More

    ವೈಭವದಿಂದ ನೆರವೇರಿದ ನರಸಿಂಹ ಜಯಂತಿ

    ಮೇಲುಕೋಟೆ: ಕರ್ನಾಟಕದ ಪ್ರಖ್ಯಾತ ನರಸಿಂಹನ ಸನ್ನಿಧಿಯಲ್ಲೊಂದಾದ ಮೇಲುಕೋಟೆ ಯೋಗನರಸಿಂಹಸ್ವಾಮಿ ಬೆಟ್ಟದ ದೇಗುಲದಲ್ಲಿ ಬುಧವಾರ ನರಸಿಂಹ ಜಯಂತಿ ವೈಭವದಿಂದ ನೆರವೇರಿತು. ಸಹಸ್ರಾರು ಭಕ್ತರು ಭವ್ಯವಾಗಿ ಅಲಂಕೃತನಾದ ಯೋಗನರಸಿಂಹಸ್ವಾಮಿ ದರ್ಶನ ಪಡೆದರು.

    ನರಸಿಂಹ ಜಯಂತಿ ಪ್ರಯುಕ್ತ ಬೆಟ್ಟದ ದೇವಾಲಯದ ಗರ್ಭಾಂಕಣ ಮತ್ತು ಸುಕನಾಸಿಯ ಚಾವಣಿಯನ್ನು ಫಲವಸ್ತ್ರದಿಂದ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು. ನರಸಿಂಹಾವತಾರ ಅವಿರ್ಭವಿಸಿದ ವೈಶಾಖ ಶುಕ್ಲ ಚತುರ್ದಶಿ ಸ್ವಾತಿ ನಕ್ಷತ್ರದ ಅಂಗವಾಗಿ ಯೋಗಾನರಸಿಂಹಸ್ವಾಮಿಗೆ ಹಾಲು, ಮೊಸರು, ಜೇನು ಮುಂತಾದ ಮಂಗಳ ದ್ರವ್ಯವಗಳಿಂದ ವೇದಮಂತ್ರಗಳೊಂದಿಗೆ ಮಹಾಭಿಷೇಕ ನೆರವೇರಿಸಿ, ಮಳೆ, ಬೆಳೆ ಸಂಮೃದ್ಧಿಯಾಗಿ ನಾಡಿನಲ್ಲಿ ಸುಭೀಕ್ಷ ಉಂಟಾಗಲಿ ಎಂದು ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಲಾಯಿತು.

    ಸಂಜೆ ದಿವ್ಯಪ್ರಬಂಧ ಪಾರಾಯಣ ಶಾತ್ತುಮೊರೆ ಮಹಾಮಂಗಳಾರತಿ ನೆರವೇರಿತು. ಇದಾದ ನಂತರ ಚೆಲುವನಾರಾಯಣಸ್ವಾಮಿಗೆ ನರಸಿಂಹಾವತಾರ ಉತ್ಸವ ವೈಭವದಿಂದ ನೆರವೇರಿತು. ಜತೆಗೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಮ್ಮಾಳ್ವಾರ್ ತಿರುನಕ್ಷತ್ರ ಮಹೋತ್ಸವ ಸಹ ವೈಭವದಿಂದ ಆಚರಿಸಲಾಯಿತು.

    ಕಲ್ಯಾಣಿಯ ತೀರದಲ್ಲಿ ಬೆಟ್ಟದ ಮೇಲೆ ನಿರ್ಮಾಣವಾಗಿರುವ ದೇಗುಲದಲ್ಲಿ ಸಾಲಿಗ್ರಾಮ ಶಿಲೆಯಲ್ಲಿ ಮೂಡಿರುವ ಯೋಗನರಸಿಂಹಸ್ವಾಮಿಯನ್ನು ಭಕ್ತಪ್ರಹ್ಲಾದ ಆರಾಧಿಸಿದ ಎಂಬ ಪ್ರತೀತಿಯಿದೆ. ಶಿಥಿಲಾವಸ್ಥೆಯಲ್ಲಿದ್ದ ವಿಜಯನಗರ ಶೈಲಿಯ ರಾಜಗೋಪುರವನ್ನು ನವೀಕರಿಸಿ ಪಂಚ ಕಳಸಗಳನ್ನು ಅಳವಡಿಸಲಾಗಿದೆ. ಬೆಟ್ಟದ ಯೋಗಾನರಸಿಂಹಸ್ವಾಮಿ ದೇಗುಲದ ದೃಶ್ಯ ಮೇಲುಕೋಟೆಯ ಸೌಂಧರ್ಯಕ್ಕೆ ಕಳಸಪ್ರಾಯವಾಗಿದ್ದು, ದಿನನಿತ್ಯ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತಿದೆ. ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ನರಸಿಂಹ ಜಯಂತಿಯ ಕಾರ್ಯಕ್ರಮಗಳು ಬುಧವಾರ ಸಂಪನ್ನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts