More

    ಚತುಷ್ಪಥ ಕಾಮಗಾರಿ ಅಸಮರ್ಪಕ-ಹೋರಾಟಕ್ಕೆ ಸಜ್ಜಾದ ಅವರ್ಸಾ, ಹಟ್ಟಿಕೇರಿ ಭಾಗದ ಜನಪ್ರತಿನಿಧಿಗಳು

    ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ವಿಸ್ತರಣೆ ಕಾಮಗಾರಿ ಅಸಮರ್ಪಕವಾಗಿದ್ದು, ಹೆದ್ದಾರಿ ಅಕ್ಕಪಕ್ಕದ ನಿವಾಸಿಗಳಿಗೆ ಬಳಕೆದಾರರಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಆಡಳಿತ ವರ್ಗದಿಂದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಅಂಕೋಲಾ ಹಟ್ಟಿಕೇರಿ, ಅವರ್ಸಾ ಗ್ರಾಪಂ ಸದಸ್ಯರು, ಆ ಭಾಗದ ಮುಖಂಡರು ತಿಳಿಸಿದ್ದಾರೆ.

    ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾವು ಈ ಬಗ್ಗೆ ಗ್ರಾಪಂನಲ್ಲಿ ಸಾಕಷ್ಟು ಬಾರಿ ಚರ್ಚಿಸಿದ್ದೇವೆ. ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಬಳಿ ದೂರಿ ಸೋತಿದ್ದೇವೆ. ಆದರೆ, ಯಾವುದೇ ಸ್ಪಂದನೆ ದೊರೆಯದ ಕಾರಣ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.

    ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಮಾತನಾಡಿ, ಕಾರವಾರದಿಂದ ಭಟ್ಕಳವರೆಗೆ ಚತುಷ್ಪಥ ಕಾಮಗಾರಿ ಅಸಮರ್ಪಕವಾಗಿದೆ. ಹಲವೆಡೆ ವಿದ್ಯುತ್ ದೀಪಗಳಿಲ್ಲ. ಇನ್ನೂ ಕೆಲವೆಡೆ ಗುಡ್ಡ ಕುಸಿಯುತ್ತಿದೆ. ಗುಡ್ಡ ಪ್ರದೇಶದಲ್ಲಿ ನಗರದ ನಡುವೆ ಕಾಮಗಾರಿ ಮುಕ್ತಾಯವಾಗಿಲ್ಲ. ಐಆರ್‌ಬಿ ಕಂಪನಿ ಟೋಲ್ ವಸೂಲಿ ಶುರು ಮಾಡಿ ಮೂರು ವರ್ಷ ಕಳೆದಿದೆ. ಇದೊಂದು ವಸೂಲಿಯ ಕೇಂದ್ರವಾಗಿದೆ ಎಂದು ಆರೋಪಿಸಿದರು.
    ಹಟ್ಟಿಕೇರಿ ಗ್ರಾಪಂ ಅಧ್ಯಕ್ಷೆ ನಿಶಾ ನಾಗರಾಜ ನಾಯ್ಕ, ಹಟ್ಟಿಕೇರಿಯಲ್ಲಿ ಬಸ್ ನಿಲ್ದಾಣ ವ್ಯವಸ್ಥೆಯನ್ನು ಚತುಷ್ಪಥ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ಮಾಡಿಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಅವರ್ಸಾ ಗ್ರಾಪಂ ಸದಸ್ಯ ಮಾರುತಿ ನಾಯ್ಕ ಮಾತನಾಡಿ, ಅವರ್ಸಾ ಗ್ರಾಪಂ ಬಸ್ ನಿಲ್ದಾಣ ನಿರ್ಮಾಣಕ್ಕೆ ಗ್ರಾಪಂನಿಂದ 2 ಗುಂಟೆ ಜಾಗ ಬಿಟ್ಟುಕೊಡಲಾಗಿದೆ. ಆದರೆ, ಐಆರ್‌ಬಿ ಕಂಪನಿ ಅಲ್ಲಿ ಮಣ್ಣು ತುಂಬಿ ಇಟ್ಟಿದೆ ಎಂದರು.
    ಗ್ರಾಮದ ಪ್ರಮುಖ ವಿನೋದ ನಾಯ್ಕ ಮಾತನಾಡಿ, ಗ್ರಾಮದಲ್ಲಿ ಸಾಕಷ್ಟು ಮೀನು ಮಾರಾಟಗಾರರು, ವಿದ್ಯಾರ್ಥಿಗಳು ಹೆದ್ದಾರಿ ದಾಟುತ್ತಾರೆ. ಆದರೆ ಮೇಲ್ಸೇತುವೆ ಇಲ್ಲ. ಸರ್ವೀಸ್ ರಸ್ತೆ ಇಲ್ಲ. ನಡುವೆ ಅಳವಡಿಸಿದ ಎತ್ತರದ ಡಿವೈಡರ್‌ನಿಂದ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಕಾಣುತ್ತಿಲ್ಲ. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದರು.
    ಗ್ರಾಪಂ ಸದಸ್ಯರಾದ ಉಮೇಶ ಕಾಂಚನ್, ರಾಘು ನಾಯ್ಕ, ಶಾಂತಾ ಪುಟಾಡೊ, ಮಧು ಗೌಡ, ವಸಂತಿ ಗೌಡ, ಅನುರಾಧಾ ಎಸ್.ನಾಯ್ಕ, ಇಂದಿರಾ ಲಾಂಜೇಕರ್, ನೀಲೇಶ ನಾಯ್ಕ, ರಾಜು ಗೌಡ, ದರ್ಶನ ನಾಯ್ಕ, ಶಾಂತೇಶ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

    ಇದನ್ನೂ ಓದಿ: ಟನಲ್‌ ವಿಚಾರ ಸಚಿವ ಎಂಎಲ್ ಸಿ ಜಗಳಬಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts