More

    ಜಪಾನ್ ಟೆನಿಸ್ ತಾರೆ ನವೊಮಿ ಒಸಾಕಾ ಯುಎಸ್ ಓಪನ್ ಒಡತಿ

    ನ್ಯೂಯಾರ್ಕ್: ಜಪಾನ್‌ನ ಯುವ ತಾರೆ ನವೊಮಿ ಒಸಾಕಾ, ಕರೊನಾ ಕಾಲದ ಗ್ರಾಂಡ್ ಸ್ಲಾಂ ಟೂರ್ನಿಯ ಮೊದಲ ಮಹಿಳಾ ಸಿಂಗಲ್ಸ್ ಚಾಂಪಿಯನ್ ಎನಿಸಿದ್ದಾರೆ. 22 ವರ್ಷದ ಒಸಾಕಾ ಖಾಲಿ ಖಾಲಿಯಾಗಿದ್ದ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ನಂ. 1 ಬೆಲಾರಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಹೋರಾಟಯುತ ಗೆಲುವು ದಾಖಲಿಸಿದರು. ಈ ಮೂಲಕ ಒಸಾಕಾ 2ನೇ ಯುಎಸ್ ಓಪನ್ ಮತ್ತು ವೃತ್ತಿಜೀವನದ 3ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡರು. ಮತ್ತೊಂದೆಡೆ, ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ 4ನೇ ‘ಅಮ್ಮ’ ಎನಿಸುವ ಹಂಬಲದಲ್ಲಿದ್ದ ಅಜರೆಂಕಾ ನಿರಾಸೆ ಅನುಭವಿಸಿದರು.

    ಒಂದು ಗಂಟೆ 53 ನಿಮಿಷಗಳ ಕಾಲ ಸಾಗಿದ ಜಿದ್ದಾಜಿದ್ದಿನ ಪ್ರಶಸ್ತಿ ಹೋರಾಟದಲ್ಲಿ 4ನೇ ಶ್ರೇಯಾಂಕಿತೆ ಒಸಾಕಾ 1-6, 6-3, 6-3ರಿಂದ ಅಜರೆಂಕಾಗೆ ಸೋಲುಣಿಸಿದರು. ಏಳೂವರೆ ವರ್ಷಗಳ ಬಳಿಕ ಗ್ರಾಂಡ್ ಸ್ಲಾಂ ಜಯಿಸುವ ತವಕದಲ್ಲಿದ್ದ 31 ವರ್ಷದ ಅಜರೆಂಕಾ ಮೊದಲ ಸೆಟ್‌ಅನ್ನು ಅರ್ಧಗಂಟೆಯಲ್ಲೇ ಜಯಿಸಿದರು. ಅಲ್ಲದೆ 2ನೇ ಸೆಟ್‌ನಲ್ಲೂ 2-0ಯಿಂದ ಆರಂಭಿಕ ಮುನ್ನಡೆ ಪಡೆದುಕೊಂಡಿದ್ದರು. ಆದರೆ ಮೊದಲ ಸೆಟ್ ಸೋತರೂ ದೃತಿಗೆಡದೆ ಪ್ರತಿಹೋರಾಟ ತೋರಿದ ಒಸಾಕಾ ಮುಂದಿನೆರಡು ಸೆಟ್‌ಗಳಲ್ಲಿ ತಿರುಗೇಟು ನೀಡಿದರು.

    ಈ ಮೂಲಕ ಟೆನಿಸ್ ಪುನರಾರಂಭದ ಬಳಿಕ ಸತತ 11 ಗೆಲುವು ದಾಖಲಿಸಿದ್ದ ಅಜರೆಂಕಾ, ಯುಎಸ್ ಓಪನ್‌ನಲ್ಲಿ 3ನೇ ಬಾರಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಮುನ್ನ 2012, 13ರಲ್ಲೂ ಅಜರೆಂಕಾ ಫೈನಲ್‌ನಲ್ಲಿ ಸೆರೇನಾಗೆ ಶರಣಾಗಿದ್ದರು. 2012, 13ರಲ್ಲಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದ ಅಜರೆಂಕಾ, 3ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಳ್ಳಲು ವಿಲರಾದರು.

    ಇದನ್ನೂ ಓದಿ: ರೈನಾ ಸ್ಥಾನ ತುಂಬುವ ಫೇವರಿಟ್ ಆಟಗಾರ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಅನುಮಾನ

    ಅರಾಂಕ್ಸ ಸ್ಯಾಂಚೆಜ್ ವಿಕಾರಿಯೊ (1994) ಬಳಿಕ ಮೊದಲ ಸೆಟ್ ಹಿನ್ನಡೆಯ ಬಳಿಕ ಪ್ರಶಸ್ತಿ ಒಲಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಒಸಾಕಾ ಪಾತ್ರರಾದರು. ಅವರು 2018ರಲ್ಲಿ ಮೊದಲ ಬಾರಿ ಯುಎಸ್ ಓಪನ್ ಜಯಿಸಿದ್ದರೆ, 2019ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಚೀನಾದ ನಾ ಲೀ (2) ಅವರನ್ನು ಹಿಂದಿಕ್ಕಿರುವ ಒಸಾಕಾ ಈಗ 3 ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ ಏಷ್ಯಾದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಈ ಜಯದೊಂದಿಗೆ ಒಸಾಕಾ ವಿಶ್ವ ರ‌್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಮರಳಲಿದ್ದಾರೆ.

    ಜಪಾನ್ ಟೆನಿಸ್ ತಾರೆ ನವೊಮಿ ಒಸಾಕಾ ಯುಎಸ್ ಓಪನ್ ಒಡತಿ

    ಕರೊನಾ ಭೀತಿಯಿಂದಾಗಿ ವಿಶ್ವ ನಂ. 1 ಆಶ್ಲೆಗ್ ಬಾರ್ಟಿ ಸಹಿತ ಹಲವು ಪ್ರಮುಖ ಆಟಗಾರ್ತಿಯರು ಟೂರ್ನಿಯಿಂದ ಹೊರಗುಳಿದಿದ್ದರು. ಹೀಗಾಗಿ ಒಸಾಕಾ ಡಬ್ಲ್ಯುಟಿಎ ರ‌್ಯಾಂಕಿಂಗ್‌ನ ಅಗ್ರ 20ರೊಳಗಿನ ಯಾವ ಆಟಗಾರ್ತಿಯನ್ನೂ ಎದುರಿಸದೆ ಚಾಂಪಿಯನ್ ಆಗಿದ್ದಾರೆ. 1975ರಲ್ಲಿ ರ‌್ಯಾಂಕಿಂಗ್ ಜಾರಿಗೆ ಬಂದ ನಂತರ ಇದು ಇಂಥ ಮೊದಲ ದೃಷ್ಟಾಂತವಾಗಿದೆ.

    ಚಾಂಪಿಯನ್ ನವೊಮಿ ಒಸಾಕಾ 22.04 ಕೋಟಿ ರೂ. ಬಹುಮಾನ ಮೊತ್ತ ಪಡೆದರೆ, ರನ್ನರ್‌ಅಪ್ ಅಜರೆಂಕಾ 11.02 ಕೋಟಿ ರೂ. ಬಹುಮಾನ ಗಳಿಸಿದರು.

    ಒಸಾಕಾ 7 ಬಗೆಯ ಮಾಸ್ಕ್ ಬಳಕೆ

    ಜಪಾನ್ ಟೆನಿಸ್ ತಾರೆ ನವೊಮಿ ಒಸಾಕಾ ಯುಎಸ್ ಓಪನ್ ಒಡತಿ
    ಜನಾಂಗೀಯ ಸಮಾನತೆಯ ಹೋರಾಟಕ್ಕೆ ಬಲವಾದ ಬೆಂಬಲ ಒದಗಿಸುತ್ತ ಬಂದಿರುವ ನವೊಮಿ ಒಸಾಕಾ ಟೂರ್ನಿಯ 7 ಪಂದ್ಯಗಳಿಗೂ, ಜನಾಂಗೀಯ ದೌರ್ಜನ್ಯಕ್ಕೆ ಬಲಿಯಾದವರ ಹೆಸರಿನ ಮಾಸ್ಕ್ ಧರಿಸಿ ಹಾಜರಾಗಿದ್ದು ವಿಶೇಷ. ಫೈನಲ್ ಪಂದ್ಯಕ್ಕೆ ಅವರು, 2014ರಲ್ಲಿ ಪೊಲೀಸರಿಂದ ಹತ್ಯೆಯಾಗಿದ್ದ 12 ವರ್ಷದ ಬಾಲಕ ಟಮಿರ್ ರೈಸ್ ಹೆಸರಿನ ಮಾಸ್ಕ್ ಧರಿಸಿದ್ದರು. ಫೈನಲ್ ಪಂದ್ಯದ ಬಳಿಕ ಬಾಸ್ಕೆಟ್‌ಬಾಲ್ ದಿಗ್ಗಜ ಕೋಬ್ ಬ್ರಿಯಾಂಟ್ ಜೆರ್ಸಿ ಧರಿಸಿ ಟ್ರೋಫಿಯೊಂದಿಗೆ ಸಂಭ್ರಮಿಸಿದರು. ಅವರ ಬಾಯ್ ಫ್ರೆಂಡ್ ಹಾಗೂ ರ‌್ಯಾಪರ್ ವೈಬಿಎನ್ ಕೋರ್ಡೆಯಿ ಕೂಡ ಗೆಲುವಿನ ಸಂಭ್ರಮದಲ್ಲಿ ಭಾಗಿಯಾದರು.

    ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟಕ್ಕಾಗಿ ಥೀಮ್-ಜ್ವೆರೇವ್ ಕಾದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts