More

    ಸ್ಚಚ್ಛಭಾರತ್‌ನಿಂದ ಸ್ವಸ್ಥಭಾರತ್ ; ಪ.ಯೋ.ಶಿ.ಸ. ರಥಸಪ್ತಮಿ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಅಭಿಮತ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಕೆಲ ವರ್ಷಗಳ ಹಿಂದೆ ಘೋಷಿಸಿದ ಸ್ವಚ್ಛಭಾರತ್ ಪರಿಕಲ್ಪನೆಯ ಹಿಂದೆ ಸ್ವಸ್ಥಭಾರತ್ ಗುಟ್ಟು ಅಡಗಿದೆ. ದೇಶದಾದ್ಯಂತ ನಿಧಾನವಾಗಿ ಇದು ಅನುಷ್ಟಾನಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಿಸಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಹಮ್ಮಿಕೊಂಡಿದ್ದ ರಥಸಪ್ತಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮ ನಡೆದ ನಂತರ ಕಾರ್ಯಕ್ರಮ ಆಯೋಜನೆ ಮಾಡಿದ ಸಂಸ್ಥೆಗಳು ಅಲ್ಲಿನ ಸ್ವಚ್ಛತೆ ಬಗ್ಗೆ ಗಮನಹರಿಸುವುದಿಲ್ಲ. ಆದರೆ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯು ಕಾರ್ಯಕ್ರಮದ ನಂತರ ಕಾರ್ಯಕ್ರಮ ಆಯೋಜಿಸಿದ್ದ ನ್ಯಾಷನಲ್ ಕಾಲೇಜು ಮೈದಾನವನ್ನು ಸ್ವಚ್ಛಗೊಳಿಸಿ ಸ್ವಚ್ಛಭಾರತ್ ಸ್ವಸ್ಥಭಾರತ್ ಸಂದೇಶವನ್ನು ಎತ್ತಿ ಹಿಡಿದಿದೆ.

    ಭಾರತದ ಯೋಗವಿದ್ಯೆಯನ್ನು ಇಡೀ ಜಗತ್ತು ಸ್ವೀಕಾರ ಮಾಡಿದ್ದು, ವಿಶ್ವಸಂಸ್ಥೆ ವಿಶ್ವ ಯೋಗದಿನಾಚರಣೆಯನ್ನು ಮಾಡುತ್ತಿದೆ. ಯೋಗದ ಪ್ರಮುಖ ಭಾಗವಾಗಿರುವ ಸೂರ್ಯನಮಸ್ಕಾರದಿಂದ ದೇಹದ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪತಂಜಲಿ ಯೋಗಶಿಕ್ಷಣ ಸಮಿತಿಯು ರಥಸಪ್ತಮಿಯಂದು 108 ಸೂರ್ಯ ನಮಸ್ಕಾರ ಮತ್ತು 1008 ಅಗ್ನಿಹೋತ್ರ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.

    ಕಳೆದ 44 ವರ್ಷಗಳಿಂದ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯು ಕಳೆದ 9 ವರ್ಷಗಳಿಂದ ರಥಸಪ್ತಮಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ವರ್ಷದ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನ ಪಾಲ್ಗೊಂಡು 108 ಸಾಮೂಹಿಕ ಸೂರ್ಯ ನಮಸ್ಕಾರವನ್ನು ಮಾಡಿದರು.

    ಸಂಸ್ಥೆಯ ಮುಖ್ಯಸ್ಥರಾದ ರೆಡ್ಡಯ್ಯ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ವಿಸ್ತಾರ ಪ್ರಮುಖರಾದ ಮಾದೇವರಾವ್ ಅಧ್ಯಕ್ಷತೆ ವಹಿಸಿದ್ದರು. ವೃಷಭಾವತಿ ವಲಯ ಸಂಚಾಲಕರಾದ ಗಣೇಶ, ಸಂಘಟನ ಪ್ರಮುಖರಾದ ಪ್ರಕಾಶ, ಶಿಕ್ಷಣ ಪ್ರಮುಖರಾದ ದೇವರಾಜ, ನಂದಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts