More

    ಹತ್ತಲು ಮೆಟ್ಟಿಲಿವೆ ಸಾವಿರ ಸಾವಿರ! ಮಗುಚಿ ಬೀಳಲಿಕ್ಕೆ ಒಂದು ಚಿಕ್ಕ ಮೈಮರೆವು ಸಾಕು!

    ಹತ್ತಲು ಮೆಟ್ಟಿಲಿವೆ ಸಾವಿರ ಸಾವಿರ! ಮಗುಚಿ ಬೀಳಲಿಕ್ಕೆ ಒಂದು ಚಿಕ್ಕ ಮೈಮರೆವು ಸಾಕು!ಕೆಲವು ಮೆಟ್ಟಿಲು ಅನಾಯಾಸ ಅನಾಯಾಸ. ಇನ್ನು ಕೆಲವು ಕಷ್ಟ ಕಷ್ಟ. ಮತ್ತೆ ಕೆಲವು ಉಶ್ಶೋ ಏದುಸಿರು. ಬಿದ್ದೇವೆಂಬ ಭಯ. ಮೊಳಕಾಲಲ್ಲಿ ಉಳುಕು. ಎದೆಯಲ್ಲಿ ಛಳುಕು. ಹತ್ತುವುದೇ ಸಾಕು ಅನ್ನಿಸಿದ್ದು ಎಷ್ಟೋ ಸಲ. ಆದರೂ ಕೆಲವಿವೆ: ಸುಮ್ಮನೆ ಪುಟಿಪುಟಿಯುತ್ತ ಹತ್ತುವ Easy Easy ಮೆಟ್ಟಿಲು. ಎಷ್ಟು ಮೆಟ್ಟಿಲು ಹತ್ತಿದ್ದೇವೋ, ಇಷ್ಟೆತ್ತರಕ್ಕೆ ಬಂದು ತಲುಪಲಿಕ್ಕೆ. ಆದರೆ ನೆನಪಿರಲಿ, ನಾವು ಒಂದೊಂದೇ ಮೆಟ್ಟಿಲು ಹತ್ತಿ ಬಂದವರು. ಯಾರೂ ಕೂಡ ಏಣಿಯ ಹತ್ತು ಮೆಟ್ಟಿಲನ್ನು ಒಟ್ಟಿಗೆ ಹತ್ತಲಾರರು. ಒಂದೊಂದೇ ಹತ್ತಬೇಕು. ಅದಕ್ಕಾಗಿ ಪಡಬೇಕಾದ ಅಷ್ಟೂ ಕಷ್ಟಪಡಬೇಕು.

    ಆದರೆ ಬೀಳಲಿಕ್ಕೆ?

    ಮೊನ್ನೆ ನನ್ನೆದುರಿಗೆ ಬಂದು ಕುಳಿತ ಹುಡುಗಿಯೊಬ್ಬಳನ್ನು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿಸುತ್ತಿದ್ದೆ. ‘ನೀನು ಚೆಂದ ಇದ್ದೀಯ. ಅದಕ್ಕೋಸ್ಕರ ‘ನೀನು’ ಮಾಡಿದ್ದೇನೂ ಇಲ್ಲ. ಆದರೆ ಓದಿಕೊಂಡಿದ್ದೀಯ. ಕ್ಲಾಸು, ರ್ಯಾಂಕು ಬಂದಿವೆ. ಅದಕ್ಕಿಂತ ಹೆಚ್ಚಾಗಿ ಇಪ್ಪತ್ತು ವರ್ಷ ತುಂಬ ಒಳ್ಳೆಯ ಹುಡುಗಿ ಅನ್ನಿಸಿಕೊಂಡಿದ್ದೀಯ. ನಿನ್ನ ಕ್ಯಾರೆಕ್ಟರ್ ಬಗ್ಗೆ ಯಾರೂ ಅಡ್ಡಮಾತು ಆಡಿಲ್ಲ. ಹಾಗೆ ಗಂಭೀರವಾಗಿ ಮರ್ಯಾದೆಯಿಂದ ಬದುಕುವುದಕ್ಕೆ ಕಷ್ಟಪಡುವುದು ಬೇಕಿಲ್ಲ. ಆದರೆ ಸಂಯಮ ಬೇಕು. ಒಂದೊಂದು ಆಫರ್ ಬಂದಾಗಲೂ, ಒಂದೊಂದು ಟೆಂಪ್ಟೇಷನ್ ಕಾಡಿದಾಗಲೂ ಅದರೆಡೆಗೆ ಗಮನ ಕೊಡದೆ, ಮನಸು ಕೊಡದೆ ಮುಂದಕ್ಕೆ ನಡೆದು ಬಂದೆಯಲ್ಲ? ಹಾಗೆ ನಡೆಯುತ್ತ ನಡೆಯುತ್ತ ಬಂದು ಇವತ್ತಿಗೆ ಇಪ್ಪತ್ತಾಗಿವೆ. ಕೈತುಂಬ ಸಂಬಳದ ನೌಕರಿ. ಸುತ್ತಲೂ ಒಳ್ಳೆಯ ಹೆಸರು. ಕೆಲಸದಲ್ಲಿ ಗೆಲುವು. ಇದನ್ನೆಲ್ಲ ಸಾಧಿಸಿಕೊಂಡಿದ್ದೀಯ.

    ಈಗ ಜಾರಬೇಕೇ? ಒಂದು ಮೆಟ್ಟಿಲು ಒಂದು ಸಲ ಜಾರಿದರೆ ಸಾಕು: ಸೀದಾ ಅಧಃಪಾತಾಳ. ನಾವು ಎಷ್ಟೇ ಕಷ್ಟಪಟ್ಟು ಏಣಿಯ ಒಂದೊಂದೇ ಮೆಟ್ಟಿಲು ಹತ್ತಿಕೊಂಡು ಬಂದಿದ್ದರೂ, ಬೀಳುವಾಗ ಮಾತ್ರ ಅಷ್ಟೂ ಮೆಟ್ಟಿಲು ಒಂದೇ ಸಲ ಬೀಳುತ್ತೇವೆ. ನೆನಪಿರಲಿ ಹುಡುಗೀ, ಒಂದು ಮೈಮರೆವಿನ ಕ್ಷಣ ಸಾಕು- You loose everything ನಿನ್ನ ಚೆಂದ, ನಿನ್ನ ವಿದ್ಯೆ, ಎಬಿಲಿಟಿ, ಆಫೀಸಿನಲ್ಲಿ ಗೌರವ, ನಿನಗಿರುವ ಒಳ್ಳೆ ಹೆಸರು- ಎಲ್ಲವೂ ಒಂದು ಕೆಟ್ಟ, Unwanted affair ನಿಂದಾಗಿ ಮಡಚಿ ಬಿದ್ದುಬಿಡುತ್ತವೆ. ಜೀವನಪೂರ್ತಿ ಪ್ರಾಮಾಣಿಕನಾಗಿ ದುಡಿದ ಮನುಷ್ಯ ರಿಟೈರಾಗುವ ಕೊನೆಯ ದಿನ ಲಂಚ ತಿಂದು ಸಿಕ್ಕು ಬಿದ್ದ ಹಾಗೆ! ಅದಕ್ಕಿಂತ ದೊಡ್ಡ ಘಾತ ಇನ್ನೊಂದಿಲ್ಲ. ಗಂಟೆಗಟ್ಟಲೆ ಕಷ್ಟಪಟ್ಟು ಮಾಡಿಕೊಂಡ ಅಡುಗೆ; ಉಪ್ಪು ಹಾಕುವಾಗ ಮೈಮರೆತರೆ ಸರ್ವನಾಶ. Take care’ ಅಂತ ಹೇಳಿ ಕಳಿಸಿದೆ.

    ಈ ಏಣಿಯೇ ವಿಚಿತ್ರ. ಹತ್ತಲಿಕ್ಕೆ ಸಾವಿರ ಮೆಟ್ಟಿಲು. ಬೀಳಲಿಕ್ಕೆ ಒಂದೇ ಒಂದು slip ಸಾಕು. ಮೊದಲಿಂದಲೂ short cutಗಳನ್ನು ಹುಡುಕಿಕೊಂಡು, ಚಿಕ್ಕಪುಟ್ಟ ಭ್ರಷ್ಟಾಚಾರ-ಕಾಂಪ್ರೊಮೈಸ್​ಗಳನ್ನು ಮಾಡಿಕೊಂಡು, ಯಾರದೋ ಕೈಕಾಲು ಹಿಡಿದು, ಜಾತಿ-ಧರ್ಮಗಳ ಶಿಫಾರಸ್ಸು ಬೆನ್ನಿಗಿಟ್ಟುಕೊಂಡು ಪ್ರವರ್ಧಮಾನಕ್ಕೆ ಬರುತ್ತೇನೆಂದು ಹೊರಡುವ ಮನುಷ್ಯ ಅದೇನು ಮಾಡಿದರೂ ಮೆಟ್ಟಿಲ ತುದಿ ತಲುಪಲಾರ. ಅನೇಕ ಬುದ್ಧಿವಂತರು ಆರಂಭದಲ್ಲೇ ಭ್ರಷ್ಟರಾಗುವುದನ್ನು ಕಂಡಿದ್ದೇನೆ. ಒಂದು sharp intellect ಇರುವ ಅಧಿಕಾರಿಗಳು, ದಕ್ಷ ರಾಜಕಾರಣಿಗಳು, ಬುದ್ಧಿವಂತ ಪತ್ರಕರ್ತರು, ಜಾಣ ನಟಿಯರು-ಇವರಲ್ಲಿ ಕೆಲವರು ಆರಂಭದಲ್ಲೇ ಭ್ರಷ್ಟರಾಗಿ ಬಿಡುತ್ತಾರೆ. short cut ಹುಡುಕುತ್ತಾರೆ. ‘ನಿಯತ್ತಾಗಿ ಮಾಡಿಕೊಂಡು ಹೋದ್ರೆ ಯಾವತ್ತಿಗ್ರೀ ನಾವು ಸಕ್ಸಸ್ ಆಗೋದು?’ ಅಂತ ತಮಗೆ ತಾವೇ ಹೇಳಿಕೊಂಡು ಭ್ರಷ್ಟರಾಗಿ ಬಿಡುತ್ತಾರೆ. ಅದೂ ಏನು, ಕೋಟಿಗಟ್ಟಲೆಯ ಭ್ರಷ್ಟಾಚಾರವಲ್ಲ. ಖರ್ಚಿಗಾಗುವಷ್ಟು ಕಾಸು, ಚೂರು ವಿಸ್ಕಿ, ಒಂದು ಬೈಕು, ಹೆಚ್ಚೆಂದರೆ ಒಂದು ಸೈಟು-ಹೀಗೆ ಎಲ್ಲವೂ ಅಲ್ಲಲ್ಲೇ ಅಲೆಯುವ ಆಸೆಗಳು, ಪ್ರಲೋಭನೆಗಳು. ಅವಕ್ಕೆ ಬಲಿಯಾಗಿಬಿಡುತ್ತಾರೆ. ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಸಿಗುತ್ತೆ ಅಂದಕೂಡಲೆ, ಮುಂದಿನ ಚಿತ್ರದಲ್ಲಿ ಹೀರೋಯಿನ್ ಆಗೋದೇ ಖರೆ ಅಂದುಕೊಂಡು ಪೊ›ಡ್ಯೂಸರನ ಕೈ ಅಳತೆಗೆ ಸಿಕ್ಕು ಬಿಡುವ ನಟಿಯರಿರುತ್ತಾರೆ. ಅವರು ಯಾವತ್ತಿಗೂ ನಾಯಕ ನಟಿಯರಾಗಲಾರರು. ಮಂತ್ರಿಗಳ ಮನೆ ಬಾಗಿಲು ತಟ್ಟುವ ಪತ್ರಕರ್ತ ಯಾವತ್ತಿಗೂ ಜನಮನದಲ್ಲಿ ಉಳಿಯುವಂಥದ್ದನ್ನು ಬರೆಯಲಾರ. ಅವನಿಗದು ಗೊತ್ತೇ ಆಗುವುದಿಲ್ಲ: ಪುಡಿಗಾಸು ಎಣಿಸಿಕೊಂಡು ಉಲ್ಲಸಿತವಾಗಿ ಮನೆಗೆ ಬಂದುಬಿಡುತ್ತಾನೆ. ಬರವಣಿಗೆ ಎಂಬುದು ಅವನಿಗೇ ಗೊತ್ತಿಲ್ಲದಂತೆ ಹಳ್ಳ ಹಿಡಿದು ಹೋಗಿರುತ್ತದೆ.

    ಸರಿಯಾಗಿ ಪರಿಶೀಲಿಸಿ ನೋಡಿದರೆ ಆ ಚಿಕ್ಕ ಚಿಕ್ಕ ಕಾಂಪೊ›ಮೈಸುಗಳು, ಆ ಭ್ರಷ್ಟಾಚಾರ, ಯಾವುದೋ ಆಸೆಗಾಗಿ ಯಾರೊಂದಿಗೋ ಒಡಂಬಡಿಕೆ ಮಾಡಿಕೊಂಡು ಬಿಡುವಿಕೆ ಇಂಥವುಗಳ ಅವಶ್ಯಕತೆ ಬದುಕಿಗೆ ಇರುವುದೇ ಇಲ್ಲ. ಲಂಚ ಹೊಡೆಯದ ಮನುಷ್ಯ ಉಪವಾಸವೇನೂ ಮಲಗಿರುವುದಿಲ್ಲ. ಭ್ರಷ್ಟನಾಗದ ಪತ್ರಕರ್ತ ಜೀವನ ಪರ್ಯಂತವೇನೂ ಹೀನಾಯವಾಗಿ ಬದುಕಿರುವುದಿಲ್ಲ. ನಮ್ಮ ಪ್ರತಿಭೆ, ತಾಕತ್ತು, ಪ್ರಾಮಾಣಿಕತೆ, ಧೈರ್ಯ-ಇವುಗಳನ್ನು Establish ಮಾಡುತ್ತ ಮಾಡುತ್ತ ಒಂದು ಅಮೃತಘಳಿಗೆ ಬದುಕಿಗೆ ಬಂದೇ ಬಿಡುತ್ತದೆ. ಜನ ನಿಮ್ಮನ್ನು ಗುರುತಿಸುತ್ತಾರೆ. ಆಡಿದ ಮಾತು ಅಮೃತವಾಗುತ್ತದೆ. ಮುಟ್ಟಿದ್ದೆಲ್ಲ ಬಂಗಾರ. ಪ್ರತಿ ಕನಸೂ ನನಸಾಗುತ್ತದೆ. ನಮ್ಮ ಬಗ್ಗೆ ನಮಗೇ ಪ್ರೀತಿ, ಗೌರವ ಉಂಟಾಗುವಂಥ ಕಾಲ ಅದು.

    ಆ ಕಾಲಕ್ಕಾಗಿ ಕಾಯಬೇಕು. ಭ್ರಷ್ಟರಾಗುವ, ನಿಕೃಷ್ಟರಾಗುವ ಅವಕಾಶಗಳು ಬಂದಾಗಲೆಲ್ಲ ಅವುಗಳನ್ನು ತಿರಸ್ಕರಿಸಬೇಕು. ಒಂದೇ ಒಂದು ಮೆಟ್ಟಿಲು ಜಾರದಂತೆ ನೋಡಿಕೊಳ್ಳಬೇಕು. ಅದೊಂದು ಕಷ್ಟ ಅನುಭವಿಸಿಬಿಟ್ಟರೆ, ಉಳಿದ ಕಷ್ಟಗಳ್ಯಾವೂ ಕಷ್ಟಗಳೇ ಅಲ್ಲ. ಅನೇಕ ಸಲ ಅದು ಮೆಟ್ಟಿಲು ಹತ್ತುವ ಮಂದಿಗೆ ಅರ್ಥವಾಗುವುದಿಲ್ಲ. ತುದಿ ತಲುಪುವ ಮೊದಲೇ ಬೀಳುತ್ತಾರೆ.
    (ಲೇಖಕರು ಹಿರಿಯ ಪತ್ರಕರ್ತರು)

    ಸುಬ್ಬಕ್ಕನ ಕೋಳಿಯ ಕಥೆಯಲ್ಲ ಇದು ಇಟಲಿ ಅಜ್ಜನ ಕೋಳಿಯ ಕಥೆ-ವ್ಯಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts