More

    ಜೂ.15ಕ್ಕೆ ಅನ್ನದಾತರ ಕೈಗೆಟುಕಲಿದೆ ನ್ಯಾನೋ ಗೊಬ್ಬರ

    ಬೆಂಗಳೂರು: ಸಾಫ್ಟ್‌ವೇರ್, ಹಾರ್ಡವೇರ್, ಮೊಬೈಲ್, ಆಟೊಮೊಬೈಲ್ ಕ್ಷೇತ್ರವಾಯಿತು. ಇದೀಗ ನ್ಯಾನೋ ತಂತ್ರಜ್ಞಾನ ರಸಗೊಬ್ಬರ ಉತ್ಪಾದನಾ ಕ್ಷೇತ್ರಕ್ಕೂ ಕಾಲಿಟ್ಟಿದೆ.

    ರೈತರ ಆದಾಯ ದ್ವಿಗುಣಗೊಳಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಆತ್ಮನಿರ್ಭರ್ ಭಾರತ ಯೋಜನೆಯಡಿ ರೂಪುಗೊಂಡ ನ್ಯಾನೋ ಯೂರಿಯಾ ಜೂ.15ರಿಂದ ಅನ್ನದಾತರ ಕೈಗೆಟುಕಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

    ಇಫ್ಕೋ ಸಂಸ್ಥೆ ಏರ್ಪಡಿಸಿದ್ದ ನ್ಯಾನೋ ರಸಗೊಬ್ಬರ ಮಹತ್ವ ಮತ್ತು ಬಳಕೆ ಕುರಿತು ಶನಿವಾರ ಏರ್ಪಡಿಸಿದ್ದ ವೆಬಿನಾರ್​ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳೆಗಳ ಉತ್ತಮ ಬೆಳವಣಿಗೆ ಹಾಗೂ ಉತ್ಪಾದಕತೆ ಹೆಚ್ಚಿಸಲೆಂದು ಕರ್ನಾಟಕದಲ್ಲಿ ವಾರ್ಷಿಕ 14 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬಳಕೆಯಾಗುತ್ತಿದ್ದು, ನ್ಯಾನೋ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ದ್ರಾವಣ ರೂಪದ ಯೂರಿಯಾ ರಸಗೊಬ್ಬರವು 5 ಲಕ್ಷ ಮೆಟ್ರಿಕ್ ಟನ್ ಬಳಕೆ ತಗ್ಗಿಸಲಿದೆ ಎಂದರು.

    ಮಣ್ಣು, ನೀರು ಮತ್ತು ವಾಯು ಮಾಲಿನ್ಯವೂ ಕಡಿಮೆಯಾಗಲಿದ್ದು, ಸುರಕ್ಷಿತ ಹಾಗೂ ಪೌಷ್ಟಿಕ ಆಹಾರ ದೊರೆತು ಸುಸ್ಥಿರ ಅಭಿವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಿದರು.

    ಯಶೋಗಾಥೆ
    ಸಹಕಾರಿ ವಲಯದ ಪ್ರತಿಷ್ಠಿತ ಇಫ್ಕೋ ಸಂಸ್ಥೆ ನಿರಂತರ 2 ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿ, ದೇಶಾದ್ಯಂತ 11,000 ರೈತರ ತಾಕುಗಳು, ಐಸಿಎಆರ್, ಕೃಷಿ‌ ವಿವಿ, ಕೃಷಿ ವಿಜ್ಞಾನ ಕೇಂದ್ರದ 20 ಕ್ಕೂ ಹೆಚ್ಚು ಸ್ಥಳಗಳಲ್ಲಿ 94 ಬೆಳೆಗಳ ಮೇಲೆ ಪ್ರಯೋಗ, ಪ್ರಾತ್ಯಕ್ಷಿಕೆ ಸಫಲತೆ ಸಾಧಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನಕಗಳಿಗೆ ಅನುಗುಣವಾಗಿದೆ ಎಂದು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಅನುಮೋದನೆ ನೀಡಿದೆ ಎಂದು ಇಫ್ಕೋ ಸಂಸ್ಥೆಯ ಡಾ.ರಮೇಶ್ ರಾಲಿಯಾ ಅವರು ಯಶೋಗಾಥೆ ಹಿಂದಿನ ಪ್ರಯತ್ನ ಹಾಗೂ ಪರಿಶ್ರಮದ ಮಾಹಿತಿ ನೀಡಿದರು.

    1 ಚೀಲ (50 ಕೆಜಿ) ಯೂರಿಯಾಗೆ ಅರ್ಧ ಲೀಟರ್ ನ್ಯಾನೋ ಗೊಬ್ಬರ ಸಮವಾಗಿದ್ದು, ಬೆಳೆ ನಾಟಿಯಾಗಿ 30 ದಿನಗಳಾದ ಬಳಿಕ 1 ಲೀಟರ್ ನೀರಿನಲ್ಲಿ 4 ಮಿಲಿ ಲೀಟರ್ ನ್ಯಾನೋ ಗೊಬ್ಬರ ದ್ರಾವಣ ಸಿಂಪಡಿಸಬೇಕು. 15 ದಿನಗಳ ನಂತರ ಮತ್ತೊಮ್ಮೆ ಸಿಂಪಡಿಸಿದರೆ ಸಾಕು. ಅಗತ್ಯವಿರುವ ಪೋಷಕಾಂಶಗಳು ದೊರೆತು ನಿರೀಕ್ಷಿತ ಇಳುವರಿ ರೈತರ ಕೈಗೆ ದಕ್ಕಲಿದೆ.

    ಕೊಂಡೊಯ್ಯುವುದು ಸುಲಭ, ಖರ್ಚು ಕಡಿಮೆ ಬಹುಪಯೋಗಿ ಹಾಗೂ ಅಧಿಕ ಆದಾಯವನ್ನು ನ್ಯಾನೋ ಗೊಬ್ಬರ ತಂದು ಕೊಡಲಿದೆ ಎಂದರು.

    ವೆಬಿನಾರ್ ನಲ್ಲಿ ಭಾಗವಹಿಸಿದ್ದ ರಾಜ್ಯ ಕೃಷಿ ಇಲಾಖೆ ನಿರ್ದೇಶಕ ಡಾ.ಬಿ.ವೈ‌.ಶ್ರೀನಿವಾಸ ಅವರು ನ್ಯಾನೊ ಗೊಬ್ಬರದ ಕುರಿತು ರೈತರಿಗೆ ಮಾಹಿತಿ, ತರಬೇತಿ, ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಚೀನಾ ಕಂಪೆನಿಯಿಂದ ಮೀನು ಆಮದು ನಿಲ್ಲಿಸಿದ ಅಮೆರಿಕ

    6 ವಾರಗಳ ನಂತರ ಇಳಿದ ಸೋಂಕು ಸಂಖ್ಯೆ ; 1.73 ಲಕ್ಷ ಹೊಸ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts