More

    ಮಳೆ ಹಾನಿ ಮೇಲೆ 24 ಗಂಟೆ ನಿಗಾ ಇಡಿ

    ತೀರ್ಥಹಳ್ಳಿ: ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಜನರ ಸಂಕಷ್ಟಕ್ಕೆ ನೆರವಾಗುವ ಸಲುವಾಗಿ ತಾಲೂಕು ಆಡಳಿತದ ನೇತೃತ್ವದಲ್ಲಿ ದಿನದ 24 ತಾಸು ಸಿದ್ಧರಾಗಿರಬೇಕು. ಸರ್ಕಾರಿ ಇಲಾಖಾ ಅಧಿಕಾರಿಗಳು ತಮ್ಮ ಕೇಂದ್ರದಲ್ಲಿಯೇ ಇರುವುದು ಕಡ್ಡಾಯ ಎಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಮಳೆಗಾಲದ ಮುಂಜಾಗ್ರತೆ ಕುರಿತು ತಾಲೂಕು ಕಚೇರಿಯಲ್ಲಿ ಸೋಮವಾರ ಕರೆದಿದ್ದ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಇಲಾಖಾವಾರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಮಾತನಾಡಿ, ಮಳೆ ಹಾನಿಯಿಂದಾಗುವ ಮನೆ ಹಾನಿ ಮುಂತಾದ ಅವಘಡಗಳಿಗೆ ಅಧಿಕಾರಿಗಳು ತುರ್ತಾಗಿ ಸ್ಥಳ ಭೇಟಿ ಮಾಡಿ ಅಗತ್ಯ ನೆರವು ನೀಡುವ ಮೂಲಕ ಸಂತ್ರಸ್ತರ ನೆರವಿಗೆ ಮುಂದಾಗಬೇಕು ಎಂದು ಹೇಳಿದರು.
    ತಾಲೂಕಿನ ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ರೂ.ಗಳನ್ನು ವಿನಿಯೋಗಿಸಲಾಗಿದೆ. ಚರಂಡಿ ನಿರ್ವಹಣೆ ಕ್ರಮಬದ್ಧವಾಗಿಲ್ಲದ ಕಾರಣ ರಸ್ತೆಗಳು ಹಾಳಾಗುತ್ತಿವೆ. ಲೋಕೋಪಯೋಗಿ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬಹಳ ಮುಖ್ಯವಾಗಿ ಅಕೇಶಿಯಾ ಮರಗಳಿಂದಲೇ ಈ ಸಮಸ್ಯೆ ಬಿಗಡಾಯಿಸುತ್ತಿದೆ. ಚರಂಡಿ ಕ್ಲೀನ್ ಮಾಡುವಂತೆ ಎಂಪಿಎಂ ಇಲಾಖೆಗೆ ನೋಟಿಸ್ ಕೊಡಿ ಎಂದು ಸೂಚಿಸಿದರು.
    ಎಂಪಿಎಂ ಇಲಾಖೆಯವರು ಕಡಿತಲೆ ಮಾಡಿದ ಅಕೇಶಿಯಾ ಮರಗಳನ್ನು ಮಳೆಗಾಲದಲ್ಲಿ ಸಾಗಣೆ ಮಾಡುತ್ತಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿ, ಗ್ರಾಮೀಣ ಭಾಗದ ರಸ್ತೆ ಚರಂಡಿಗಳು ಹಾಳಾಗುವುದಕ್ಕೆ ಇದೇ ಕಾರಣವಾಗಿದೆ. ಆದ್ದರಿಂದ ಮಳೆ ನಿಂತು ಭೂಮಿ ಗಟ್ಟಿಯಾಗುವವರೆಗೂ ಅರಣ್ಯ ಇಲಾಖೆಯವರು ಪರ್ಮಿಟ್ ನೀಡಬಾರದು ಎಂದರು.
    ಮೇಗರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದದಲ್ಲಿ ಆಂಬುಲೆನ್ಸ್ ಇಲ್ಲದಿರುವುದನ್ನು ಶಾಸಕರ ಗಮನಕ್ಕೆ ತರಲಾಯಿತು. ಶಾಲಾ ಕೊಠಡಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರ ನೆರವು ಪಡೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿ, ಶಾಲೆಯೊಂದರಲ್ಲಿ ಎರಡು ಹೆಂಚು ಒಡೆದು ಹೋದ ಬಗ್ಗೆ ನನಗೆ ದೂರು ಬಂದಿದೆ. ಈ ಕೆಲಸಕ್ಕೂ ನಾನು ಬರಬೇಕೆ ಎಂದು ಪ್ರಶ್ನಿಸಿದರು. ಆಗುಂಬೆ, ಅಂಬುತೀರ್ಥ ಸೇರಿದಂತೆ ತಾಲೂಕಿನ ಆಯಕಟ್ಟಿನ ಪ್ರದೇಶದಲ್ಲಿ ಮಳೆಮಾಪನ ಕೇಂದ್ರದ ಕಾರ್ಯವನ್ನು ಸಮರ್ಪಕಗೊಳಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
    ತಹಸಿಲ್ದಾರ್ ಅಮೃತ್ ಆತ್ರೇಶ್, ತಾಪಂ ಇಒ ಎಂ.ಶೈಲಾ, ಡಿವೈಎಸ್‌ಪಿ ಗಜಾನನ ಸುತಾರ್, ಜಿಪಂ ಎಇಇ ಅಣ್ಣಪ್ಪ, ಪಪಂ ಸಿಒ ಕುರಿಯಾಕೋಸ್, ಬಿಇಒ ವೈ.ಗಣೇಶ್ ಸೇರಿದಂತೆ ಅರಣ್ಯ, ಕೃಷಿ,ಲೋಕೊಪಯೋಗಿ, ಅಗ್ನಿಶಾಮಕದಳದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts