More

    ವಿಧಾನ ಪರಿಷತ್ ಅಖಾಡದಲ್ಲಿ ಕುಸ್ತಿಗಿಳಿದವರು ಕೋಟಿ ಕೋಟಿ ಆಸ್ತಿವಂತರು!

    ಬೆಂಗಳೂರು: ವಿಧಾನಪರಿಷತ್​ ಚುನಾವಣೆಗೆ ಮೇಲ್ಮನೆಗೆ ಹೋಗಲು ಆಕಾಂಕ್ಷಿಗಳಾಗಿರುವ ರಾಜ್ಯದಲ್ಲಿನ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಬಹುತೇಕರು ಕೈಗೆಟುಕುವಂಥವರೇ ಎಂಬ ಅನುಮಾನ ಕೆಲವು ಸಾರ್ವಜನಿಕರಲ್ಲಿ ಮೂಡಿದರೂ ತಪ್ಪೇನಲ್ಲ. ಏಕೆಂದರೆ ಪರಿಷತ್ ಅಖಾಡದಲ್ಲಿ ಕುಸ್ತಿಗಿಳಿದವರು ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಆಸ್ತಿವಂತರೇ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​, ಅಭ್ಯರ್ಥಿಗಳು ತಮ್ಮ ಸ್ಥಿರ, ಚರಾಸ್ತಿ, ಹೂಡಿಕೆಗಳ ಬಗ್ಗೆ ಪ್ರಮಾಣಪತ್ರ ನೀಡಿದ್ದು, ಕೆಲವು ಕೋಟ್ಯಧಿಪತಿಗಳ ಮಾಹಿತಿ ಇಲ್ಲಿದೆ.

    ಅಬ್ಬಬ್ಬ.. ಕೋಟ್ಯಧಿಪತಿ ಅಪ್ಪಾಜಿ

    ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಎನ್. ಅಪ್ಪಾಜಿಗೌಡ ಬಳಿ 1,21,200ರೂ. ನಗದು ಇದೆ. ವಿವಿಧ ಬ್ಯಾಂಕ್​ಗಳಲ್ಲಿರುವ ಬ್ಯಾಲೆನ್ಸ್, ಠೇವಣಿ, ಹೂಡಿಕೆಗಳ ಮೊತ್ತ 20.70 ಕೋಟಿ ರೂ. ಸ್ಥಿರ, ಚರಾಸ್ತಿ, ಹೂಡಿಕೆ, ನಗರ ಸೇರಿ ಒಟ್ಟಾರೆ 36.45 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇವರ ಬಳಿ ಮಾರುತಿ ಸ್ವಿಫ್ಟ್ ಹಾಗೂ ಫಾರ್ಚ್ಯೂನರ್ ಕಾರುಗಳಿವೆ. ಇವರ ಪತ್ನಿ ಡಿ.ಟಿ.ಮಧುರಮಣಿ ಕೈಯಲ್ಲಿ 81,400ರೂ. ನಗದು ಹೊಂದಿದ್ದರೂ ಬ್ಯಾಂಕ್ ಬ್ಯಾಲೆನ್ಸ್, ಹೂಡಿಕೆ, ಠೇವಣಿಗಳ ಮೌಲ್ಯ 7.44 ಕೋಟಿ ರೂ.ಗಳಾಗಿವೆ. ಇವರ ಒಟ್ಟಾರೆ ಆಸ್ತಿ ಮೌಲ್ಯ 24.83 ಕೋಟಿ ರೂ. ಪತಿ-ಪತ್ನಿ ಇಬ್ಬರೂ ಕೋಟ್ಯಂತರ ರೂ. ಸಾಲ ತೋರಿಸಿದ್ದಾರೆ.

    ಬಿಜೆಪಿ ಬೂಕಹಳ್ಳಿ ಮಂಜು 50.97 ಕೋಟಿ ರೂ. ಮೌಲ್ಯದ ಚರಾಸ್ತಿ, 15.70 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ 15.69 ಕೋಟಿ ರೂ. ಸಾಲ ಮಾಡಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರಿಗಿಂತ ಪತ್ನಿಯೇ ಶ್ರೀಮಂತೆ. ದಿನೇಶ್ 2.19 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೆ, ಪತ್ನಿ ವಿ.ಕೆ.ಅಶ್ವಿನಿ ಬೆಂಗಳೂರಿನಲ್ಲಿ 5.67 ಕೋಟಿ ರೂ. ಮೌಲ್ಯದ ಪ್ಲಾಟ್ ಹೊಂದಿದ್ದಾರೆ. 4.90 ಕೋಟಿ ರೂ. ಸಾಲವನ್ನೂ ತೋರಿಸಿದ್ದಾರೆ.

    ಇಲ್ಲಿದೆ ನೋಡಿ ದೇವೇಗೌಡರ ಮೊಮ್ಮಗನ ಆಸ್ತಿ ಪಟ್ಟಿ

    ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಸೂರಜ್ ರೇವಣ್ಣ 61,68,22,761 ರೂ. ಮೌಲ್ಯದ ಚಿರಾಸ್ತಿ ಹಾಗೂ 3,53,16,463 ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 65,21,39,224 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದು, 14.97 ಕೋಟಿ ರೂ.ಸಾಲ ಹೊಂದಿದ್ದಾರೆ. ಸ್ವಯಾರ್ಜಿತವಾದ 46,66,43,186 ರೂ. ಮೌಲ್ಯದ ಹಾಗೂ ಪಿತ್ರಾರ್ಜಿತವಾದ 15,01,79,575 ರೂ. ಮೌಲ್ಯದ ಸ್ಥಿರಾಸ್ತಿಯ ಮಾಲೀಕತ್ವ ಹೊಂದಿದ್ದಾರೆ. ಅಲ್ಲದೆ 2017-18 ರಿಂದ ಕೃಷಿ ಆದಾಯ ಪಡೆಯುತ್ತಿದ್ದು, 2020-21 ನೇ ಸಾಲಿನಲ್ಲಿ 11,27,858 ಗಳಿಸಿದ್ದಾರೆ. ಸೂರಜ್ ರಾಜೀವ್​ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್, ಎಂಎಸ್ ಇನ್ ಜನರಲ್ ಸರ್ಜರಿ ಪದವಿ ಪಡೆದಿದ್ದಾರೆ.

    ಕೋಟ ಬಳಿಯೂ ಕೋಟಿ…

    ದಕ್ಷಿಣಕನ್ನಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ 26.86 ಲಕ್ಷ ರೂ. ಹಾಗೂ ಅವರ ಪತ್ನಿ ಶಾಂತಾ 7.41 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 36 ಲಕ್ಷ ರೂ. ಮೌಲ್ಯದ ಸ್ವಯಾರ್ಜಿತ ಸ್ಥಿರಾಸ್ತಿ ಹಾಗೂ ಪತ್ನಿ 1.37 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹೊಂದಿದ್ದಾರೆ. ಕೋಟ ಅವರಿಗೆ ಯಾವುದೇ ಸಾಲ ಇಲ್ಲ. ಪತ್ನಿ ಹೆಸರಲ್ಲಿ 40 ಲಕ್ಷ ರೂ.ಗೃಹ ಸಾಲವಿದೆ.


    ಶಿವ’ಮೊಗ್ಗಿ’ನಲಿ ಅರಳಿದ ಕೋಟ್ಯಧೀಶರು

    ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ 10 ಕೋಟಿ ರೂ. ಮೌಲ್ಯದ ಆಸ್ತಿಗೆ ಒಡೆಯ. ಅವರ ಪತ್ನಿ ಪ್ರತಿಭಾ ಮೂರು ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ 18.15 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 1.21 ಕೋಟಿ ರೂ. ಮೌಲ್ಯದ ಚರಾಸ್ತಿ ಘೊಷಿಸಿಕೊಂಡಿದ್ದಾರೆ. 8.60 ಲಕ್ಷ ರೂ. ಸಾಲ ಮಾಡಿದ್ದಾರೆ.

    ಹಣವಂತ ಸುನೀಲ ಗೌಡ

    ವಿಜಯಪುರ-ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ 1.15 ಲಕ್ಷ ರೂ.ನಗದು, ಚಿನ್ನ 102 ತೊಲ, ವಿವಿಧ ಬ್ಯಾಂಕ್ ಅಕೌಂಟ್, ಮ್ಯೂಚುವಲ್ ಫಂಡ್, ಷೇರು, ವಿಮೆ ಸೇರಿ 12,51,05,280 ರೂ. ಮೊತ್ತದ ಚರಾಸ್ತಿ. ವಾಣಿಜ್ಯ ಕಟ್ಟಡಗಳು, ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ವಸತಿ ಕಟ್ಟಡಗಳು ಸೇರಿ 13,93,05,340 ರೂ. ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ. 7,96,94,063 ರೂ. ಸಾಲವೂ ಇದೆ. ಪತ್ನಿ ರೇಣುಕಾ ಹೆಸರಲ್ಲಿ 2,18,15,184 ರೂ. ಮೊತ್ತದ ಚರಾಸ್ತಿ, 5,91,70,550 ರೂ. ಮೊತ್ತದ ಸ್ಥಿರಾಸ್ತಿ ಇದೆ. 1,84,78,665 ರೂ. ಸಾಲ ಇದೆ.

    ಸಾಲದೆಂಬಷ್ಟಿದ್ದರೂ ಸಾಲದ್ದು..

    ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್. ಅನಿಲ್​ಕುಮಾರ್ ಬಳಿ 78,93,000 ರೂ. ಮೌಲ್ಯದ ಚರಾಸ್ತಿ ಹಾಗೂ 15 ಲಕ್ಷ ರೂ. ಮೌಲ್ಯದ ಕೃಷಿಭೂಮಿ ಹೊಂದಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ 14.36 ಲಕ್ಷ ವಾಹನ ಸಾಲ ಹೊಂದಿದ್ದರೆ, ಬೆಂಗಳೂರಿನ ಬ್ಯಾಂಕ್​ನಲ್ಲಿ 2.63 ಕೋಟಿ ರೂ. ಸಾಲ ಇದೆ.

    ಪತ್ನಿ ಬಳಿ 20,000 ರೂಪಾಯಿ, 16 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ, ಕೋಲಾರದ ಕಾಳಹಸ್ತಿಪುರದಲ್ಲಿ 3,000 ಚದರ ಅಡಿ ಹಾಗೂ ಬೆಂಗಳೂರಿನ ಮಾರತನಹಳ್ಳಿಯಲ್ಲಿ 2400 ಚದರ ಅಡಿ ಕೃಷಿಯೇತರ ಭೂಮಿ ಇದ್ದು, ಒಟ್ಟು ಮಾರುಕಟ್ಟೆ ಮೌಲ್ಯ 29.47 ಲಕ್ಷ ರೂ.

    ಕೆಜಿಎಫ್ ಬಾಬು ಬಳಿ ಬ(ಮೊ)ಗೆದಷ್ಟೂ ಹಣ

    ಬೆಂಗಳೂರು ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯೂಸುಫ್ ಷರೀಫ್ ಅತ್ಯಂತ ಶ್ರೀಮಂತ ವ್ಯಕ್ತಿ. ಕೆಜಿಎಫ್ ಬಾಬು ಎಂದೇ ಪ್ರಸಿದ್ಧರಾಗಿರುವ ಯೂಸುಫ್ ಒಟ್ಟು 1,643 ಕೋಟಿ ರೂ. ಮೌಲ್ಯದ ಆಸ್ತಿ ಘೊಷಣೆ ಮಾಡಿಕೊಂಡಿದ್ದಾರೆ. ಇವರ ಪತ್ನಿ ಹೆಸರಿನಲ್ಲಿ 3 ಕೋಟಿ ರೂ. ಆಸ್ತಿ ಇದೆ. ಯೂಸುಫ್ ಚರಾಸ್ತಿ 98 ಕೋಟಿ ರೂ. ಮೌಲ್ಯದ್ದಾಗಿದೆ. 67. 24 ಕೋಟಿ ರೂ. ಸಾಲ ಹೊಂದಿದ್ದಾರೆ. 12 ಬ್ಯಾಂಕ್ ಖಾತೆಗಳನ್ನು ಹೊಂದಿರುವ ಯೂಸುಫ್ ಬ್ಯಾಂಕ್ ಖಾತೆಗಳಲ್ಲಿ 16.87 ಕೋಟಿ ರೂ., ಮೊದಲ ಪತ್ನಿ ಬ್ಯಾಂಕ್ ಖಾತೆಯಲ್ಲಿ 24 ಲಕ್ಷ ರೂ., 2ನೇ ಪತ್ನಿ ಬ್ಯಾಂಕ್ ಖಾತೆಯಲ್ಲಿ 14.70 ಲಕ್ಷ ಸಾವಿರ ರೂ. ಠೇವಣಿ ಇರಿಸಿದ್ದಾರೆ. ಯೂಸುಫ್ ಹೆಸರಿನಲ್ಲಿ 1 ರೋಲ್ಸ್ ರಾಯ್, 2 ಫಾರ್ಚುನರ್ ಸೇರಿ ಮೂರು ಐಷಾರಾಮಿ ಕಾರುಗಳಿವೆ. ಈ ಕಾರುಗಳ ಮೌಲ್ಯ 2.99 ಕೋಟಿ ರೂ. ಯೂಸುಫ್ ಹೆಸರಿನಲ್ಲಿ ಒಂದೂವರೆ ಕೆಜಿ ಚಿನ್ನವಿದ್ದರೆ, ಮೊದಲ ಪತ್ನಿ ಹೆಸರಲ್ಲಿ ಒಂದೂವರೆ ಕೆಜಿ ಚಿನ್ನವಿದೆ.

    ಎರಡನೇ ಪತ್ನಿ ಹೆಸರಲ್ಲಿ ಅರ್ಧ ಕೆಜಿ ಚಿನ್ನವಿದೆ. ಯೂಸುಫ್ ಪುತ್ರನ ಹೆಸರಿನಲ್ಲಿ 1 ಕೆಜಿ ಚಿನ್ನವಿದೆ. ಯೂಸುಫ್ ವಿರುದ್ಧ 4 ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ನಾಮಪತ್ರದಲ್ಲಿ ಹೇಳಲಾಗಿದೆ.

    ಮಂಜೇಗೌಡರದ್ದು ಭಾರಿ ‘ಕಾರು’ಬಾರು

    ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಕೋಟ್ಯಧಿಪತಿಯಾಗಿದ್ದು, ವಾಹನಗಳ ಮೇಲೆ ವಿಶೇಷ ಒಲವು ಹೊಂದಿದ್ದಾರೆ. ಅವರ ಬಳಿ ಆಡಿ ಕ್ಯೂ 7, ಬಿಎಂಡಬ್ಲ್ಯು 3 ಸೀರಿಸ್, ಹುಂಡೈ ಕ್ರೆಟಾ, ಚವರ್ಲೆಟ್ ಬೀಟ್, ಟೊಯೊಟಾ ಫಾರ್ಚೂನರ್, ಬೊಲೆರೊ ಪಿಕಪ್, ಮಹೇಂದ್ರ ಮ್ಯಾಕ್ಸಿ ಟ್ರಕ್, ಟಿವಿಎಸ್ ಜುಪೀಟರ್ ಸ್ಕೂಟರ್, ಹೀರೊ ಸ್ಪೆ್ಲಂಡರ್ ಬೈಕ್, ಟಾಟಾ ವಾಟರ್ ಟ್ಯಾಂಕರ್ ಹೊಂದಿದ್ದಾರೆ. ಪತ್ನಿ ಮಹಾಲಕ್ಷ್ಮೀ ಹುಂಡೈ ವರ್ನಾ ಕಾರು ಹೊಂದಿದ್ದಾರೆ. ಮಂಜೇಗೌಡ 5.60 ಕೋಟಿ ರೂ ಸ್ಥಿರಾಸ್ತಿ, 2.16 ಕೋಟಿ ಚರಾಸ್ತಿ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್.ರಘು 24 ಕೋಟಿ ರೂ. ಆಸ್ತಿಯ ಒಡೆಯ. 8 ಕೋಟಿ ರೂ. ಸಾಲವನ್ನೂ ಮಾಡಿದ್ದಾರೆ. ಆದರೆ ರಘು ಬಳಿ ಚಿನ್ನಾಭರಣವಿಲ್ಲ.

    ‘ಕೋಟೆ’ಯೊಳಗೂ ಕೋಟಿವೀರರು

    ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ 26.78 ಕೋಟಿ ರೂ. ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ನ ಕೆ.ಸಿ.ಕೊಂಡಯ್ಯ 5.53 ಕೋಟಿ ರೂ. ಚರಾಸ್ತಿ, 1.20ಕೋಟಿ ರೂ.ಸ್ಥಿರಾಸ್ತಿ ಸೇರಿ 6.73.ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ರೆಡ್ಡಿ 84.79 ಕೋಟಿ ರೂ.ಚಿರಾಸ್ತಿ, 11.54 ಕೋಟಿ ರೂ. ಸ್ಥಿರಾಸ್ತಿ ಸೇರಿ 96.34 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ರಾಯಚೂರು-ಕೊಪ್ಪಳ ಕ್ಷೇತ್ರದ ಕಾಂಗ್ರೆಸ್​ನ ಶರಣಗೌಡ ಬಯ್ಯಾಪುರ 15.90 ಕೋಟಿ ರೂ. ಚರಾಸ್ತಿ, 15.30 ಕೋಟಿ ರೂ. ಸ್ಥಿರಾಸ್ತಿ ಸೇರಿ 31.20.ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಡೇಪಂಡ ಸುಜಾಕುಶಾಲಪ್ಪ 26.22 ಕೋಟಿ ರೂ. ಮೌಲ್ಯದ ಆಸ್ತಿ ಘೊಷಿಸಿದ್ದಾರೆ.

    ಬಿಜಿಪಿ ಆಸ್ತಿ 51.60 ಕೋಟಿ ರೂಪಾಯಿ: ಕಲಬುರಗಿ-ಯಾದಗಿರಿಯಲ್ಲಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಡಾ.ಬಿ.ಜಿ. ಪಾಟೀಲ್ ಕೋಟ್ಯಧೀಶರರಿದ್ದಾರೆ. ಇವರ ಸ್ಥಿರ ಹಾಗೂ ಚರಾಸ್ತಿ ಮೌಲ್ಯ 51.60 ಕೋಟಿ ರೂ. ದಾಟಿದೆ. ಪಾಟೀಲ್ ಮತ್ತು ಪರಿವಾರದ ಸದಸ್ಯರಲ್ಲಿ ಒಟ್ಟು 5.26 ಕೆಜಿ ಚಿನ್ನವಿದ್ದು, ಇದರ ಮೌಲ್ಯ 1.76 ಕೋಟಿ ರೂ. ಇದೆ.

    ಕ್ರಿಕೆಟ್​ ಗಾಡ್ ಮತ್ತು ಡಾಗ್​: ಈ ನಾಯಿ ಕೀಪಿಂಗೂ ಮಾಡುತ್ತೆ, ಫೀಲ್ಡಿಂಗೂ ಮಾಡುತ್ತೆ; ಇದಕ್ಕೆ ಏನೆನ್ನೋಣ ಹೇಳಿ ಎಂದು ಕೇಳಿದ ಸಚಿನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts