More

    ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಮಾರ್ಗ; ಆಗಸ್ಟ್‌ನಲ್ಲಿ ವಿಸ್ತರಿತ ಸೇವೆ ಆರಂಭ!

    ರಾಮ ಕಿಶನ್ ಕೆ.ವಿ.
    ಬೆಂಗಳೂರು: ಬಹುನಿರೀಕ್ಷಿತ ಬೈಯಪ್ಪನಹಳ್ಳಿ-ಕೆ.ಆರ್.ಪುರ ಹಾಗೂ ಕೆಂಗೇರಿ-ಚಲ್ಲಘಟ್ಟ ಮೆಟ್ರೋ ವಿಸ್ತರಿತ ರೈಲು ಮಾರ್ಗ ಮುಂದಿನ ಮಾಸಾಂತ್ಯದೊಳಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ. ಪ್ರಸ್ತುತ ನೇರಳೆ ಮಾರ್ಗದಲ್ಲಿ ಕೆಂಗೇರಿ-ಬೈಯಪ್ಪನ ಹಳ್ಳಿ, ಕೆ.ಆರ್.ಪುರ-ವೈಟ್‌ಫೀಲ್ಡ್ ನಡುವೆ ಮೆಟ್ರೋ ರೈಲು ಸಂಚರಿಸುತ್ತಿದೆ. ಆದರೆ, ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವಿನ 2.1 ಕಿ.ಮೀ. ಉದ್ದದ ಮಾರ್ಗ ಪೂರ್ಣವಾಗಿ ಸಿದ್ಧಗೊಳ್ಳದ ಕಾರಣ ಪ್ರಯಾಣಿಕರ ಸೇವೆಗೆ ಲಭ್ಯವಾಗಿರಲಿಲ್ಲ. ಈಗ ಈ ಕಿರು ಮಾರ್ಗದಲ್ಲಿನ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಸುರಕ್ಷತಾ ಕ್ರಮ ಹಾಗೂ ಪ್ರಾಯೋಗಿಕ ರೈಲು ಓಡಾಟದ ಬಳಿಕ ಅಧಿಕೃತವಾಗಿ ಸಂಚಾರಕ್ಕೆ ಅವಕಾಶ ನೀಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

    ಕಳೆದ ಮಾ.25ರಂದು ಪ್ರಧಾನಿ ನರೇಂದ್ರ ಮೋದಿ ಕೆ.ಆರ್.ಪುರ- ವೈಟ್‌ಫೀಲ್ಡ್ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಆದರೆ, ಬೈಯಪ್ಪನಹಳ್ಳಿಯಿಂದ ಜ್ಯೋತಿಪುರ ಮಾರ್ಗವಾಗಿ ಕೆ.ಆರ್.ಪುರ ಮಾರ್ಗದಲ್ಲಿ ಕೆಲ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಈ ಮಾರ್ಗವನ್ನು ಉದ್ಘಾಟಿಸಿರಲಿಲ್ಲ. ಸದ್ಯ ಕೆ.ಆರ್. ಪುರ-ವೈಟ್‌ಫೀಲ್ಡ್ ಮಾರ್ಗದಲ್ಲಿ ನಿತ್ಯ ಸುಮಾರು 30 ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ಬೈಯಪ್ಪನಹಳ್ಳಿ-ಕೆ.ಆರ್.ಪುರ ವಿಸ್ತರಿತ ಮಾರ್ಗ ಹಾಗೂ ಕೆಂಗೇರಿ-ಚಲ್ಲಘಟ್ಟ ಮಾರ್ಗವು ಆರಂಭವಾದಲ್ಲಿ ಇಡೀ ನೇರಳ ಲೇನ್‌ನಲ್ಲಿ ನಿತ್ಯ 1.5 ಲಕ್ಷಕ್ಕಿಂತಲೂ ಅಧಿಕ ಜನರು ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.

    ಇದನ್ನೂ ಓದಿ: ಕೆಐಎಗೆ ಮೆಟ್ರೋ; ನಿಗದಿಗೂ ಮುನ್ನವೇ ಯೋಜನೆ ಸಾಕಾರ?

    ಶೀಘ್ರ ಸುರಕ್ಷತಾ ಕ್ರಮದ ತಪಾಸಣೆ

    ಆಗಸ್ಟ್‌ನಲ್ಲಿ ಎರಡೂ ಮಾರ್ಗಗಳು ಸಂಚಾರಕ್ಕೆ ಮುಕ್ತವಾಗುವ ನಿಟ್ಟಿನಲ್ಲಿ ಇದೀಗ ಸಿವಿಲ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಸದ್ಯ ಸಂಪರ್ಕ ಕಲ್ಪಿಸಲು ಸಿಗ್ನಲಿಂಗ್ ಕೆಲಸಗಳು ಅಂತಿಮ ಹಂತದಲ್ಲಿವೆ. ಇದರ ಬೆನ್ನಲ್ಲೇ ದೆಹಲಿಯಿಂದ ಮೆಟ್ರೋ ರೈಲ್ವೇ ಸುರಕ್ಷತಾ ಆಯೋಗದ ಪ್ರಮುಖರು ಆಗಮಿಸಿ ನಿಲ್ದಾಣದಲ್ಲಿ ಸುರಕ್ಷತೆ, ಸಿಗ್ನಲಿಂಗ್, ಟ್ರ್ಯಾಕ್ ಇತ್ಯಾದಿ ವ್ಯವಸ್ಥೆಗಳ ಕುರಿತು ತಪಾಸಣೆ ನಡೆಲಿದೆ. ಈ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಪ್ರಾಯೋಗಿಕ ಮೆಟ್ರೋ ಸಂಚಾರವನ್ನು ಕೈಗೊಳ್ಳಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.

    ಟೆಕ್ಕಿಗಳಿಗೆ ಹೆಚ್ಚಿನ ಅನುಕೂಲ

    ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವಿನ ಪೂರ್ಣ ಮಾರ್ಗವು ಆರಂಭವಾದಲ್ಲಿ ಟೆಕ್ಕಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಈ ಮಾರ್ಗವು 15.25 ಕಿ.ಮೀ. ಒಳಗೊಂಡಿದೆ. ಜತೆಗೆ ಇಡೀ ನೇರಳೆ ಮಾರ್ಗ 42.5 ಕಿ.ಮೀ.ಗೆ ಹಿಗ್ಗಲಿದೆ. ಒಮ್ಮೆ ಈ ಮಾರ್ಗವು ಪೂರ್ಣವಾಗಿ ಕಾರ್ಯಾಚರಣೆ ಆದಲ್ಲಿ ನಗರದ ಪೂರ್ವಭಾಗದಲ್ಲಿರುವ ಐಟಿ ಕಾರಿಡಾರ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಟೆಕ್ಕಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಸದ್ಯ ಬಹುತೇಕ ಟೆಕ್ಕಿಗಳು ಸ್ವಂತ ಅಥವಾ ಖಾಸಗಿ ವಾಹನಗಳಲ್ಲಿ ಕೆಲಸದ ಸ್ಥಳಕ್ಕೆ ಹೋಗಿಬರುತ್ತಿದ್ದಾರೆ. ಇದರಿಂದ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ವಿಸ್ತರಿತ ಮಾರ್ಗ ಆರಂಭವಾದಲ್ಲಿ ಹೆಚ್ಚಿನ ಟೆಕ್ಕಿಗಳು ಮೆಟ್ರೋದಲ್ಲಿ ಸಂಚರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸಹಜವಾಗಿಯೇ ಸಂಚಾರ ದಟ್ಟಣೆಯನ್ನು ನೀಗಿಸಲಿದೆ ಎಂದು ಸಂಚಾರ ಪೊಲೀಸರು ಕೂಡ ಆಶಾಭಾವ ಹೊಂದಿದ್ದಾರೆ.

    ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಮನೆಯೊಂದನ್ನು ಖರೀದಿಸಿದ ಭಾರತೀಯ ಮೂಲದ ಕುಟುಂಬ; ಬೆಲೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರೆಂಟಿ!

    ಸಮಯ ಉಳಿತಾಯ

    ನೇರಳೆ ಮಾರ್ಗದಲ್ಲಿ ಎರಡು ವಿಸ್ತರಿತ ಲೇನ್‌ಗಳು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿರುವ ಹಿನ್ನೆಲೆಯಲ್ಲಿ ಪ್ರಯಾಕರಿಗೆ ಹೆಚ್ಚಿನ ಸಮಯ ಉಳಿತಾಯವಾಗಲಿದೆ. ಸದ್ಯ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗದಲ್ಲಿ ರೈಲು ಓಡಾಟವಿಲ್ಲದ ಕಾರಣ ವೈಟ್‌ಫೀಲ್ಡ್‌ನತ್ತ ಸಾಗುವ ಜನರು ಅನಿವಾರ್ಯವಾಗಿ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಫೀಡರ್ ಬಸ್‌ಗಳ ಮೂಲಕ ಕೆ.ಆರ್.ಪುರ ನಿಲ್ದಾಣದವರೆಗೆ ಪ್ರಯಾಸಿ ಅಲ್ಲಿಂದ ಮತ್ತೆ ಕೆ.ಆರ್.ಪುರ-ವೈಟ್‌ಫೀಲ್ಡ್ ಮಾರ್ಗದ ರೈಲಿನಲ್ಲಿ ತೆರಳಬೇಕಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಸಮಯ ವ್ಯಯವಾಗುತ್ತಿದೆ. ಇಡೀ ಮಾರ್ಗ ಸೇವೆಗೆ ಮುಕ್ತವಾದಲ್ಲಿ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ಗೆ ರಸ್ತೆ ಮಾರ್ಗವಾಗಿ 1 ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿದ್ದು, ಮೆಟ್ರೋ ರೈಲಿನಲ್ಲಿ ಕೇವಲ 25 ನಿಮಿಷಗಳೊಳಗೆ ಗಮ್ಯ ತಲುಪಬಹುದಾಗಿದೆ. ಈ ಕಾರಣದಿಂದಲೇ ಆ ಭಾಗದ ಪ್ರಯಾಣಿಕರು ಬೈಯಪ್ಪನಹಳ್ಳಿ-ಕೆ.ಆರ್.ಪುರ ವಿಸ್ತರಿತ ಮಾರ್ಗವನ್ನು ಬೇಗನೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts