More

    ಮಂಡ್ಯದಲ್ಲಿ ಮುಗುಳ್ನಗೆಯ ಸಿಂಚನ ಸಕ್ಸಸ್: ರಾಜ್ಯದಲ್ಲೇ ಮೊದಲ ಬಾರಿಗೆ ಪಿಎಚ್‌ಸಿಗಳಲ್ಲೇ ದಂತ ಚಿಕಿತ್ಸೆ ನೀಡುವ ಕಾರ್ಯಕ್ರಮಕ್ಕೆ ಸಕತ್ ಸ್ಪಂದನೆ

    ಮಂಡ್ಯ: ಜನರಿಗೆ ಎದುರಾಗುವ ದಂತ ಸಮಸ್ಯೆಗೆ ಅವರಿಗೆ ಹತ್ತಿರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲಾ ಆರೋಗ್ಯ ಇಲಾಖೆ ರೂಪಿಸಿದ ಮಹತ್ವದ ‘ಮುಗುಳ್ನಗೆಯ ಸಿಂಚನ’ ಯೋಜನೆ ಯಶಸ್ವಿಯಾಗಿದೆ. ಇದರೊಂದಿಗೆ ಲಕ್ಷಾಂತರ ರೂ ಮೌಲ್ಯದ ಯಂತ್ರೋಪಕರಣಗಳನ್ನು ಖರೀದಿಸಿದ್ದಕ್ಕೂ ಸಾರ್ಥಕ ಎನ್ನಿಸಿಕೊಂಡಿದೆ.
    ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ಮೆರೆಗೆ ಈ ಕಾರ್ಯಕ್ರಮ ರೂಪಿಸಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಸಾರ್ವಜನಿಕರು ದಂತಕ್ಕೆ ಸಂಬಂಧಿಸಿದಂತೆ ವಿವಿಧ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಯಿತು. ಪರಿಣಾಮ ಗ್ರಾಮೀಣ ಭಾಗದ ಜನರಿಗೆ ದೊಡ್ಡ ಹೊರೆ ತಪ್ಪಿದಂತಾಗಿದೆ.

    ಮಂಡ್ಯದಲ್ಲಿ ಮುಗುಳ್ನಗೆಯ ಸಿಂಚನ ಸಕ್ಸಸ್: ರಾಜ್ಯದಲ್ಲೇ ಮೊದಲ ಬಾರಿಗೆ ಪಿಎಚ್‌ಸಿಗಳಲ್ಲೇ ದಂತ ಚಿಕಿತ್ಸೆ ನೀಡುವ ಕಾರ್ಯಕ್ರಮಕ್ಕೆ ಸಕತ್ ಸ್ಪಂದನೆ

    ಏನಿದು ಯೋಜನೆ?: ಬಾಯಿ ಅನೇಕ ದೈಹಿಕ ಸಮಸ್ಯೆಗಳ ಆರಂಭಿಕ ಹಂತವನ್ನು ಪ್ರತಿಬಿಂಬಿಸುವುದರಿಂದ ದೈಹಿಕ ಜತೆಗೆ ಬಾಯಿಯ ಪರೀಕ್ಷೆಯೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಬಾಯಿಯ ಆರೋಗ್ಯವು ಆಹಾರವನ್ನು ಅಗಿದು ತಿನ್ನಲು ಸಹಾಯ ಮಾಡುವುದಲ್ಲದೆ ಸ್ಪಷ್ಟವಾದ ಉಚ್ಛಾರಣೆ, ಆತ್ಮವಿಶ್ವಾಸದ ನಗುವಿಗೆ, ಪಚನಕ್ರಿಯೆಗೆ ಸಹಾಯಕ. ಆದರೆ ಶೇ.80ರಷ್ಟು ಜನರು ಒಂದಲ್ಲ ಒಂದು ರೀತಿ ಬಾಯಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರಮುಖವಾಗಿ ದಂತ ಕುಳಿ, ವಸಡಿನ ಸಮಸ್ಯೆ, ಸೀಳುದುಟಿ, ಸೀಳು ಅಂಗಳು, ಪ್ಲೋರೋಸಿಸ್, ಕ್ಯಾನ್ಸರ್‌ನಂತಹ ಮಾರಣಾಂತಿಕ ಸಮಸ್ಯೆ ಬಾಯಿಯನ್ನು ಬಾಧಿಸುತ್ತದೆ. ಇದಕ್ಕೆ ಕಾರಣ ನಿರ್ಲಕ್ಷ್ಯತನ. ಪ್ರಮುಖವಾಗಿ ಗರ್ಭಿಣಿಯರು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ಕಡಿಮೆ ತೂಕದ ಮಗುವಿನ ಜನನ, ಅವಧಿಗೆ ಮುನ್ನ ಪ್ರಸವ, ಸತ್ತ ಮಗುವಿನ ಜನನ ಮುಂತಾದ ಸಮಸ್ಯೆಗೆ ಕಾರಣವಾಗಬಹುದು.
    ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗಲೆಂದು ಪ್ರಾರಂಭಿಸಿದ ಯೋಜನೆ ಮುಗುಳ್ನಗೆಯ ಸಿಂಚನ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿ ದಂತ ಚಿಕಿತ್ಸೆಗಳು ಜನರಿಗೆ ಲಭಿಸುವಂತೆ ಮಾಡುವುದಾಗಿತ್ತು. ಇನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ದಂತಚಿಕಿತ್ಸೆ ಹಳ್ಳಿಗಳಲ್ಲಿ ನೀಡಲು ಯೋಜನೆ ರೂಪಿಸಲಾಯಿತು. ಈ ಮೊದಲು ದಂತ ವೈದ್ಯರು ಹಾಗೂ ದಂತ ಚಿಕಿತ್ಸಾಲಯ ಕೇವಲ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದುದ್ದರಿಂದ ಹೆಚ್ಚಿನ ಜನರು ಇದರ ಉಪಯೋಗ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಮುಗುಳ್ನಗೆಯ ಸಿಂಚನ ಕಾರ್ಯಕ್ರಮದಿಂದಾಗಿ ಸುಲಭವಾಗಿ ದಂತ ಚಿಕಿತ್ಸೆಯನ್ನು ತಜ್ಞ ದಂತ ವೈದ್ಯರ ಸಮಾಲೋಚನೆ ಸಿಗುತ್ತಿದೆ.
    ಪಿಎಚ್‌ಸಿಯಲ್ಲಿ ಚಿಕಿತ್ಸೆ: ಯೋಜನೆ ಯಶಸ್ವಿಗೊಳಿಸಲು ಮೊದಲೇ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಅದರಂತೆ ಒಂದೊಂದು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಯುತ್ತಿದೆ. ಶಿಬಿರ ಆಯೋಜಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಂದ ಆ ಕೇಂದ್ರ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡಲಾಗುವುದು.
    ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಶವೆಂದರೆ ತಪಾಸಣೆ ಜತೆಗೆ ಚಿಕಿತ್ಸೆಗೆ ಅಗತ್ಯವಿರುವ ಔಷಧವನ್ನು ಇಲಾಖೆಯಿಂದಲೇ ಉಚಿತ ನೀಡುವುದಾಗಿದೆ. ಸಣ್ಣಪುಟ್ಟ ರೋಗಕ್ಕೆ ಔಷಧವನ್ನು ವಿತರಿಸುವುದರ ಜತೆಗೆ ಅವಶ್ಯಕತೆ ಇದ್ದರೆ ತಾಲೂಕು ಅಥವಾ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಮಾತ್ರವಲ್ಲದೆ ಈ ಕಾರ್ಯಕ್ರಮದ ಮೂಲಕ ದಂತಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯಲಿದೆ. ರಜಾದಿನವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ನಿರಂತರವಾಗಿ ಶಿಬಿರ ಆಯೋಜನೆಗೊಳ್ಳುತ್ತಿದೆ.
    ಯೋಜನೆಗೆಂದು ಸುಮಾರು ಹತ್ತು ಲಕ್ಷ ರೂ ವೆಚ್ಚದ ಯಂತ್ರವನ್ನು ಖರೀದಿಸಲಾಗಿದೆ. ಇದಕ್ಕೆ ಪೂರಕ ಸಾಮಗ್ರಿಗಳನ್ನು ತರಲಾಗಿದೆ. ಯಂತ್ರಗಳು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದಾಗಿದೆ. ಅಂತೆಯೇ ಮಾರುತಿ ವ್ಯಾನ್ ಕೂಡ ಇದೆ. ಒಟ್ಟಾರೆ ಮಹತ್ವದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಜಿಲ್ಲೆಯ ಜನಸಾಮಾನ್ಯರಿಗೆ ಹೆಚ್ಚಿನ ಸಹಕಾರಿಯಾಲಿದೆ.

    ಮಂಡ್ಯದಲ್ಲಿ ಮುಗುಳ್ನಗೆಯ ಸಿಂಚನ ಸಕ್ಸಸ್: ರಾಜ್ಯದಲ್ಲೇ ಮೊದಲ ಬಾರಿಗೆ ಪಿಎಚ್‌ಸಿಗಳಲ್ಲೇ ದಂತ ಚಿಕಿತ್ಸೆ ನೀಡುವ ಕಾರ್ಯಕ್ರಮಕ್ಕೆ ಸಕತ್ ಸ್ಪಂದನೆ

    60 ಹಳ್ಳಿಯಲ್ಲಿ ಶಿಬಿರ ಯಶಸ್ವಿ
    ಕಾರ್ಯಕ್ರಮಕ್ಕೆ ಫೆ.3ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು. ಇದಾದ ಬಳಿಕ ಸುಸಜ್ಜಿತ ವೈದ್ಯರ ತಂಡ ಪ್ರತಿ ತಿಂಗಳಿನಲ್ಲಿ 26 ದಿನ ಎರಡು ಮೊಬೈಲ್ ದಂತ ಕುರ್ಚಿಗಳನ್ನು ಒಳಗೊಂಡಂತಹ ಒಂದು ವಾಹನದೊಂದಿಗೆ ಪ್ರತಿ ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಂತ ಚಿಕಿತ್ಸೆಗಳನ್ನು ನೀಡುತ್ತಾ ಬಂದಿದೆ.
    ಶಿಬಿರದಲ್ಲಿ ದಂತ ವೈದ್ಯರ ಸಮಾಲೋಚನೆಯೊಂದಿಗೆ ದಂತ ಕುಳಿಯಿದ್ದಲ್ಲಿ ಪುನಃಶ್ಚೇತನಾ ವಸ್ತುವಿನಿಂದ ತುಂಬಿಸುವ, ಅಲ್ಟ್ರಾಸೋನಿಕ್ ಕ್ಲೀನಿಂಗ್, ಬಾಧಿತ ಹಲ್ಲುಗಳನ್ನು ಕೀಳುವ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲುಗಳನ್ನು ಕಳೆದುಕೊಂಡವರು ದಂತ ಭಾಗ್ಯ ಯೋಜನೆಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ದಂತ ಪಂಕ್ತಿಗಳನ್ನು ಒದಗಿಸುವ ಕಾರ್ಯವನ್ನು ಸಹ ಮಾಡಲಾಗುವುದು. ಜಿಲ್ಲೆಯಲ್ಲಿ ಈವರೆಗೆ 60 ಹಳ್ಳಿಗಳಲ್ಲಿ ಶಿಬಿರ ನಡೆದಿದೆ. ಸುಮಾರು 4 ಸಾವಿರ ರೋಗಿಗಳು ತಪಾಸಣೆಗೆ ಒಳಪಟ್ಟು 1,500ಕ್ಕೂ ಹೆಚ್ಚು ಜನರು ದಂತ ಚಿಕಿತ್ಸೆ ಪಡೆದಿದ್ದಾರೆ. 540 ಜನರಿಗೆ ಹಲ್ಲುಗಳನ್ನು ಕೀಳುವ, ಅಂದಾಜು 400 ರೋಗಿಗಳಿಗೆ ಅಲ್ಟ್ರಾಸೋನಿಕ್ ಕ್ಲೀನಿಂಗ್, 400ಕ್ಕೂ ಹೆಚ್ಚು ಹಲ್ಲು ತುಂಬಿಸುವ ಚಿಕಿತ್ಸೆ ಒದಗಿಸಲಾಗಿದೆ. 143 ಫಲಾನುಭವಿಗಳನ್ನು ಗುರುತಿಸಿ ದಂತ ಭಾಗ್ಯ ಯೋಜನೆಯಡಿ ಉಚಿತ ದಂತ ಪಂಕ್ತಿಗಳನ್ನು ಒದಗಿಸುವ ಸೌಕರ್ಯವನ್ನು ಕಲ್ಪಿಸಲಾಗಿದೆ. 500ಕ್ಕೂ ಹೆಚ್ಚು ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಲಾಗಿದೆ.

    ಮಂಡ್ಯದಲ್ಲಿ ಮುಗುಳ್ನಗೆಯ ಸಿಂಚನ ಸಕ್ಸಸ್: ರಾಜ್ಯದಲ್ಲೇ ಮೊದಲ ಬಾರಿಗೆ ಪಿಎಚ್‌ಸಿಗಳಲ್ಲೇ ದಂತ ಚಿಕಿತ್ಸೆ ನೀಡುವ ಕಾರ್ಯಕ್ರಮಕ್ಕೆ ಸಕತ್ ಸ್ಪಂದನೆ

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಂತ ತಪಾಸಣೆ, ಚಿಕಿತ್ಸೆ ಕೊಡಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ಯೋಜನೆ ಜಾರಿಗೊಳಿಸಲಾಗಿತ್ತು. ಜಿಲ್ಲೆಯಲ್ಲಿ ಇದು ಯಶಸ್ವಿಯಾಗಿ ಅನುಷ್ಠಾನವಾಗಿದ್ದು, ಯೋಜನೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ.
    ಡಾ.ಕೆ.ಮೋಹನ್
    ಜಿಲ್ಲಾ ಆರೋಗ್ಯಾಧಿಕಾರಿ

    ಮಂಡ್ಯದಲ್ಲಿ ಮುಗುಳ್ನಗೆಯ ಸಿಂಚನ ಸಕ್ಸಸ್: ರಾಜ್ಯದಲ್ಲೇ ಮೊದಲ ಬಾರಿಗೆ ಪಿಎಚ್‌ಸಿಗಳಲ್ಲೇ ದಂತ ಚಿಕಿತ್ಸೆ ನೀಡುವ ಕಾರ್ಯಕ್ರಮಕ್ಕೆ ಸಕತ್ ಸ್ಪಂದನೆ

    ದಂತ ಚಿಕಿತ್ಸೆಗೆಂದು ನಗರ, ಪಟ್ಟಣದತ್ತ ಬರಬೇಕಿತ್ತು. ಪ್ರಮುಖವಾಗಿ ವೃದ್ಧರು ಹಾಗೂ ಗರ್ಭೀಣಿಯರು ಇದಕ್ಕಾಗಿಯೇ ಚಿಕಿತ್ಸೆಗೊಳಪಡಲು ಹಿಂಜರಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಗಳ ಕಡೆಗೆ ದಂತ ಚಿಕಿತ್ಸೆ ಎನ್ನುವ ಉದ್ದೇಶದೊಂದಿಗೆ ಕಾರ್ಯಕ್ರಮ ರೂಪಿಸಲಾಗಿತ್ತು. ಜಿಲ್ಲೆಯಲ್ಲಿ 60 ಹಳ್ಳಿಗಳಲ್ಲಿ ಶಿಬಿರ ನಡೆದಿದೆ. ಅಂತೆಯೇ ಯೋಜನೆ ಯಶಸ್ವಿಯೂ ಆಗಿದೆ.
    ಡಾ.ಎಚ್.ಆರ್.ಅರುಣಾನಂದ
    ಜಿಲ್ಲಾ ದಂತ ನೋಡೆಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts