More

    ಸಂಕಷ್ಟದಲ್ಲಿ ಶುಲ್ಕ ರಿಯಾಯಿತಿ ನೀಡಿ ; ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಸ್. ಮುನಿಸ್ವಾಮಿ ಸಲಹೆ

    ಕೋಲಾರ: ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟ ಕಾಲದಲ್ಲಿ ಮಕ್ಕಳ ಪಾಲಕರಿಗೆ ಶುಲ್ಕದಲ್ಲಿ ರಿಯಾಯಿತಿ ನೀಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ನಗರದ ಹಾಲಿಸ್ಟರ್ ಸ್ಮಾರಕ ಭವನದಲ್ಲಿ ಶನಿವಾರ ಕ್ಯಾಮ್ಸ್ ಆಯೋಜಿಸಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕರೊನಾದಿಂದಾಗಿ ಹಣ ಗಳಿಸುವುದು ಕಷ್ಟವಿದೆ. ಸರ್ಕಾರವೇ ಶಾಲೆ ನಡೆಸಲು ಆಗುತ್ತಿಲ್ಲ, ಬಡ ಪಾಲಕರೂ ಇರುತ್ತಾರೆ, ಹಣ ಮುಖ್ಯವಲ್ಲ, ಮಾನವೀಯತೆ ಗುಣ ಹೊಂದಬೇಕು ಎಂದು ಕಿವಿಮಾತು ಹೇಳಿದರು.

    ಕರೊನಾದಿಂದಾಗಿ ಶಾಲೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ, ಮಕ್ಕಳು ಬರದಿದ್ದರೂ, ಖಾಸಗಿ ಶಾಲೆಯ ವ್ಯವಸ್ಥಾಪಕರು ಕಟ್ಟಡ ನಿರ್ವಹಣೆ, ಸಿಬ್ಬಂದಿ ವೇತನ ಪ್ರತಿಯೊಂದು ನೋಡಿಕೊಳ್ಳುವ ಜವಾಬ್ದಾರಿ ಇದೆ. ಆದರೆ, ಸರ್ಕಾರಕ್ಕೂ ತೊಂದರೆಯಿದೆ, ಸಂದರ್ಭಾನುಸಾರ ಎಲ್ಲರೂ ಸರಿದೂಗಿಸಿಕೊಂಡು ನಡೆಯಬೇಕಿದೆ. ಶಿಕ್ಷಣ ಸಚಿವರ ಬಳಿ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

    ಶಿಕ್ಷಕರ ದಿನ, ಗುರುವಂದನಾ ಕಾರ್ಯಕ್ರಮ ಸರ್ಕಾರಿ ಹಾಗೂ ಖಾಸಗಿ ಶಿಕ್ಷಕರು ಒಟ್ಟಿಗೆ ನಡೆಸಬೇಕು. ಬೇರೆ ಬೇರೆ ನಡೆಸುವುದರಿಂದ ವಿದ್ಯೆ, ಬುದ್ಧಿ ಕಲಿಸುವ ಶಿಕ್ಷಕರಲ್ಲೆ ಒಗ್ಗಟ್ಟಿಲ್ಲ ಎಂಬ ತಪ್ಪು ಸಂದೇಶ ಸಮಾಜಕ್ಕೆ ರವಾನೆಯಾಗಬಾರದು. ವಿದ್ಯಾರ್ಜನೆ ಜತೆಗೆ ಮಕ್ಕಳಿಗೆ ಬೇರೆ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದರು.

    ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸಂಬಳ ಬರುತ್ತೆ. ಆದರೆ, ಖಾಸಗಿ ಶಿಕ್ಷಕರು ತಮ್ಮ ನೈಪುಣ್ಯತೆ, ಪಾಠ ಮಾಡುವ ಶೈಲಿಯಿಂದ ಖಾಸಗಿ ವಿದ್ಯಾಸಂಸ್ಥೆಗಳು ಬೆಳೆಯುತ್ತಿದೆ. ಶಿಕ್ಷಕರು ನೀಡುವ ಜ್ಞಾನದಿಂದ ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ ಎಂದರು.

    ವಿಧಾನಪರಿಷತ್ ಸದಸ್ಯರ ಇಂಚರ ಗೋವಿಂದರಾಜು ಮಾತನಾಡಿ, ಖಾಸಗಿ ಶಾಲೆಗಳು ವೇಗವಾಗಿ ಮುಂಚೂಣಿಗೆ ಬರುತ್ತಿವೆ. ಆದರೆ, ಕೋವಿಡ್‌ನಿಂದಾಗಿ ಬೆಳವಣಿಗೆ ಕುಂಠಿತವಾಗಿದೆ. ಈ ನಿಮ್ಮತೊಂದರೆ, ವೇತನ ಮುಂತಾದ ಹಲವಾರು ಸಮಸ್ಯೆ ಸರಿಪಡಿಸಲು ಸೋಮವಾರದಿಂದ ನಡೆಯುವ ಕಲಾಪದಲ್ಲಿ ನಿಮ್ಮ ಪರ ಚರ್ಚೆ ನಡೆಸುತ್ತೇನೆ ಎಂದು ನುಡಿದರು.

    ಉತ್ತಮ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು. ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್, ಬಿಇಒ ಎ.ಬಿ.ರಾಮಕೃಷ್ಣ, ಕ್ಯಾಮ್ಸ್ ಜಿಲ್ಲಾಧ್ಯಕ್ಷ ಎ.ಸದಾನಂದ, ತಾಲೂಕು ಅಧ್ಯಕ್ಷ ಬಿ.ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ವಿ.ನಾಗಭೂಷಣ್, ಗೌರವಾಧ್ಯಕ್ಷ ಡಿ.ಮುನಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಪದಾಧಿಕಾರಿಗಳಾದ ವೈ.ಸಿ.ಮುನೇಗೌಡ, ಎ.ರಾಮಕೃಷ್ಣಪ್ಪ, ಆರ್.ಶಂಕರಪ್ಪ, ಜಿ.ಕೆ.ಪುರುಷೋತ್ತಮ್, ಶಕೀಲ್ ಅಹಮದ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts