More

    ವಿಪತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಲ್ಲದು

    ಹಾವೇರಿ: ನೆರೆ ಹಾವಳಿ ಅಥವಾ ಕೋವಿಡ್​ನಂತಹ ವಿಪತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇಂದಿನಿಂದಲೇ ಆಡಳಿತ ಶೈಲಿ ಬದಲಿಸಿಕೊಳ್ಳಿ ಎಂದು ಸಚಿವ ಬಿ.ಸಿ. ಪಾಟೀಲ ಅಧಿಕಾರಿಗಳಿಗೆ ಎಚ್ಚರಿಸಿದರು.

    ಜಿಪಂ ಸಭಾಭವನದಲ್ಲಿ ಶುಕ್ರವಾರ ಜಿಲ್ಲೆಯ ನೆರೆ ಪರಿಹಾರ ಹಾಗೂ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ನೆರೆ ಅನಾಹುತ ಸಂಭವಿಸಿದ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಬೇಕು. ಮುಖ್ಯಮಂತ್ರಿಗಳ ಕ್ಷೇತ್ರವಾಗಿರುವುದರಿಂದ ಸಣ್ಣಪುಟ್ಟ ಆಡಳಿತ ಲೋಪಗಳಾದರೆ ರಾಜ್ಯದ ಗಮನ ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಗಮನಹರಿಸಿ ಎಂದರು.

    ಕ್ರಿಮಿನಲ್ ಕೇಸ್: ಮೂಲಸೌಕರ್ಯಗಳ ತಾತ್ಕಾಲಿಕ ದುರಸ್ತಿಗೆ 3 ದಿನದೊಳಗಾಗಿ ಕ್ರಮವಹಿಸಬೇಕು. ತಕ್ಷಣವೇ ವಿಪತ್ತು ನಿರ್ವಹಣೆ ನಿಧಿಯಿಂದ ಅನುದಾನ ಬಿಡುಗಡೆಗೊಳಿಸಬೇಕು. ಬೆಳೆ ಹಾಗೂ ಮನೆಹಾನಿ ಸಮೀಕ್ಷೆಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಕೆಳಹಂತದ ಅಧಿಕಾರಿಗಳು ನಡೆಸಿದ ಸಮೀಕ್ಷೆಯನ್ನು ಮೇಲಾಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ನಷ್ಟ ಅನುಭವಿಸಿದ ನೈಜ ಫಲಾನುಭವಿಗಳು ಪರಿಹಾರದಿಂದ ವಂಚಿತವಾಗಬಾರದು. ನೆರೆ ಪರಿಹಾರ ಹಾಗೂ ಸಮೀಕ್ಷೆ ಕಾರ್ಯಗಳಲ್ಲಿ ಲೋಪ ಎಸಗಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಬೆಳೆ ಹಾಗೂ ಮನೆ ಹಾನಿಗೆ ಸರ್ಕಾರ ವಿತರಿಸುವ ಪರಿಹಾರದ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು ಎಂದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಮನೆ ಹಾನಿ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಜೂನ್​ನಿಂದ ಆಗಸ್ಟ್​ವರೆಗೆ 2,345 ಮನೆಗಳು ಹಾನಿಗೊಳಗಾಗಿವೆ. ಇದರಲ್ಲಿ 1,028 ಮನೆಗಳನ್ನು ಅಂಗೀಕರಿಸಲಾಗಿದೆ. ಈಗಾಗಲೇ 2.31ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಲೋಕೋಪಯೋಗಿ ಇಲಾಖೆಯ 63 ಕಿಮೀ ಹೆದ್ದಾರಿ, 182ಕಿಮೀ ಜಿಲ್ಲಾ ಮುಖ್ಯರಸ್ತೆಗಳು, 45 ಸೇತುವೆ ಸಿಡಿಗಳು ಹಾಳಾಗಿದ್ದು, 438ಕೋಟಿ ರೂ. ನಷ್ಟ ಉಂಟಾಗಿದೆ. ತುರ್ತು ರಿಪೇರಿಗೆ 16ಕೋಟಿ ರೂ. ಅವಶ್ಯಕತೆಯಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ 1,046ಕಿಮೀ ಗ್ರಾಮೀಣ ರಸ್ತೆ, 84 ಸೇತುವೆ, 116 ನೀರಿನ ಮೂಲಗಳು, ಟ್ಯಾಂಕ್​ಗಳು ಹಾನಿಯಾಗಿವೆ. ಮೂಲ ಸೌಕರ್ಯಗಳಿಗೆ ತುರ್ತಾಗಿ 9ಕೋಟಿ ರೂ. ಅವಶ್ಯವಿದೆ ಎಂದರು.

    ಬೆಳೆ ಹಾನಿ ಕುರಿತು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಹಾಗೂ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಲ್. ಪ್ರದೀಪ ಮಾಹಿತಿ ನೀಡಿ, ಜಿಲ್ಲೆಯಲ್ಲಿ 8,314ಹೆಕ್ಟೇರ್ ಬೆಳೆ ಹಾನಿಯಾಗಿದೆ. 5.8ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಳೆ ನಷ್ಟ ಕುರಿತು ಶನಿವಾರದೊಳಗಾಗಿ ಪೂರ್ಣ ಪ್ರಮಾಣದ ಸಮೀಕ್ಷೆ ಕೈಗೊಳ್ಳಲಾಗುವುದು. ಅಂದಾಜು 579ಲಕ್ಷ ಮೊತ್ತದ 1,588 ಹೆಕ್ಟೇರ್ ತೋಟಗಾರಿಕೆ ಬೆಳೆನಷ್ಟವಾಗಿದ್ದು, 229ಲಕ್ಷ ರೂ. ಪರಿಹಾರ ಪಾವತಿಗೆ ಅವಶ್ಯವಿದೆ. ಈಗಾಗಲೇ ಶೇ. 80ರಷ್ಟು ಜಂಟಿ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದರು.

    ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಎಸ್​ಪಿ ಹನುಮಂತರಾಯ, ಸಿಇಒ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

    ಕೋವಿಡ್ 3ನೇ ಅಲೆ ನಿರ್ವಹಣೆಯಲ್ಲಿ ಎಚ್ಚರ ವಹಿಸಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸೋಂಕಿತರು, ಶಂಕಿತರನ್ನು ಗೃಹ ಪ್ರತ್ಯೇಕತೆಯಲ್ಲಿ ಇರಿಸದೇ ಕಡ್ಡಾಯವಾಗಿ 10 ದಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು. ಪಾಸಿಟಿವ್ ಪ್ರಕರಣಗಳು ಕಡಿಮೆಯಿದ್ದರೂ ಕೋವಿಡ್ ಪರೀಕ್ಷೆಯನ್ನು 1,500ರಿಂದ 2,500ಕ್ಕೆ ಹೆಚ್ಚಿಸಬೇಕು. ಸ್ಥಳೀಯ ವೈದ್ಯರ ಬಳಿ ಜ್ವರ, ನೆಗಡಿಗೆ ಚಿಕಿತ್ಸೆ ಪಡೆದವರನ್ನು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಬೇಕು. ಮೆಡಿಕಲ್ ಶಾಪ್​ಗಳಲ್ಲಿ ವೈದ್ಯರ ಶಿಫಾರಸಿಲ್ಲದೇ ನೆಗಡಿ, ಕೆಮ್ಮು, ಜ್ವರಕ್ಕೆ ಔಷಧ ಕೊಡದಂತೆ ಕ್ರಮವಹಿಸಬೇಕು. ಮಕ್ಕಳ ವೆಂಟಿಲೇಟರ್, ವ್ಯಾಕ್ಸಿನೇಷನ್ ಹಾಗೂ ಹಳ್ಳಿವಾರು ಲಸಿಕಾ ವೇಳಾಪಟ್ಟಿ ಪ್ರಕಟಿಸಬೇಕು. ಕೋವಿಡ್​ನಿಂದ ಮೃತರಾದದವರಿಗೆ 1ಲಕ್ಷ ರೂ. ಪರಿಹಾರದ ಜತೆಗೆ ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರಕ್ಕೆ ಕ್ರಮವಹಿಸಿ.

    | ಬಿ.ಸಿ. ಪಾಟೀಲ, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts