More

    ತೊಳಸಿಕೆರೆ ಗ್ರಾಮದಲ್ಲಿ ಶಾಂತಿ ಸಭೆ

    ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ತೊಳಸಿಕೆರೆ ಹಾಗೂ ನಾಗಮಲೆ(ತೇಕಾಣೆ) ಗ್ರಾಮದಲ್ಲಿ ಮಂಗಳವಾರ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದರು.


    ಏ.26 ರಂದು ಇಂಡಿಗನತ್ತ ಗ್ರಾಮದಲ್ಲಿ ಗ್ರಾಮಸ್ಥರಿಂದ ನಡೆದ ಮತಗಟ್ಟೆ ಧ್ವಂಸ ಘಟನೆಯಿಂದ ಅಧಿಕಾರಿಗಳು ಹಾಗೂ ಮೆಂದಾರೆ ಗ್ರಾಮದ 15ಕ್ಕೂ ಗಿರಿಜನರು ಹಲ್ಲೆಗೊಳಗಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈಗಾಗಲೇ ಪೊಲೀಸರು ಮಹಿಳೆಯರು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದ ಇಂಡಿಗನತ್ತ ಗ್ರಾಮದ ಬಹುತೇಕ ಜನರು ಊರನ್ನೇ ತೊರೆದಿದ್ದು, ಸೋಮವಾರ ನಡೆದ ಮರು ಮತದಾನದಲ್ಲಿ ಮತ ಚಲಾಯಿಸುವುದಕ್ಕೂ ಬರಲಿಲ್ಲ. ಇತ್ತ ಕಡಿಮೆ ಸಂಖ್ಯೆಯಲ್ಲಿರುವ ಮೆಂದಾರೆ ಗ್ರಾಮದ ಗಿರಿಜನರು ಭಯದಲ್ಲಿದ್ದಾರೆ. ಹಾಗಾಗಿ ಗ್ರಾಮಗಳಲ್ಲಿ ಶಾಂತಿ ವಾತವರಣ ಹದಗೆಟ್ಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ದೆಸೆಯಲ್ಲಿ ಶಾಂತಿ ಸೌಹಾರ್ದತೆ ಉಂಟು ಮಾಡುವ ಸಲುವಾಗಿ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಲಾಯಿತು.


    ಸಭೆಯಲ್ಲಿ ಎಎಸ್ಪಿ ಉದೇಶ್ ಮಾತನಾಡಿ, ಇಂಡಿಗನತ್ತ ಗ್ರಾಮಸ್ಥರು ಮೂಲ ಸೌಕರ್ಯ ಒದಗಿಸದ ಹಿನ್ನಲೆ ಸರ್ಕಾರಿ ಅಧಿಕಾರಿಗಳು, ಗಿರಿಜನರ ಮೇಲೆ ಹಲ್ಲೆ ನಡೆಸಿರುವುದು ಹಾಗೂ ಮತಗಟ್ಟೆಯನ್ನು ಧ್ವಂಸ ಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ? ಇದು ಅಪರಾಧ. ಹಾಗಾಗಿ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಾಗಿದೆ. ಆದ್ದರಿಂದ ತಮ್ಮ ಸಂಪರ್ಕದಲ್ಲಿ ಇರುವವರಿಗೆ ತಿಳಿ ಹೇಳಿ ಪೊಲೀಸರಿಗೆ ಒಪ್ಪಿಸಬೇಕು. ಇಲ್ಲವಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತದೆ ಎಂದು ತಿಳಿಸಿದರು.


    ಅಲ್ಲದೆ ಯಾವುದೇ ಕಾರಣಕ್ಕೂ ಎಲ್ಲಿಯೂ ಇಂತಹ ಘಟನೆಗಳು ಮರುಕಳುಹಿಸದಂತೆ ನೋಡಿಕೊಳ್ಳಬೇಕು. ಗಿರಿಜನರೊಂದಿಗೆ ಪ್ರೀತಿ, ವಿಶ್ವಾಸವನ್ನು ಕಾಯ್ದುಕೊಳ್ಳಬೇಕು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.


    ಈ ವೇಳೆ ತೊಳಸಿಕೆರೆ ಗ್ರಾಮಸ್ಥರು ಮಾತನಾಡಿ, ನಮ್ಮ ಗ್ರಾಮಕ್ಕೂ ಸಮರ್ಪಕ ಮೂಲ ಸೌಕರ್ಯವಿಲ್ಲ. ಈ ಹಿನ್ನೆಲೆ ಚುನಾವಣೆಯನ್ನು ಬಹಿಷ್ಕರಿಸಲಾಗಿದ್ದು, ಮತ ಚಲಾಯಿಸದೇ ಯಾವುದೇ ಗಲಾಟೆಯನ್ನು ಮಾಡದೇ ನಮ್ಮ ಪಾಡಿಗೆ ಸುಮ್ಮನಿದ್ದೇವು. ಆದರೆ ಇಂಡಿಗನತ್ತ ಗ್ರಾಮಸ್ಥರು ಈ ರೀತಿ ಮಾಡಿರುವುದು ಅಪರಾಧ. ಹಾಗಾಗಿ ಇದಕ್ಕೆ ಸಹಕಾರ ನೀಡುವುದಿಲ್ಲ. ಎಂದು ಕಟ್ಟುನಿಟ್ಟಾಗಿ ತಿಳಿಸಿದರು.


    ಇದೇ ವೇಳೆ ಕೆಲ ಸ್ಥಳೀಯ ಮುಖಂಡರು ತಪ್ಪಿತಸ್ಥರು ಶರಣಾಗಲು ಕೆಲ ದಿನಗಳ ಕಾಲ ಅವಕಾಶ ನೀಡುವಂತೆ ಮನವಿ ಮಾಡಿದರು. ಬಳಿಕ ತೇಕಾಣೆ ಗ್ರಾಮದಲ್ಲೂ ಶಾಂತಿ ಸಭೆ ನಡೆಸಲಾಯಿತು.

    ಉಪ ವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್ಪಿ ಧರ್ಮೇಂದ್ರ, ಇನ್‌ಸ್ಪೆಕ್ಟರ್ ಜಗದೀಶ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ್, ಆರ್‌ಎಫ್‌ಒ ಭಾರತಿ ನಂದಿಹಳ್ಳಿ, ಆರ್‌ಐ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ವಿನೋದ್, ಪಿಡಿಒ ಕಿರಣ್‌ಕುಮಾರ್, ಮುಖಂಡರಾದ ಕೆ.ವಿ ಮಾದೇಶ್, ಪುಟ್ಟಣ್ಣ, ಮಾದಯ್ಯ, ಕೆಂಪಣ್ಣ, ಹಲಗ ತಂಬಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts