More

    ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳವಿರುವ ಕೆಂಪಾಪುರ ಅಭಿವೃದ್ಧಿ ಯಾವಾಗ?

    ಮಾಗಡಿ: ತಾಲೂಕಿನ ಕೆಂಪಾಪುರದಲ್ಲಿ 5 ವರ್ಷದ ಹಿಂದೆ ಪತ್ತೆಯಾಗಿದ್ದ ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಗೊಳಿಸುವುದಾಗಿ ಹೇಳಿ ಹೋದವರು ಇದುವರೆಗೂ ಇತ್ತ ತಿರುಗಿ ನೋಡಿಲ್ಲ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಅಂದಿನ ಬೆಂಗಳೂರು ಮೇಯರ್ ಮಂಜುನಾಥ್, ವಿವಿಧ ಮಠಾಧ್ಯಕ್ಷರು, ಕೆಂಪಾಪುರ ವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡುವ ಜತೆಗೆ ಗ್ರಾಮ ದತ್ತು ಪಡೆದು ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದಿದ್ದ ಭರವಸೆ ಇನ್ನೂ ಈಡೇರಿಲ್ಲ.

    ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಿ 10 ಕೋಟಿ ರೂಪಾಯಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 5 ಕೋಟಿ ರೂಪಾಯಿ, ಬಿಬಿಎಂಪಿಯಿಂದ 5 ಕೋಟಿ ರೂ.ಗಳನ್ನು ನೀಡಲಾಗಿತ್ತು. ಆದರೆ ಗ್ರ್ರಾಮದ ಅಭಿವೃದ್ಧಿಗೆ ಮತ್ತು ಸಮಾಧಿಗೆ ನಯಾ ಪೈಸೆ ಖರ್ಚು ಮಾಡದೆ ಅಷ್ಟೂ ಹಣ ಪ್ರಾಧಿಕಾರದಲ್ಲಿ ವ್ಯರ್ಥವಾಗಿ ಉಳಿದಿದೆ. ಗ್ರಾಮ ಮತ್ತು ಸಮಾಧಿ ಅಭಿವೃದ್ಧಿಗೆ
    ನೀಲಿನಕ್ಷೆ ತಯಾರಿಸಲಾಗಿದೆ ಎಂದು ಜನರನ್ನು ನಂಬಿಸುವುದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಯ್ಯ ಆರೋಪಿಸಿದ್ದಾರೆ.

    ಅಭಿವೃದ್ಧಿಗೆ ಹಣ ಮೀಸಲಿಡಿ: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮಸ್ಥಳಗಳ ಅಭಿವೃದ್ಧಿಗೆ ಮೀಸಲಿಟ್ಟಂತೆ ಕೆಂಪಾಪುರ ಅಭಿವೃದ್ಧಿಗೂ ಹಣ ಮೀಸಲಿಡುವಂತೆ ಗ್ರಾಮದ ಯುವಕರಾದ ಜಿ. ನರಸಿಂಹಮೂರ್ತಿ, ಗಿರೀಶ್ ಮತ್ತಿತರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಸಮಾಧಿಗೆ ಅಲಂಕಾರ: ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಮೇ 11ರಂದು ಸಂಜೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಭೇಟಿ ನೀಡಿ ಕೆಂಪೇಗೌಡರ ವೀರ ಸಮಾಧಿ ಮತ್ತು ಗ್ರಾಮವನ್ನು ವೀಕ್ಷಿಸಿ ಜನರ ಕುಂದುಕೊರತೆ ಆಲಿಸಲಿದ್ದಾರೆ.

    ಉಪಮುಖ್ಯಮಂತ್ರಿ ಭೇಟಿ: ಇದೇ ಹೋಬಳಿಯವರಾದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಕೆಂಪೇಗೌಡರ ಸಮಾಧಿ ಸೇರಿ ಕೋಟೆ, ಕೊತ್ತಲು, ಕೆರೆ, ಕಲ್ಯಾಣಿಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಈ ಹಿಂದೆ ತಿಳಿಸಿದ್ದರು. ಇಂದು ಸಂಜೆ ಕೆಂಪಾಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಇವರ 2ನೇ ಭೇಟಿಯಾಗಿದೆ. ಗ್ರಾಮ ಮತ್ತು ಕೆಂಪೇಗೌಡರ ಸಮಾಧಿ ಅಭಿವೃದ್ಧಿ ಕಾಣಲಿದೆ ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.

    ಕೆಂಪೇಗೌಡ ಸಮಾಧಿ, ಅವರ ಕಾಲದ ಕೆರೆ ಜತೆಗೆ ಗ್ರಾಮ ದತ್ತು ಪಡೆದು ಅಭಿವೃದ್ಧಿಪಡಿಸುವುದು, ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್ ವೃತ್ತ, ಕೆಂಚನಹಳ್ಳಿ ಬಳಿ ಅಶ್ವಾರೂಢ ಕೆಂಪೇಗೌಡರ ಪ್ರತಿಮೆ, ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್‌ನಿಂದ ಕೆಂಪಾಪುರ, ಮಾಗಡಿ ಮುಖ್ಯರಸ್ತೆ ಕೆಂಚನಹಳ್ಳಿವರೆಗೆ ರಸ್ತೆ ಅಭಿವೃದ್ಧಿಪಡಿಸುವಂತೆ ಡಿಸಿಎಂಗೆ ಮನವಿ ಮಾಡಲಾಗುವುದು.
    ಕೆ.ಎಚ್. ಹರೀಶ್ ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts