More

    ಮೈಸೂರು ಮಾರಮ್ಮ ಜಾತ್ರೋತ್ಸವ

    ಹನೂರು: ಪಟ್ಟಣದ ಶ್ರೀ ಮಹಿಷಾಸುರ ಮರ್ದಿನಿ(ಮೈಸೂರು ಮಾರಮ್ಮ) ದೇಗುಲದಲ್ಲಿ ಜಾತ್ರೋತ್ಸವದ ಮೊದಲ ದಿನದ ಅಂಗವಾಗಿ ಸೋಮವಾರ ರಾತ್ರಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಜಾಗರ ಸಮರ್ಪಿಸಿದರು.


    ಜಾತ್ರೋತ್ಸವದ ಅಂಗವಾಗಿ ದೇವಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ದೇಗುಲ ಸೇರಿದಂತೆ ಆವರಣವನ್ನು ವಿವಿಧ ಪುಷ್ಪ, ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಪಟ್ಟಣದ ಬಸ್ ನಿಲ್ದಾಣದ ಬಳಿ ವಿವಿಧ ವಿದ್ಯುತ್ ದೀಪದಿಂದ ಕಂಗೊಳಿಸುವ ಬೃಹತ್ ಮಾರಮ್ಮನ ಚಿತ್ರವನ್ನು ಅಳವಡಿಸಲಾಗಿತ್ತು. ಸೋಮವಾರ ಬೆಳಗ್ಗೆ ದೇವಿಗೆ ಹಾಲು, ಮೊಸರು, ಜೇನುತುಪ್ಪ, ಎಳನೀರು, ಗಂಧ, ಅರಿಶಿಣ ಹಾಗೂ ಕುಂಕುಮ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ ಬೆಳಗಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.


    ಜಾಗರ ಸಮರ್ಪಣೆ:ಸೋಮವಾರ ರಾತ್ರಿ ದೇಗುಲಕ್ಕೆ ಜಾಗರ ಅರ್ಪಣೆ ನಿಮಿತ್ತ ಕಳೆದ ಒಂದು ವಾರದಿಂದಲೇ ಮನೆಗಳಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಶ್ರದ್ಧಾಭಕ್ತಿಯಿಂದ ನೀರುಣಿಸಿ ಬೆಳೆಸಿದ ಧಾನ್ಯಗಳ ಪೈರುಗಳಿಗೆ(ಜಾಗರ) ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ರಾತ್ರಿ 10.30ರಲ್ಲಿ ಪಟ್ಟಣದ ವಿವಿಧ ಬಡಾವಣೆಗಳಿಂದ ಜಾಗರವನ್ನು ಹೊತ್ತ ಹೆಣ್ಣು ಮಕ್ಕಳು, ಮಹಿಳೆಯರು ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇಗುಲಕ್ಕೆ ಆಗಮಿಸಿ ಭಕ್ತಿಭಾವದಿಂದ ಜಾಗರವನ್ನು ಸಮರ್ಪಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲದ ಮುಂಭಾಗ ನೆರೆದಿದ್ದರು. ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

    ಪಟ್ಟಣ ಸೇರಿದಂತೆ ರಾಮಾಪುರ, ಕೌದಳ್ಳಿ, ಲೊಕ್ಕನಹಳ್ಳಿ, ಕೊಳ್ಳೇಗಾಲ ಹಾಗೂ ಇನ್ನಿತರ ಕಡೆಗಳಿಂದ ಭಕ್ತರು ಆಗಮಿಸಿದ್ದರು. ದೇಗುಲದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬುಧವಾರ ಬಾಯಿಬೀಗ ಸೇವೆಯು ನಡೆಯಲಿದ್ದು, ಹರಕೆ ಹೊತ್ತ ಭಕ್ತರು ಸುಮಾರು 20 ಅಡಿ ಉದ್ದದ ಕಬ್ಬಿಣದ ಸರಳಿನಿಂದ ಬಾಯಿ ಬೀಗವನ್ನು ಹಾಕಿಸಿಕೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts