More

    ಏಷ್ಯನ್​ ಗೇಮ್ಸ್​ನಲ್ಲಿ 100 ಪದಕ: ಪ್ರಧಾನಿ ಮೋದಿ ಸಂತಸ, ಕ್ರೀಡಾಪಟುಗಳನ್ನು ಅಭಿನಂದಿಸಿದ ನಮೋ

    ನವದೆಹಲಿ: ಚೀನಾದ ಹಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನ 19ನೇ ಆವೃತ್ತಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ನೂರು ಪದಕಗಳ ಗುರಿ ಮುಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟ ಕ್ರೀಡಾಪಟುಗಳನ್ನು ಅಭಿನಂದಿಸಿರುವ ಪ್ರಧಾನಿ ಮೋದಿ, ಕ್ರೀಡಾಕೂಟದಲ್ಲಿ ಅವರ ಪ್ರದರ್ಶನ ವಿಸ್ಮಯಕಾರಿ ಹಾಗೂ ಸ್ಫೂರ್ತಿದಾಯಕವಾಗಿ ಎಂದಿದ್ದಾರೆ.

    ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹತ್ವದ ಸಾಧನೆ! ನಾವು 100 ಪದಕಗಳ ಗಮನಾರ್ಹ ಮೈಲಿಗಲ್ಲನ್ನು ತಲುಪಿದ್ದೇವೆ ಎಂದು ದೇಶದ ಜನರು ರೋಮಾಂಚನಗೊಂಡಿದ್ದಾರೆ. ಭಾರತದ ಈ ಐತಿಹಾಸಿಕ ಮೈಲಿಗಲ್ಲಿಗೆ ಕಾರಣರಾದ ನಮ್ಮ ಅಸಾಧಾರಣ ಕ್ರೀಡಾಪಟುಗಳಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರತಿ ವಿಸ್ಮಯಕಾರಿ ಪ್ರದರ್ಶನವು ಇತಿಹಾಸವನ್ನು ನಿರ್ಮಿಸಿದೆ ಮತ್ತು ನಮ್ಮ ಹೃದಯ ಹೆಮ್ಮೆಯಿಂದ ತುಂಬಿದೆ ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ತಿಳಿಸಿದ್ದಾರೆ.

    ಅಕ್ಟೋಬರ್​ 10ಕ್ಕೆ ಏಷ್ಯನ್​ ಗೇಮ್ಸ್​ ತಂಡದ ಆತಿಥ್ಯ ವಹಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿರು ಪ್ರಧಾನಿ ಮೋದಿ, ಅಂದು ಕ್ರೀಡಾಪಟುಗಳ ಜತೆ ಸಂವಾದ ನಡೆಸಲಿದ್ದಾರೆ.

    ನಿನ್ನೆ 95 ಪದಕಗಳೊಂದಿಗೆ ಆಟ ಮುಗಿಸಿದ್ದ ಭಾರತ ಇಂದು ಆರ್ಚರಿ ಸ್ಪರ್ಧೆಯಲ್ಲಿ 4 ಮತ್ತು ಕಬಡ್ಡಿಯಲ್ಲಿ 1 ಪದಕವನ್ನು ಗಳಿಸಿದೆ. ಇದೇ ಮೊದಲ ಬಾರಿಗೆ ಭಾರತ ನೂರು ಪದಕಗಳ ಗುರಿಯನ್ನು ಮುಟ್ಟಿದೆ. ಆರ್ಚರಿ ಸ್ಪರ್ಧೆಯಲ್ಲಿ 2 ಚಿನ್ನ ಮತ್ತು ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಭಾರತಕ್ಕೆ ಲಭಿಸಿದೆ. ಮಧ್ಯಾಹ್ನ 12.30ರಿಂದ ಪುರುಷರ ವಿಭಾಗದಲ್ಲಿ ಇರಾನ್​ ವಿರುದ್ಧ ಫೈನಲ್​ ಕಬಡ್ಡಿ ಸ್ಪರ್ಧೆ ನಡೆಯಲಿದೆ. ಅಲ್ಲದೆ, ಬೆಳಗ್ಗೆ 11.30ರಿಂದ ಪುರುಷರ ವಿಭಾಗದ ಕ್ರಿಕೆಟ್​ನಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧ ಫೈನಲ್​ನಲ್ಲಿ ಸೆಣಸಾಡಲಿದೆ. ಹಾಕಿ, ಚೆಸ್​ ಮತ್ತು ಬ್ಯಾಡ್ಮಿಂಟನ್​ನಿಂದ ತಲಾ ಒಂದೊಂದು ಪದಕ ಖಚಿತವಾಗಿದೆ. ಈ ಬಾರಿ ನೂರಕ್ಕಿಂತ ಹೆಚ್ಚು ಪದಕಗಳು ಖಚಿತವಾಗಿದೆ.

    ಇಂದು ಬೆಳಗ್ಗೆ 6.30ಕ್ಕೆ ನಡೆದ ಮಹಿಳೆಯರ ಕಂಪೌಂಡ್​ ಆರ್ಚರಿ ವಿಭಾಗದಲ್ಲಿ ಜ್ಯೋತಿ ಸುರೇಖಾ ಅವರು ದಕ್ಷಿಣ ಕೊರಿಯಾದ ಸೊ ಚೇವನ್ ಅವರನ್ನು 149-145 ಸ್ಕೋರ್​ನಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅದೇ ರೀತಿ ಮಹಿಳೆಯರ ಕಂಪೌಂಡ್ ಆರ್ಚರಿ​ ವಿಭಾಗದಲ್ಲಿ ಅದಿತಿ ಗೋಪಿಚಂದ್ ಅವರು ಇಂಡೋನೇಷ್ಯಾದ ಜಿಲಿಝತ್ ಫಡ್ಲಿಯನ್ನು 146-140 ಸ್ಕೋರ್​ನಿಂದ ಮಣಿಸಿ ಕಂಚಿನ ಪದಕ ಜಯಿಸಿದರು.​

    ಬೆಳಗ್ಗೆ 7.10ಕ್ಕೆ ನಡೆದ ಪುರುಷರ ಕಂಪೌಂಡ್ ಆರ್ಚರಿ​ ವಿಭಾಗ ಚಿನ್ನ-ಬೆಳ್ಳಿಗೆ ಅಭಿಷೇಕ್​ ವರ್ಮ ಮತ್ತು ಓಜಸ್​ ಡಿಯೋಟಾಲ್​ ಕಾದಾಟ ನಡೆಸಿದರು. ಇದರಲ್ಲಿ ಓಜಸ್​ ಡಿಯೋಟಾಲ್​ ಚಿನ್ನ ಪದಕ ಗಳಿಸಿದರೆ, ಅಭಿಷೇಕ್​ ವರ್ಮ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಓಜಸ್ 2023ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ಭಾರತ ಏಷ್ಯಾಡ್​ ಇತಿಹಾಸದಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ಪದಕ ಗೆಲುವಿನ ದಾಖಲೆ ನಿರ್ಮಿಸಿದೆ. 2018ರಲ್ಲಿ 70 ಪದಕ ಗೆದ್ದಿದ್ದು ಇದುವರೆಗಿನ ಗರಿಷ್ಠ ಸಾಧನೆ ಆಗಿತ್ತು. ಭಾನುವಾರ ಕ್ರೀಡಾಕೂಟದ ಕೊನೆಯ ದಿನವಾಗಿದೆ. ಆದರೆ ಭಾರತದ ಕ್ರೀಡಾಸ್ಪರ್ಧೆಗಳು ಶನಿವಾರವೇ ಮುಕ್ತಾಯಗೊಳ್ಳಲಿವೆ. (ಏಜೆನ್ಸೀಸ್​)

    ಏಷ್ಯನ್​ ಗೇಮ್ಸ್​​ 2023: ಭಾರತದ ನೂರು ಪದಕಗಳ ಸಾಧನೆಗೆ ಇನ್ನು ಒಂದೇ ಪದಕ ಬಾಕಿ, ಆರ್ಚರಿಯಲ್ಲಿ 2 ಚಿನ್ನ

    ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಸಾಧನೆ: ಮೊದಲ ಬಾರಿಗೆ ನೂರು ಪದಕಗಳ ಗುರಿ ಮುಟ್ಟಿದ ಭಾರತ

    ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಒಲಿಂಪಿಕ್ಸ್ ಟಿಕೆಟ್ ಪಡೆದ ಭಾರತ: ಹಾಕಿ ಇಂಡಿಯಾದಿಂದ ಬಹುಮಾನ ಮೊತ್ತ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts