರಿವರೆಗೆ ನಡೆಸಲಾಯಿತು.
    ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್.ರಾಮ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಸೌಮ್ಯಾ, ನಗರಸಭೆ ಹೆಚ್ಚುವರಿ ಕೌನ್ಸಿಲರ್‌ಗಳಾದ ಅಂಜಿನಮೂರ್ತಿ, ಮುನಿರಾಜು, ನಾಮನಿರ್ದೇಶಿತ ಸದಸ್ಯರಾದ ಎಂ.ರವಿ, ರಾಜಮ್ಮ, ಕೆ.ವಸಂತ್, ಚಂದ್ರಶೆಟ್ಟಿ, ಬಿಜೆಪಿ ತಾಲೂಕು ಪ್ರ.ಕಾರ್ಯದರ್ಶಿ ಮಂಜುನಾಥ್, ನಗರ ಘಟಕ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸೈಯದ್ ಅಹ್ಮದ್, ತಾಲೂಕು ಯುವಮೋರ್ಚಾ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡ ರಾಮಕೃಷ್ಣಪ್ಪ, ಡಿ.ಸಿದ್ದರಾಜು, ಸ್ಟುಡಿಯೋಮಂಜುನಾಥ್, ಅರಿಶಿಣಕುಂಟೆರವಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts