More

    ಮಸ್ಟರಿಂಗ್ ಕೇಂದ್ರಗಳಿಗೆ ಡಿಸಿ ಭೇಟಿ


    ಬೆಂ. ಗ್ರಾಮಾಂತರ
    ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಮತಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಗಳನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯವು ಮಂಗಳವಾರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಿತು.
    ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಮತಗಟ್ಟೆ ಬಂದೋಬಸ್ತ್‌ಗಾಗಿ ನಿಯೋಜಿತಗೊಂಡಿರುವ ಪೊಲೀಸರು ಹಾಗೂ ಗೃಹ ರಕ್ಷಕದಳದ ಸಿಬ್ಬಂದಿ ಕರೆದುಕೊಂಡು ಹೋಗಲು ಆಯಾ ಮಸ್ಟರಿಂಗ್ ಕೇಂದ್ರಗಳ ಆವರಣದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಚುನಾವಣಾ ಪ್ರಕ್ರಿಯೆಗೆ ನೇಮಿಸಲಾದ ಅಧಿಕಾರಿಗಳು, ಸಿಬ್ಬಂದಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ, ಬಸ್‌ಗಳ ವಿವರ ತಿಳಿಸಲು ಹಾಗೂ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆ ವಿತರಿಸಲು ಕೊಠಡಿ ಸ್ಥಾಪಿಸಲಾಗಿತ್ತು. ಆ ಮೂಲಕ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯಿತು. ಯಾವುದೇ ಅಧಿಕಾರಿ, ಸಿಬ್ಬಂದಿಗೆ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮಸ್ಟರಿಂಗ್ ಕಾರ್ಯಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಕೈಗೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು. ಮೇ 10ರ ಮತದಾನ ದಿನದಂದು ಮತಗಟ್ಟೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ, ಸಿಬ್ಬಂದಿ ಮಂಗಳವಾರ ಬೆಳಗ್ಗೆ ಮಸ್ಟರಿಂಗ್ ಕೇಂದ್ರಗಳಿಗೆ ಹಾಜರಾಗಿದ್ದರು. ನಂತರ ಮತಗಟ್ಟೆಗಳಿಗೆ ತೆರಳಲು ಕಲ್ಪಿಸಲಾಗಿದ್ದ ಬಸ್‌ಗಳಲ್ಲಿ ಚುನಾವಣಾ ಸಾಮಗ್ರಿಗಳೊಂದಿಗೆ ಸಂಬಂಧಿಸಿದ ಮತಗಟ್ಟೆಗಳಿಗೆ ಸಂಜೆ 4ರವೇಳೆಗೆ ತೆರಳಿದರು.
    ಡಿಸಿಯಿಂದ ಸಲಹೆ ಸೂಚನೆ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದೇವನಹಳ್ಳಿ ಟೌನ್‌ನ ಬಿಬಿ ರಸ್ತೆಯ, ಹೊಸ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಸ್ಟರಿಂಗ್ ಕೇಂದ್ರ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಬಳ್ಳಾಪುರ ತಾಲೂಕು ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಭೇಟಿ ನೀಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು, ಸಿಬ್ಬಂದಿಗೆ ಅಗತ್ಯ ಸಲಹೆ-ಸೂಚನೆ ನೀಡಿದರು.
    ಸಾಮಗ್ರಿಗಳೊಂದಿಗೆ ಹಾಜರಾದ ಸಿಬ್ಬಂದಿ: ಜಿಲ್ಲೆ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಗದಿತ ಮಸ್ಟರಿಂಗ್ ಕೇಂದ್ರಗಳಿಗೆ ಮಂಗಳವಾರ ಚುನಾವಣಾ ಸಿಬ್ಬಂದಿ ಚುನಾವಣಾ ಸಾಮಗ್ರಿಗಳೊಂದಿಗೆ ಬಂದಿಳಿದರು. ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಚುನಾವಣಾ ಸಿಬ್ಬಂದಿಗೆ ಮತದಾನ ಪ್ರಕ್ರಿಯೆ ಸಂಬಂಧ ಮಾರ್ಗದರ್ಶನ ಮಾಡಿದರು.
    8,77,890 ಮತದಾರರು: ಜಿಲ್ಲೆಯಲ್ಲಿ 4,35,835 ಪುರುಷ, 4,41,907 ಮಹಿಳಾ ಮತದಾರರು ಹಾಗೂ 148 ಇತರ ಮತದಾರರು ಸೇರಿ 8,77,890 ಮತದಾರರಿದ್ದಾರೆ. ಚುನಾವಣೆಯ ಅಂತಿಮ ಕಣದಲ್ಲಿ 6 ಮಹಿಳೆಯರು ಸೇರಿ 56 ಅಭ್ಯರ್ಥಿಗಳಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1137 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 879 ಹಾಗೂ ಗ್ರಾಮೀಣ ಪ್ರದೇಶದಲ್ಲಿ 258 ಮತಗಟ್ಟೆಗಳಿವೆ. ಜಿಲ್ಲೆಯ 1137 ಮತಗಟ್ಟೆಗಳಿಗೆ 1470 ಪಿಆರ್‌ಒ, 1499 ಎಪಿಆರ್‌ಒ, 2929 ಪಿಒ ಹಾಗೂ 285 ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts