More

    ರವಿ ಬೆಳಗೆರೆ ಧಾರವಾಡ ನಂಟು

    ಧಾರವಾಡ: ರವಿ ಬೆಳಗೆರೆ ಅವರು ಧಾರವಾಡ ಮತ್ತು ಹುಬ್ಬಳ್ಳಿಯೊಂದಿಗೆ ಬಲವಾದ ನಂಟು ಹೊಂದಿದ್ದರು. 4 ದಶಕಗಳ ಹಳೆಯ ಸಹಪಾಠಿ ಮಿತ್ರರು ಧಾರವಾಡದಲ್ಲಿದ್ದಾರೆ.

    ಅದು 1978ನೇ ವರ್ಷ. ಸ್ನಾತಕೋತ್ತರ ಪದವಿ ಓದಲು ರವಿ ಬೆಳಗೆರೆ ಬಳ್ಳಾರಿಯಿಂದ ಧಾರವಾಡಕ್ಕೆ ಬಂದಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಎಂ.ಎ.ಗೆ ಪ್ರವೇಶ ಪಡೆದ ರವಿ, ವಿಶ್ವವಿದ್ಯಾಲಯ ಆವರಣದ ನಿಜಲಿಂಗಪ್ಪ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದರು. ಅವರಿಗೆ ಅತ್ಯಾಪ್ತರಾದವರು ಡಾ. ಅಶೋಕ ಶೆಟ್ಟರ್.

    ರವಿ ಬೆಳಗೆರೆ ಎಂಎ ಓದುತ್ತಿದ್ದಾಗ ಪತ್ರಕರ್ತ ಆಗಬೇಕು ಎಂದುಕೊಂಡವರಲ್ಲ. ಇತಿಹಾಸ ಉಪನ್ಯಾಸಕ ಆಗಬೇಕೆನ್ನುವುದು ಅವರ ಗುರಿಯಾಗಿತ್ತು. ಕಾಲೇಜು ದಿನಗಳಲ್ಲಿ ಸಾಹಿತ್ಯ ಓದಿನ ಗೀಳು, ಸಂಗೀತ ಕೇಳುವುದು ಅವರ ಹವ್ಯಾಸವಾಗಿತ್ತು. ಸಾಹಿತ್ಯ ಓದುವ ಹುಚ್ಚು, ಸಾಹಿತ್ಯಿಕ ಚಟುವಟಿಕೆಗಳು ಅವರ ದಿನಚರಿಯಾಗಿದ್ದವು. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದರು. ಓದಿನ ಜೊತೆಗೆ ಹಿಂದಿ, ಉರ್ದು, ಸೂಫಿ ಶಾಯರಿ ಕೇಳುವುದು ಬರೆಯುವುದು ಇದ್ದೇ ಇತ್ತು. ಕಾಲೇಜು ದಿನಗಳಲ್ಲೇ ಅವರೊಳಗೊಬ್ಬ ಅತ್ಯುತ್ತಮ ಅನುವಾದಕನಿದ್ದ.

    ಎಂಎ ನಂತರ ಬಳ್ಳಾರಿಯ ಕಾಲೇಜೊಂದರಲ್ಲಿ ಉಪನ್ಯಾಸಕರೂ ಆದರು. ಕಾರಣಾಂತರಗಳಿಂದ ನೌಕರಿ ಬಿಟ್ಟ ರವಿ, ಮತ್ತೆ ಬೋಧನೆ ವೃತ್ತಿಯತ್ತ ಹಿಂತಿರುಗಿ ನೋಡಲಿಲ್ಲ. ಆ ದಿನಗಳಲ್ಲಿ ಸ್ಥಳೀಯ ಪತ್ರಿಕೆಗಳ ಛಾಪು ಇತ್ತು. ಹಾಗಾಗಿ ಬಳ್ಳಾರಿ ಪತ್ರಿಕೆ ಆರಂಭಿಸಿದರು. ಪ್ರಜಾ ಜಾಗೃತಿ ಸಂಘ ಆರಂಭಿಸಿ ಪತ್ರಿಕೆಯನ್ನು ಮುಖವಾಣಿ ಮಾಡಿಕೊಂಡರು. ಆಗಿನ ದಿನಗಳಲ್ಲಿ ಬಳ್ಳಾರಿ ಪತ್ರಿಕೆ ಜನಪ್ರಿಯವೂ ಆಗಿತ್ತು. ನಂತರದ ದಿನಗಳಲ್ಲಿ ಹುಬ್ಬಳ್ಳಿಗೆ ಬಂದು ಸಂಯುಕ್ತ ಕರ್ನಾಟಕ ಸೇರಿದರು. ಅಂದಿನ ಸಂಪಾದಕರು ‘ಕರ್ಮವೀರ’ದ ಜವಾಬ್ದಾರಿ ವಹಿಸಿದರು. ಅತ್ಯಂತ ಸಮರ್ಥವಾಗಿ ನಿಭಾಯಿಸಿ ಪತ್ರಿಕೋದ್ಯಮದಲ್ಲಿ ಛಾಪು ಮೂಡಿಸಿದರು. ಪಾತಕ ಲೋಕದ ಸರಣಿ ಬರಹ ‘ಪಾಪಿಗಳ ಲೋಕದಲ್ಲಿ’ ಅಂಕಣ ಜನಪ್ರಿಯವಾಯಿತು. ಹುಬ್ಬಳ್ಳಿಯಲ್ಲಿ ಪತ್ರಿಕೋದ್ಯಮ ಮೆಟ್ಟಿಲೇರಿ ಅದನ್ನು ಚಿಮ್ಮು ಹಲಗೆ ಮಾಡಿಕೊಂಡ ರವಿ ಬೆಳೆದ ಪರಿ ಅಗಾಧ ಎಂದು ಸ್ಮರಿಸಿಕೊಳ್ಳುತ್ತಾರೆ ಅವರ ಸಹಪಾಠಿ, ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಅಶೋಕ ಶೆಟ್ಟರ್.

    ರವಿ ಬೆಂಗಳೂರಿನಲ್ಲಿ ನೆಲೆಸಿದ ನಂತರವೂ ಗೆಳೆಯ ಡಾ. ಶೆಟ್ಟರ್ ಅವರ ಕೌಟುಂಬಿಕ ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಇಬ್ಬರ ಮಧ್ಯೆ 42 ವರ್ಷಗಳ ಒಡನಾಟವಿತ್ತು. ಇಬ್ಬರೂ ಒಂದೊಂದು ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದರೂ ಕಾಲೇಜು ದಿನಗಳ ಗೆಳೆತನದ ಸಲುಗೆ ಇತ್ತು. ‘ಖಾಸ್ ಬಾಸ್ ವಿತ್ ರವಿ ಬೆಳಗೆರೆ’ ವಾಟ್ಸಾ ್ಯ್ ಗ್ರುಪ್ ಮಾಡಿಕೊಂಡಿದ್ದ ರವಿ, ಆಪ್ತ ಗೆಳೆಯರು ಮತ್ತು ಕುಟುಂಬದವರನ್ನು ಸೇರಿಸಿದ್ದರು. ಕುಟುಂಬ, ವೃತ್ತಿ ಜೀವನದ ಆಗುಹೋಗುಗಳ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಡಾ. ಅಶೋಕ ಶೆಟ್ಟರ್ ವಿವರಿಸಿದರು.

    ಹುಬ್ಬಳ್ಳಿಯಲ್ಲಿದ್ದಾಗ ಖ್ಯಾತನಾಮರಾದ ಪಾ.ವೆಂ. ಆಚಾರ್ಯ, ಎನ್.ವಿ. ಜೋಶಿ, ಗೋಪಾಲ ವಾಜಪೇಯಿ, ಜಿ.ಎಚ್. ರಾಘವೇಂದ್ರ, ಪಿ.ಆರ್. ಪಂಢರಿ ಮೊದಲಾದವರ ಸಾಂಗತ್ಯ ರವಿಯವರಿಗೆ ದೊರಕಿತ್ತು. ವಾಜಪೇಯಿ, ಜಿ.ಎಚ್. ಅವರೊಂದಿಗೆ ನಾಟಕ, ಸಿನಿಮಾ, ಧಾರವಾಹಿಗಳಿಗೆ ಸಾಹಿತ್ಯ ಬರೆದಿದ್ದರು.

    ಪಾಂಡುರಂಗಿ ಕುಟುಂಬ ಸದಸ್ಯ!: ರವಿ ಬೆಳಗೆರೆ ಧಾರವಾಡಕ್ಕೆ ಬಂದರೆ ಉಳಿದುಕೊಳ್ಳುತ್ತಿದ್ದುದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರ ಮನೆಯಲ್ಲಿ. ಬೆಂಗಳೂರಿನ ಜಂಜಡ ಮರೆತು ಕೆಲ ದಿನಗಳ ಬದಲಾವಣೆಗಾಗಿ ಇಲ್ಲಿಗೆ ಬರುತ್ತಿದ್ದರು. ಹಾಗಾಗಿ ಡಾ. ಪಾಂಡುರಂಗಿ ಅವರು ರವಿಗಾಗಿ ಪ್ರತ್ಯೇಕ ಕೊಠಡಿಯೊಂದನ್ನು ಮೀಸಲಿಟ್ಟಿದ್ದರು. ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರಿಂದ ಸಂಗೀತ ಕೇಳುವ ವ್ಯವಸ್ಥೆ ಅಲ್ಲಿತ್ತು. ವರ್ಷಕ್ಕೊಮ್ಮೆ ಬಂದಾಗ 3-4 ದಿನಗಳ ವಾಸ್ತವ್ಯ, ಕುಟುಂಬದ ಎಲ್ಲರೊಂದಿಗೇ ಊಟೋಪಚಾರ.

    ‘ತಮ್ಮನ್ನು ಭೇಟಿಯಾಗುವುದೆಂದರೆ ವರ್ಷಕ್ಕೊಮ್ಮೆ ಕಾಶಿಯಾತ್ರೆ ಮಾಡಿದಂತೆ ಎನ್ನುತ್ತಿದ್ದರು’ ಎಂದು ಡಾ. ಆನಂದ ಪಾಂಡುರಂಗಿ ರವಿ ಜತೆಗಿನ ಒಡನಾಟ ಸ್ಮರಿಸುತ್ತಾರೆ.

    ರವಿ ಡಾ. ಆನಂದರನ್ನು ಅಣ್ಣ ಎನ್ನುತ್ತಿದ್ದರು. ಅಷ್ಟೊಂದು ಗೌರವ ಭಾವನೆ. ಬಡವರ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ರವಿ, ಪ್ರಾರ್ಥನಾ ಸ್ಕೂಲ್​ನಲ್ಲಿ ಪರಿಚಯದ 3 ಮಕ್ಕಳನ್ನು ಓದಿಸುವಂತೆ ಡಾ. ಪಾಂಡುರಂಗಿಯವರು ಕೇಳಿದಾಗ ತಕ್ಷಣ ವ್ಯವಸ್ಥೆ ಮಾಡಿದ್ದರಂತೆ. ಧಾರವಾಡದಲ್ಲಿದ್ದುಕೊಂಡೇ ಅನೇಕ ಪುಸ್ತಕ ಬರೆದಿದ್ದಾರೆ. ದಂಗೆಯ ದಿನಗಳು ಅನುವಾದಿತ ಪುಸ್ತಕ ಬರೆದು ಅರ್ಪಿಸಿದ್ದಾರೆ. ಡಾ. ಆನಂದ ಪತ್ನಿ ಅನುಪಮಾ ಅವರನ್ನು ವೈನೀ ಎನ್ನುತ್ತಿದ್ದರು. ಮನೆಯಲ್ಲಿ ಮಾಡುತ್ತಿದ್ದ ಮೊಸರು ಅವಲಕ್ಕಿ, ಮೊಸರನ್ನ, ಚುರುಮುರಿ ಸೂಸಲು, ಭಜ್ಜಿ ಎಂದರೆ ಪಂಚಪ್ರಾಣ. ಕೆಂಪು ರಂಜಕವನ್ನು ಬಹಳ ಇಷ್ಟ ಪಡುತ್ತಿದ್ದ. ಬೆಂಗಳೂರಿಗೆ ಹೋಗುವಾಗ ದಾರಿ ಬುತ್ತಿ ಕಟ್ಟಿಕೊಡು ಎನ್ನುತ್ತಿದ್ದ ಎಂದು ಡಾ. ಆನಂದ ಪಾಂಡುರಂಗಿ ಸ್ಮರಿಸುತ್ತಾರೆ.

    ರವಿ ಅಗಲಿಕೆಯಿಂದ ಮನೆಯ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಆತ ಅಕ್ಷರದ ಮಾಂತ್ರಿಕ. ಅವನದು ಮಕ್ಕಳ ಮನಸ್ಸಿನಂತೆ ಮೃದು ಸ್ವಭಾವ. ಸ್ಪೂರ್ತಿ ತುಂಬುವಂಥ ವ್ಯಕ್ತಿತ್ವ. ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದ ವಿರಳ ಬರಹಗಾರರಲ್ಲಿ ರವಿ ಒಬ್ಬ. ಕನ್ನಡ ಪತ್ರಿಕೋದ್ಯಮ ಬಹುಮುಖ ವ್ಯಕ್ತಿತ್ವದ ದೈತ್ಯ ಬರಹಗಾರನನ್ನು ಕಳೆದುಕೊಂಡಿದೆ.

    ಡಾ. ಆನಂದ ಪಾಂಡುರಂಗಿ, ಮನೋವೈದ್ಯರು

    42 ವರ್ಷಗಳಷ್ಟು ಹಳೆಯ ಗೆಳೆಯ ರವಿ ಬೆಳಗೆರೆ ಇನ್ನಿಲ್ಲ. ತನ್ನದೇ ಷರತ್ತುಗಳಿಗನುಗುಣವಾಗಿ ಬದುಕಿ, ಬಹುಮುಖಿ ಆಸಕ್ತಿಗಳನ್ನು ಬದುಕಿನ ಕೊನೆವರೆಗೆ ಪೋಷಿಸಿಕೊಂಡಾತ. ಅಸೂಯೆ-ಆರಾಧನೆಗಳನ್ನು, ಶತ್ರು- ಮಿತ್ರರನ್ನೂ ಸಮನಾಗಿಯೇ ಹೊಂದಿ ಅಕಾಲಿಕವಾಗಿ ಬದುಕಿನ ಯಾತ್ರೆ ಮುಗಿಸಿದ ರವಿಗೆ ಅಂತಿಮ ನಮನಗಳು.

    – ಡಾ. ಅಶೋಕ ಶೆಟ್ಟರ್, ರವಿ ಬೆಳಗೆರೆ ಸಹಪಾಠಿ

    ಶಿರಸಿಯ ಪಾದುಕಾಶ್ರಮದ ಬಗ್ಗೆ ಸರಣಿ ವರದಿ ಬರೆದಾಗ ರವಿ ಬೆಳಗೆರೆ ವಿರುದ್ಧ ಕೇಸ್ ಹಾಕಲು ಸಿದ್ಧನಾಗಿದ್ದೆ. ಹೇಗೋ ಗೊತ್ತಾಗಿ ನನಗೆ ಫೋನ್ ಮಾಡಿ ಸುದೀರ್ಘವಾಗಿ ಮಾತನಾಡಿದ ರವಿ, ದಾಖಲೆಗಳನ್ನು ಸಂಗ್ರಹಿಸಿಯೇ ವರದಿ ಬರೆದಿರುವುದಾಗಿ ತಿಳಿಸಿದ್ದರು. ಬಳಿಕ ಕಾನೂನಾತ್ಮಕ ಸಲಹೆಗಳಿಗಾಗಿ ಆಗಾಗ ಕರೆ ಮಾಡುತ್ತಿದ್ದರು. ತಾನು ಬರೆದ ಅರ್ಧ ಸತ್ಯ ಪುಸ್ತಕ ಕಳಿಸಿ ಅಭಿಪ್ರಾಯ ಕೇಳಿದ್ದರು. ಇನ್ನರ್ಧ ಸತ್ಯ ಬರೆಯುವುದರೊಳಗೆ ಹೋಗಿಬಿಟ್ಟರು. ನನ್ನ ಮನಸಿಗೆ ಆಘಾತವಾಗಿದೆ. ಚತುರ ಮಾತುಗಾರ, ಸವಾಲು ಸ್ವೀಕರಿಸುವ ಛಾತಿಯುಳ್ಳ ದಿಟ್ಟ ಪತ್ರಕರ್ತ. ಅಂಥವರು ಮತ್ತೊಬ್ಬರು ಬರಲಿಕ್ಕಿಲ್ಲ.

    – ಬಿ.ಡಿ. ಹೆಗಡೆ ದೊಡ್ಮನೆ, ನ್ಯಾಯವಾದಿ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts