

ಬೈತೂಲ್: ಕಬ್ಬಿಣದ ರಾಡ್ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದು ನಿಯಂತ್ರಣ ತಪ್ಪಿ ತವಾ ನದಿ ಸೇತುವೆಯಿಂದ ಕೆಳಕ್ಕುರುಳಿದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಸ್ಥಾನದಿಂದ 50 ಕಿ.ಮೀ. ದೂರದಲ್ಲಿ ನಿನ್ನೆ ತಡರಾತ್ರಿ ಈ ದುರಂತ ಸಂಭವಿಸಿದೆ. ಕಬ್ಬಿಣದ ರಾಡ್ ತುಂಬಿದ್ದ ಟ್ರಕ್ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿದೆ. ಪರಿಣಾಮ ಟ್ರಕ್ನಲ್ಲಿದ್ದ ಐವರು ಕಾರ್ಮಿಕರು ಅದರ ನಡುವೆ ಸಿಲುಕಿ ಮೃತಪಟ್ಟರೆ, ಅಪಘಾತಕ್ಕೀಡಾದ ಬೆನ್ನಿಗೆ ಚಾಲಕ ಮೃತಪಟ್ಟಿದ್ದಾನೆ. ನಿಯಂತ್ರಣ ಕಳೆದುಕೊಂಡ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಮೃತರನ್ನು ರಿಕೇಶ್ (25), ಬಬ್ಲು ಭಾಲವಿ (24), ದಿಲೀಪ್ ಉಯ್ಕೆ (26), ಸಂಜು ಬಟ್ಕೆ (40), ಮುನ್ನಾ ಸಲಾಂ (24), ಚಾಲಕ ಮನೋಹರ್ ಸಾಹು (38) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೈತೂಲ್ ಜಿಲ್ಲೆಯ ಪಿಪ್ರಿ ಗ್ರಾಮದವರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು. ತನಿಖೆ ನಡೆದಿದೆ. (ಏಜೆನ್ಸೀಸ್)