More

    ನದಿ ಶುದ್ಧೀಕರಣಕ್ಕೆ ಭೂಮಿಪೂಜೆ : ಅರ್ಕಾವತಿ ನದಿ ಪುನಶ್ಚೇತನ ಟ್ರಸ್ಟ್‌ನಿಂದ ಕಾಮಗಾರಿ

    ರಾಮನಗರ: ಅರ್ಕಾವತಿ ನದಿ ಪುನಶ್ಚೇತನ ಟ್ರಸ್ಟ್ ವತಿಯಿಂದ ಕೈಗೊಂಡಿರುವ ನದಿ ಶುದ್ಧೀಕರಣ ಕಾರ್ಯಕ್ಕೆ ಟ್ರಸ್ಟ್‌ನ ಪದಾಧಿಕಾರಿಗಳು ಅರ್ಕೇಶ್ವರ ದೇವಾಲಯದ ಬಳಿ ಸೋಮವಾರ ಬೆಳಗ್ಗೆ ಸಾಂಕೇತಿಕವಾಗಿ ಭೂಮಿ ಪೂಜೆ ನೆರವೇರಿಸಿದರು.

    ನಂತರ ಮಾತನಾಡಿದ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ. ವರದರಾಜಗೌಡ, ನಗರಾಭಿವೃದ್ಧಿ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನದಿ ಪಾತ್ರದ 1 ಕಾರ್ಯ ನಡೆಸಲಾಗುತ್ತದೆ. ನದಿಯಲ್ಲಿರುವ ಹಲವು ಸಮಸ್ಯೆಗೆ ಮುಕ್ತಿ ನೀಡಿ ಮೂಲ ಸ್ವರೂಪ ನೀಡುವ ಕೆಲಸ ಮಾಡಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ 4 ಕಿ.ಮೀ. ಶುದ್ಧೀಕರಣ ಜತೆಗೆ ಜಿಲ್ಲಾಡಳಿತದ ಸಹಕಾರದಲ್ಲಿ ಮಂಚನಬೆಲೆಯಿಂದ ಸಂಗಮದವರಗೆ ಹರಿಯುವ ಅರ್ಕಾವತಿ ನದಿಯನ್ನು ಅಭಿವೃದ್ದಿ ಪಡಿಸಲು ಜಿಪಂ ಕೆಡಿಪಿ ಸದಸ್ಯ ಎಂ.ರುದ್ರೇಶ್ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.

    ಅರ್ಕಾವತಿ ನದಿ ಪಾತ್ರ ಒತ್ತುವರಿ ಯಾಗಿರುವುದರಿಂದ ಸರ್ವೇ ಕಾರ್ಯ ಸಾಧ್ಯವಿಲ್ಲ. ಹಾಗಾಗಿ ಪ್ರಥಮ ಹಂತದಲ್ಲಿ ಗಿಡಗಂಟಿ ಮತ್ತು ಕುರುಚಲು ಗಿಡಗಳನ್ನು ತೆಗೆದು ನದಿಯನ್ನು ಸ್ವಚ್ಛಗೊಳಿಸಿ ಸರ್ವೇ ನಡೆಸಿ ಹಂತ ಹಂತವಾಗಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದಕ್ಕೆ ಒಂದೂವರೆ ವರ್ಷ ಬೇಕಾಗುತ್ತದೆ ಎಂದರು.

    ನರೇಗಾ ಬಳಕೆಗೆ ಅಸ್ತು: ಅರ್ಕಾವತಿ ನದಿ ಪಾತ್ರದ ಎರಡೂ ಕಡೆ ಗ್ರಾಮಾಂತರ ಪ್ರದೇಶದಲ್ಲೂ ಈ ನದಿಗೆ ಕಲುಷಿತ ನೀರು ಬಿಟ್ಟಿರುವುದರಿಂದ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯ ಅನುದಾನ ಬಳಸಿ ಪ್ರಥಮ ಹಂತದಲ್ಲಿ 16 ಕಿ.ಮೀ. ವ್ಯಾಪ್ತಿಯ ನದಿ ಪುನಶ್ಚೇತನಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮತ್ತು ಜಿಪಂ ಸಿಇಒ ಇಕ್ರಂ ಸಮ್ಮತಿಸಿದ್ದಾರೆ. ನದಿಗೆ ಅಡ್ಡಲಾಗಿ ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಲು ಕಾವೇರಿ ನೀರಾವರಿ ನಿಗಮದವರು ಒಪ್ಪಿದ್ದಾರೆ. ಈಗಾಗಲೇ ಕ್ರಿಯಾಯೋಜನೆ ತಯಾರಾಗಿದೆ ಎಂದು ವರದರಾಜಗೌಡ ತಿಳಿಸಿದರು.

    ರಾಮನಗರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಮುರಳೀಧರ್, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ಅರ್ಕೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್.ಆರ್. ವೆಂಕಟೇಶ್, ರಾಮನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ರಾಘವೇಂದ್ರ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಟಿಎಪಿಸಿಎಂ ನಿರ್ದೇಶಕ ನಿಜಲಿಂಗಪ್ಪ, ಅರ್ಕಾವತಿ ಪುನಶ್ಚೇತನ ಟ್ರಸ್ಟ್ ಸದಸ್ಯರಾದ ಅಮಿತ್‌ರಾಜ್, ಪವನ್‌ಗೌಡ, ನಾಗಚಂದ್ರ, ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಬಿ.ನಾಗೇಶ್, ಬಿಜೆಪಿ ಮುಖಂಡರಾದ ಜಿ.ವಿ. ಪದ್ಮನಾಭ್, ರಮೇಶ್, ದೇವಿಕಾ ಅರ್ಕೇಶ್ವರಸ್ವಾಮಿ ದೇವಾಲಯದ ಪಾರುಪತ್ತೇದಾರ ಮಧುರೈೀರನ್, ಧರ್ಮದರ್ಶಿ ಆರ್.ಜಿ.ಚಂದ್ರಶೇಖರ್ ಮತ್ತಿತರರು ಇದ್ದರು.

    ಹುಣಸನಹಳ್ಳಿ ಬಳಿ ಎಸ್‌ಟಿಪಿ: ನಗರ ಪ್ರದೇಶದಲ್ಲಿ ಯುಜಿಡಿ ನೀರು ನದಿಗೆ ಸೇರಿ ನೀರು ಕಲುಷಿತಗೊಂಡಿದ್ದು, ನಗರ ನೀರು ಸರಬರಾಜು ಇಲಾಖೆ ವತಿಯಿಂದ ಪ್ರತ್ಯೇಕ ಪೈಪುಗಳ ಮೂಲಕ ಹುಣಸನಹಳ್ಳಿ ಬಳಿ ಎಸ್‌ಟಿಪಿ ಪ್ಲಾಂಟ್ ನಿರ್ಮಾಣ ಮಾಡಿ ಕಲುಷಿತ ನೀರು ನದಿ ಸೇರದಂತೆ ಯೋಜನೆ ರೂಪಿಸಲಾಗಿದೆ. ಜತೆಗೆ ರಾಮನಗರ ನಗರ ಯೋಜನಾ ಪ್ರಾಧಿಕಾರ, ಬಿಡದಿ-ಬೆಂಗಳೂರು ಸ್ಮಾರ್ಟ್ ಸಿಟಿ ಪ್ರಾಧಿಕಾರ, ಕನಕಪುರ ಯೋಜನಾ ಪ್ರಾಧಿಕಾರಗಳು ನದಿಯ ಸುಂದರೀಕರಣ ಮಾಡಲು ಅಲ್ಲಲ್ಲಿ ಉದ್ಯಾನವನ, ಆಟದ ಮೈದಾನ, ತಡೆಗೋಡೆ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿವೆ. ಇದರ ಜತೆಗೆ ಉಪನಗರ ಹೊರವಲಯ ರಸ್ತೆ ಪ್ರಾಧಿಕಾರದ ವತಿಯಿಂದ ಈಗಾಗಲೇ 5 ಕೋಟಿ ರೂ. ಮೀಸಲಿಟ್ಟಿದ್ದು. ಆ ಮೂಲಕ ಅವರ ವ್ಯಾಪ್ತಿಗೆ ಬರುವ ನದಿಯ ಪುನಶ್ಚೇತನ ಕಾರ್ಯ ಮಾಡಲಿದ್ದಾರೆ ಎಂದು ವರದರಾಜಗೌಡ ಹೇಳಿದರು.

    ಡಿಸಿಎಂ ಚಾಲನೆ: ಮುಂದಿನ ಶುಕ್ರವಾರ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ನಗರಾಭಿವೃದ್ದಿ ಸಚಿವ ಬಿ.ಎ. ಬಸವರಾಜ ಮತ್ತು ಪೌರಾಡಳಿತ ಸಚಿವ ನಾರಾಯಣ ಗೌಡ ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts