More

    ಸಿಎಆರ್‌ಟಿ ಸೆಲ್ ಥೆರಪಿಯಿಂದ ಕ್ಯಾನ್ಸರ್ ಗುಣ: ನಾರಾಯಣ ಹೆಲ್ತ್ ವೈದ್ಯರ ಸಾಧನೆ

    ಬೆಂಗಳೂರು: ಲಿಂಫೋಮಾದಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದ 42 ವರ್ಷದ ವ್ಯಕ್ತಿಗೆ ನಗರದ ನಾರಾಯಣ ಹೆಲ್ತ್ ಸಿಟಿ ವೈದ್ಯರು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದ ಸಿಎಆರ್‌ಟಿ ಸೆಲ್ ಥೆರಪಿ ಒದಗಿಸಿದ್ದು, ರೋಗಿ ಈಗ ಚೇತರಿಸಿಕೊಂಡಿದ್ದಾರೆ.

    ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ರಕ್ತ ವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ. ಶರತ್ ದಾಮೋದರ್ ಮಾತನಾಡಿ, ಹಮ್ಜಾ ಖಾನ್ ಅವರಿಗೆ 2020ರಲ್ಲಿ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಆ ವೇಳೆ ಅವರಿಗೆ ಹಲವು ಸುತ್ತುಗಳ ಕಿಮೋಥೆರಪಿ ನೀಡಲಾಗಿತ್ತು. 2022ರ ಫೆಬ್ರವರಿಯಲ್ಲಿ ಮತ್ತೆ ಕ್ಯಾನ್ಸರ್ ಮರುಕಳಿಸಿತ್ತು. ಇದರ ನಡುವೆ ಅವರಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ಮತ್ತಷ್ಟು ಅಸ್ವಸ್ಥರಾಗಿದ್ದರು. ಇದರಿಂದ ಅವರಿಗೆ ಕಿಮೋಥೆರಪಿ ಹಾಗೂ ಕಾಂಡಕೋಶ ಕಸಿ ನಡೆಸಿದರೂ ಆರೋಗ್ಯದಲ್ಲಿ ಚೇತರಿಕೆಗೆ ಕಂಡುಬರಲಿಲ್ಲ. ಹಾಗಾಗಿ ಸಿಎಆರ್‌ಟಿ ಸೆಲ್ ಥೆರಪಿ ಒದಗಿಸಲಾಯಿತು. ಇದರಿಂದ ನಾಲ್ಕನೇ ಹಂತದ ಕ್ಯಾನ್ಸರ್ ಎದುರಿಸುತ್ತಿದ್ದ ಅವರು ಚೇತರಿಸಿಕೊಂಡಿದ್ದು, ಲಿಂಫೋಮಾದಂತಹ ಕ್ಯಾನ್ಸರ್‌ಗಳಿಗೆ ಈ ಥೆರಪಿ ಪರಿಣಾಮಕಾರಿಯಾಗಿದೆ ಎಂದು ವಿವರಿಸಿದರು.

    ಈವರೆಗೂ ಕ್ಯಾನ್ಸರ್ ಮರುಕಳಿಸಿದಾಗ ಕಿಮೋಥೆರಪಿ ಮಾತ್ರ ಆಯ್ಕೆಯಾಗಿತ್ತು. ಸಂಶೋಧನೆಗಳ ಫಲವಾಗಿ ಈಗ ಇಮ್ಯುನೋಥೆರಪಿ ಆಯ್ಕೆಯಿದೆ. ಅದರಲ್ಲಿ ಬರುವ ಸಿಎಆರ್‌ಟಿ ಸೆಲ್ ಥೆರಪಿಯನ್ನು ನೀಡಲಾಗಿದೆ. ಇದು ಸರಾಸರಿ ಮೂರು ವಾರಗಳ ಥೆರಪಿಯಾಗಿದೆ. ವ್ಯಕ್ತಿ ಚೇತರಿಸಿಕೊಂಡು ಒಂದೂವರೆ ವರ್ಷವಾಗಿದ್ದು, ಈ ಅವಧಿಯಲ್ಲಿ ವ್ಯಕ್ತಿಗೆ ಕ್ಯಾನ್ಸರ್ ಮರುಕಳಿಸಿಲ್ಲ ಎಂದು ತಿಳಿಸಿದರು.

    ಈ ವಿಧಾನದಲ್ಲಿ ರೋಗಿಯ ಬಿಳಿ ರಕ್ತಕಣವನ್ನು ಹೊರತೆಗೆದು ಸಂಸ್ಕರಣೆ ಮಾಡಲಾಗುತ್ತದೆ. ಕ್ಯಾನ್ಸರ್ ಕೋಶಗಳನ್ನು ಗುರುತಿಸಿ, ನಾಶಗೊಳಿಸುವಂತೆ ಅದರ ವಂಶವಾಹಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಥೆರಪಿಗೆ ಸ್ವದೇಶಿ ವಿಧಾನ ಅನುಸರಿಸಿದ್ದರಿಂದ ಅಮೆರಿಕಕ್ಕೆ ಹೋಲಿಸಿದರೆ ಹತ್ತನೇ ಒಂದು ಭಾಗದಷ್ಟು ವೆಚ್ಚ ಕಡಿಮೆಯಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts