More

    ಆದಿಚುಂಚನಗಿರಿ ಬೆಟ್ಟದಲ್ಲಿ ಚಿರತೆ ಸಂಚಾರ

    ನಾಗಮಂಗಲ: ತಾಲೂಕಿನ ಪುರಾಣ ಪ್ರಸಿದ್ಧ ಆದಿಚುಂಚನಗಿರಿ ಬೆಟ್ಟದಲ್ಲಿ ಕೆಲ ದಿನಗಳಿಂದ ಚಿರತೆ ಸಂಚರಿಸುತ್ತಿದ್ದು ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಹಾಗೂ ಬೆಟ್ಟದ ತಪ್ಪಲಿನ ಜನರಲ್ಲಿ ಆತಂಕ ಉಂಟುಮಾಡಿದೆ.
    ಆದಿಚುಂಚನಗಿರಿ ಬೆಟ್ಟದ ತಪೋವನಕ್ಕೆ ಹೊಂದಿಕೊಂಡಂತಿರುವ ಜಾಗದ ಸಮೀಪದಲ್ಲಿರುವ ಬಂಡೆಗಳ ನಡುವೆ ಚಿರತೆಯಿರುವುದನ್ನು ಸ್ಥಳೀಯರೊಬ್ಬರು ಭಾನುವಾರ ಸಂಜೆ ಗಮನಿಸಿ ಮೊಬೈಲ್‌ನಲ್ಲಿ ಚಿರತೆ ಫೋಟೋವನ್ನು ಸೆರೆ ಹಿಡಿದಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
    ಅದೇ ರೀತಿ ಸೋಮವಾರ ಸಂಜೆ ಸಹ ಅದೇ ಜಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೋನಿಟ್ಟು ಚಿರತೆಯನ್ನು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.
    ಆದಿಚುಂಚನಗಿರಿ ಬೆಟ್ಟದ ಸಮೀಪವಿರುವ ಕಿರುಬನಬೆಟ್ಟದಲ್ಲಿ ಎರಡು ತಿಂಗಳ ಹಿಂದೆ ಎರಡು ಚಿರತೆಗಳು ಸಂಚರಿಸುತ್ತಿದ್ದು ಸಾಕು ಪ್ರಾಣಿಗಳನ್ನು ತಿಂದು ಹಾಕಿದ್ದರಿಂದ ಅರಣ್ಯ ಇಲಾಖೆ ಬೋನಿಟ್ಟು ಚಿರತೆಗಳನ್ನು ಸೆರೆ ಹಿಡಿದಿತ್ತು. ಇಷ್ಟಲ್ಲದೆ ಆದಿಚುಂಚನಗಿರಿ ಸುತ್ತಲಿನ ಪ್ರದೇಶಗಳಲ್ಲಿ ಕೆಲದಿನಗಳ ಹಿಂದೆ ಒಟ್ಟು 4 ಚಿರತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದರು.
    ಆದರೆ ಈ ರೀತಿಯಲ್ಲಿ ಚಿರತೆಗಳು ಹಿಂಡು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಜತೆಗೆ ಲಾಕ್‌ಡೌನ್ ಮುಕ್ತಾಯದೊಳಗೆ ಚಿರತೆಗಳನ್ನು ಸೆರೆ ಹಿಡಿಯುವ ಮೂಲಕ ನಿರ್ಭಯವಾಗಿ ಭಕ್ತರು ಆದಿಚುಂಚನಗಿರಿ ಕ್ಷೇತ್ರಕ್ಕೆ ಆಗಮಿಸಲು ಮತ್ತು ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಓಡಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts