More

    ಚಿರತೆ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಎಂಎಲ್​ಸಿ ದಿನೇಶ ಗೂಳಿಗೌಡ ಸೂಚನೆ; ಟಾಸ್ಕ್​ಫೋರ್ಸ್​ ಮುಖ್ಯಸ್ಥರ ಜತೆ ಚರ್ಚೆ

    ಮಂಡ್ಯ: ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಚಿರತೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ ವಿಧಾನ ಪರಿಷತ್‌ ಮಂಡ್ಯ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಶಾಸಕ ದಿನೇಶ ಗೂಳಿಗೌಡ ಚಿರತೆ ಟಾಸ್ಕ್‌ಫೋರ್ಸ್‌ಗೆ ಸೂಚನೆ ನೀಡಿದ್ದಾರೆ.

    ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಟಾಸ್ಕ್‌ಫೋರ್ಸ್‌ ಮುಖ್ಯಸ್ಥ ಐಎಫ್‌ಎಸ್‌ ಅಧಿಕಾರಿ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್‌ ಅವರನ್ನು ಭಾನುವಾರ ಮಂಡ್ಯದಲ್ಲಿ ಭೇಟಿಯಾಗಿ ಅವರು ಚರ್ಚೆ ನಡೆಸಿದರು.

    ಮಂಡ್ಯದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಕೆ.ಆರ್‌.ಪೇಟೆ, ಮದ್ದೂರು, ಮೇಲುಕೋಟೆ, ಮಳವಳ್ಳಿ, ನಾಗಮಂಗಲ ಭಾಗದಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸಾಕುಪ್ರಾಣಿಗಳಾದ ದನ, ನಾಯಿ, ಕುರಿ, ಮೇಕೆಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದ ರೈತರು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಜನರ ಭಯ ನಿವಾರಿಸಲು ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಅಗತ್ಯಬಿದ್ದರೆ ಬೋನುಗಳನ್ನು ಇಟ್ಟು ಚಿರತೆಗಳನ್ನು ಹಿಡಿಯಬೇಕು. ಜನರ ರಕ್ಷಣೆಗೆ ಟಾಸ್ಕ್‌ಫೋರ್ಸ್‌ ಸನ್ನದ್ಧವಾಗಿರಬೇಕು ಎಂದರು. ಅಲ್ಲದೆ ಚಿರತೆಗಳ ಹಾವಳಿ ಹೆಚ್ಚಲು ಕಾರಣಗಳ ಬಗ್ಗೆ ಚರ್ಚಿಸಿದರು.

    ಚಿರತೆಗಳು ತಮ್ಮ ಸಂತಾನೋತ್ಪತ್ತಿ ಸಮಯದಲ್ಲಿ ಕಬ್ಬಿನ ಗದ್ದೆಗಳಿಗೆ ಬರುತ್ತಿವೆ. ಕಬ್ಬು ಕಟಾವಿಗೆ ಬರುವ ಅಥವಾ ಈ ಭಾಗದಲ್ಲಿ ಓಡಾಡುವ ರೈತರ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೆ, ನಗರ ಪ್ರದೇಶದಲ್ಲಿ ಮಾಂಸ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಬೀದಿ ನಾಯಿಗಳು, ಹಂದಿಗಳ ಪ್ರಮಾಣ ಹೆಚ್ಚಿದೆ. ಇದರಿಂದ ಚಿರತೆಗಳು ಆಹಾರ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಬರುತ್ತಿವೆ ಎಂದು ಚಿರತೆಗಳು ಶಹರಕ್ಕೆ ಬರುತ್ತಿರುವ ಕಾರಣದ ಟಾಸ್ಕ್‌ಫೋರ್ಸ್‌ ಮುಖ್ಯಸ್ಥ ಸೌರಭ್‌ ಕುಮಾರ್‌ ತಿಳಿಸಿದ್ದಾಗಿ ದಿನೇಶ್​ ವಿವರಿಸಿದರು.
    ಚಿರತೆಗಳ ವರ್ತನೆ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಗುಜರಾತ್‌ನ ಗಿರ್‌ ಅರಣ್ಯಾಧಿಕಾರಿಗಳು, ಮುಂಬೈನ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಚಿರತೆಗಳನ್ನು ಹಿಡಿದಲ್ಲಿ ದೂರದ ಕಾಡಿಗೆ ಬಿಡಲು ವ್ಯವಸ್ಥೆ ಮಾಡಲಾಗಿದೆ ಎಂದು ಚಿರತೆಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸೌರಭ್‌ ಕುಮಾರ್‌ ತಿಳಿಸಿದ್ದಾರೆ ಎಂದು ದಿನೇಶ ಗೂಳಿಗೌಡ ಹೇಳಿದ್ದಾರೆ.

    24×7 ಚಿರತೆ ಸಹಾಯವಾಣಿ: 9481996026

    ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳನ್ನು ಸೇರಿಸಿ ಚಿರತೆ ಟಾಸ್ಕ್‌ಫೋರ್ಸ್‌ ಹಾಗೂ 24X7 ಸಹಾಯವಾಣಿಯನ್ನು ಜ.31ರಂದು ರಚಿಸಲಾಗಿದೆ. ಡಿಸಿಎಫ್ ಅವರ ನೇತೃತ್ವದಲ್ಲಿ ಒಬ್ಬ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಾಲ್ವರು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು, ಎಂಟು ಫಾರೆಸ್ಟ್‌ ಗಾರ್ಡ್‌ ಹಾಗೂ 40 ಜನ ಸಹಾಯಕರನ್ನು ಒಳಗೊಂಡು ಈ ಟಾಸ್ಕ್‌ಫೋರ್ಸ್‌ ರಚನೆಯಾಗಿದ್ದು, ಈಗಾಗಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.

    ಸಹಾಯವಾಣಿ(9481996026)ಗೆ ಕರೆ ಮಾಡಿದರೆ ಶೀಘ್ರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಲಿದ್ದಾರೆ. ಸಹಾಯವಾಣಿಗೆ ಸ್ವತಃ ಕರೆ ಮಾಡಿ ಪರಿಶೀಲನೆ ನಡೆಸಿದ್ದೇನೆ. ಸದ್ಯ ದಿನಕ್ಕೆ ಮೂರ್ನಾಲ್ಕು ಕರೆಗಳು ಬರುತ್ತಿವೆ. ಜನರು ಆತಂಕಗೊಳ್ಳಬಾರದು, ಎಚ್ಚರದಿಂದ ಇರಬೇಕು. ಅಗತ್ಯ ಬಿದ್ದಾಗ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು ಎಂದು ದಿನೇಶ್ ಮನವಿ ಮಾಡಿದ್ದಾರೆ.

    ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts