ಉತ್ತರಕಾಂಡ ಸಿನಿಮಾದಿಂದ ಹೊರಬಂದಿದ್ದೇಕೆ? ಕೊನೆಗೂ ಮೌನ ಮುರಿದ ನಟಿ ರಮ್ಯಾ

Actress Ramya
Published on

ಬೆಂಗಳೂರು: ಡಾಲಿ ಧನಂಜಯ್​ ಹಾಗೂ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ನಟನೆಯ ಉತ್ತರಕಾಂಡ ಸಿನಿಮಾದಿಂದ ಹೊರ ಬರಲು ಕಾರಣ ಏನೆಂಬುದನ್ನು ಮೋಹಕ ತಾರೆ ರಮ್ಯಾ ಅವರು ತಿಳಿಸಿದ್ದಾರೆ.

ಉತ್ತರಕಾಂಡ ಸಿನಿಮಾ ರಮ್ಯಾ ಅವರ ಕಮ್​ಬ್ಯಾಕ್​ ಸಿನಿಮಾ ಆಗಿತ್ತು. ಆದರೆ, ಚಿತ್ರತಂಡದಿಂದ ಹೊರಬಂದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಕಾರಣ ಏನಿರಬಹುದು ಎಂದು ಯೋಚಿಸುತ್ತಿರುವಾಗಲೇ ರಮ್ಯಾ ಅವರೇ ಸಾಮಾಜಿಕ ಜಾಲತಾಣ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇದೀಗ ನನ್ನ ಆದ್ಯತೆ ಬದಲಾಗಿದೆ ಮತ್ತು ನಾನು ಮಾಡಲೇಬೇಕಿರುವ ಕೆಲಸಗಳಿವೆ. ಹೀಗಾಗಿ ನನ್ನ ಸಿನಿಮಾ ಹಾಗೂ ರಾಜಕೀಯ ಬದ್ಧತೆಗಳಿಗೆ ಬ್ರೇಕ್​ ಹಾಕಿದ್ದೇನೆ. ಬ್ಯುಸಿ ಶೆಡ್ಯೂಲ್​ನಿಂದಾಗಿ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಉತ್ತರಕಾಂಡ ಸಿನಿಮಾದಿಂದ ಹೊರಬಂದಿದ್ದೇನೆ. ಸಿನಿಮಾ ತಂಡಕ್ಕೆ ಒಳ್ಳೆದಾಗಲಿ ಎಂದು ರಮ್ಯಾ ಅವರು ತಿಳಿಸಿದ್ದಾರೆ.

ಸ್ಪಷ್ಟನೆ ನೀಡುವ ಮೂಲಕ ಸಿನಿಮಾಗೆ ಗುಡ್​ಬೈ ಹೇಳಿ ಮತ್ತೆ ರಾಜಕೀಯಕ್ಕೆ ಬರುತ್ತಾರೆ ಎಂಬ ವದಂತಿಗಳಿಗೆ ರಮ್ಯಾ ಪುಲ್​ಸ್ಟಾಪ್​ ಇಟ್ಟಿದ್ದಾರೆ.

ಉತ್ತರಕಾಂಡ ಚಿತ್ರದ ನಿರ್ಮಾಣ ಸಂಸ್ಥೆಯ ಸಹ ರಮ್ಯಾ ಹೊರ ಹೋಗಿರುವುದನ್ನು ದೃಢಪಡಿಸಿದೆ. ಇದೀಗ ರಮ್ಯಾ ಅವರ ಪಾತ್ರಕ್ಕೆ ಬದಲಿ ನಟಿಯನ್ನು ಸಂಸ್ಥೆ ಹುಡುಕುತ್ತಿದೆ. ವರದಿಗಳ ಪ್ರಕಾರ ಚಿತ್ರ ತಂಡ ಸೆಟ್‌ ಕೆಲಸವನ್ನು ಪೂರ್ಣಗೊಳಿಸುತ್ತಿದೆ, ಚಿತ್ರೀಕರಣವು ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ.

ಬರೋಬ್ಬರಿ 10 ವರ್ಷಗಳ ನಂತರ ಉತ್ತರಕಾಂಡ ಸಿನಿಮಾ ಮೂಲಕ ರಮ್ಯಾ ಮತ್ತೆ ಚಿತ್ರರಂಗಕ್ಕೆ ಮರಳುತ್ತಾರೆ ಎಂಬ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net