More

    ಪತ್ರಿಕಾ ವಿತರಕರ ಬೆನ್ನೆಲುಬಾಗಿ ನಿಲ್ಲುವೆ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

    ಪತ್ರಿಕಾ ವಿತರಕರ ಬೆನ್ನೆಲುಬಾಗಿ ನಿಲ್ಲುವೆ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿಚಿತ್ರದುರ್ಗ: ರಾಜ್ಯದಲ್ಲಿ ಪತ್ರಿಕಾ ವಿತರಕರ ಸಮಸ್ಯೆ ಸಾಕಷ್ಟಿವೆ. ಅವುಗಳನ್ನು ಹಂತ ಹಂತವಾಗಿ ಈಡೇರಿಸಲು ಸರ್ಕಾರದ ಗಮನ ಸೆಳೆಯುವಲ್ಲಿ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

    ಪತ್ರಿಕಾ ಭವನದಲ್ಲಿ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ಪತ್ರಿಕಾ ವಿತರಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮನೆ ಮನೆಗೆ ಪತ್ರಿಕೆ ಹಂಚುವ ಹುಡುಗರಿಗೆ ಬಂಡಲ್ ವಿಂಗಡಿಸಲು ನಿತ್ಯ ಮುಂಜಾನೆ ಯಾವುದೋ ಸ್ಥಳದಲ್ಲಿ ಕೂರುತ್ತಿರುವುದು ಗಮನಕ್ಕೆ ಬಂದಿದೆ. ಅದರ ಬದಲು ಎಲ್ಲಾ ಪತ್ರಿಕಾ ವಿತರಕರಿಗೆ ಅನುಕೂಲವಾಗುವಂತೆ ನಗರದ ಸೂಕ್ತ ಸ್ಥಳವೊಂದನ್ನು ಆಯ್ಕೆ ಮಾಡಿಕೊಂಡರೆ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಹಕಾರದ ಜತೆಗೆ ಶೆಡ್‌ ನಿರ್ಮಾಣಕ್ಕೂ ಶಾಸಕರ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

    ದೃಶ್ಯ ಮಾಧ್ಯಮಗಳ ಪ್ರಭಾವದ ನಡುವೆಯೂ ಮುಂಜಾನೆ ಪತ್ರಿಕೆ ಓದುವುದು ನಿಂತಿಲ್ಲ. ಅದನ್ನು ಸರಿಯಾದ ಸಮಯಕ್ಕೆ ತಲುಪಿಸುವಲ್ಲಿ ಮಳೆ, ಗಾಳಿ, ಚಳಿ ಎನ್ನದೆಯೇ ಶ್ರಮಿಸುತ್ತಿದ್ದೀರಿ. ಶತಮಾನಗಳಿಂದಲೂ ಮನೆಗೆ ಮುಟ್ಟಿಸುವ ವಿತರಕರ ಕಾಯಕ ಪ್ರಜ್ಞೆ ತಪ್ಪಿಲ್ಲ. ನನ್ನಂತೆ ಅನೇಕರಿಗೆ ಬೆಳಗ್ಗೆ ಪತ್ರಿಕೆಗಳ ಮೇಲೆ ಕಣ್ಣಾಡಿಸದಿದ್ದರೆ ಸಮಾಧಾನ ಕೂಡ ಆಗದು. ನಿಮ್ಮ ಸೇವೆ ನಿಜಕ್ಕೂ ಮೆಚ್ಚುವಂತದ್ದು ಎಂದು ಬಣ್ಣಿಸಿದರು.

    ಕಟ್ಟಡ ಕಾರ್ಮಿಕರಿಗೆ ಮಂಡಳಿ ಮೂಲಕ ಸರ್ಕಾರ ಅನೇಕ ಸೌಲಭ್ಯ ಕಲ್ಪಿಸಿದೆ. ವಿತರಕರನ್ನು ಈಚೆಗೆ ಅಸಂಘಟಿತ ವಲಯಕ್ಕೆ ಸೇರಿಸಲಾಗಿದೆ. ಆದರೆ, ಸೌಲಭ್ಯ ಸಿಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ವಿಚಾರದ ಕುರಿತು ನಿರಾಶರಾಗಬೇಡಿ. ಮೊದಲು ಸಂಘಟಿತರಾಗಿ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಈಡೇರಿಸಿಕೊಳ್ಳಲು ಮುಂದಾಗಿ ಎಂದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಪೂರ್ಣಗೊಂಡಿರುವ, ಪ್ರಗತಿ ಹಂತದಲ್ಲಿರುವ, ಹೊಸದಾಗಿ ಶಂಕುಸ್ಥಾಪನೆ ಮಾಡಬೇಕಿರುವ ಸುಮಾರು 2ಸಾವಿರ ಕೋಟಿ ವೆಚ್ಚದ ಹಲವು ಕಾಮಗಾರಿಗಳ ಸಂಬಂಧ ನವೆಂಬರ್‌ನಲ್ಲಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಆ ವೇಳೆ ನಿಮ್ಮ ಸಮಸ್ಯೆಗಳ ಕುರಿತು ಚರ್ಚಿಸುತ್ತೇನೆ ಎಂದು ಹೇಳಿದರು.

    ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ವಿತರಕರು ಈಗಲೂ ಕತ್ತಲೆಯಲ್ಲೇ ಇದ್ದಾರೆ. ಸೌಲಭ್ಯಗಳು ಮರೀಚಿಕೆಯಾಗಿದ್ದು, ನಮ್ಮನ್ನು ಬೆಳಕಿನತ್ತ ಕೊಂಡೊಯ್ಯುವ ಮೂಲಕ ಮುಖ್ಯವಾಹಿನಿಗೆ ತನ್ನಿ ಎಂಬುದಾಗಿ ರಾಜ್ಯ ಸರ್ಕಾರಕ್ಕೆ ನಾಲ್ಕು ಬಾರಿ ಮನವಿ ಸಲ್ಲಿಸಿದರು ಯಾವ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ 70ಸಾವಿರ ವಿತರಕರಿದ್ದು, ಈ ವೃತ್ತಿಯನ್ನು 3.5 ಲಕ್ಷ ಕುಟುಂಬ ಅವಲಂಬಿಸಿವೆ. ಅದಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಂಘ ಸ್ಥಾಪಿಸಿ, ಸಂಘಟಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಮೂಲಕ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆಕಸ್ಮಿಕ ಅವಘಡ ಸಂಭವಿಸಿದರೆ, ತಕ್ಷಣ ಪರಿಹಾರ ನೀಡಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೂ 1 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಪತ್ರಿಕಾ ವಿತರಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ (ತಿಪ್ಪುವರ್ಧನ್)‌, ಉಪಾಧ್ಯಕ್ಷ ಪ್ರಶಾಂತ್‌, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಸದಸ್ಯ ಹರೀಶ್‌, ರುಡ್‌ಸೆಟ್‌ನ ನಿರ್ದೇಶಕಿ ರಾಧಮ್ಮ, ಹಿರಿಯ ಪತ್ರಕರ್ತ ಷಣ್ಮುಖಪ್ಪ, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಕೀಕೆರೆ ತಿಪ್ಪೇಸ್ವಾಮಿ, ಕೆ.ಟಿ.ಶಿವಕುಮಾರ್‌ ಇತರರಿದ್ದರು.

    ಹಳ್ಳಿಯಾದರೆ ವಸತಿ ಸೌಲಭ್ಯ ಕಷ್ಟವಲ್ಲ
    ಜಿಲ್ಲೆಯಲ್ಲಿ ನೂರಾರು ಮಂದಿ ಪತ್ರಿಕಾ ವಿತರಕರಿದ್ದೀರಿ. ನನ್ನ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಸುಲಭವಾಗಿ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸುತ್ತೇನೆ. ಆದರೆ, ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಜಾಗ ಇಲ್ಲವಾಗಿದೆ. ಮುರುಘಾಮಠದ ಹಿಂಭಾಗ ಹಾಗೂ ಮಾದಾರ ಚನ್ನಯ್ಯ ಗುರುಪೀಠ ಸಮೀಪ ನಗರಸಭೆಯಿಂದ ಅರ್ಹ ಫಲಾನುಭವಿಗಳಿಗಾಗಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಈ ಎರಡು ಕಡೆ ತಲಾ 10 ಮಂದಿ ಹಿರಿಯ ವಿತರಕರಿಗೆ ಇದರಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ತಿಪ್ಪಾರೆಡ್ಡಿ ಭರವಸೆ ನೀಡಿದರು.‌

    ವಿತರಕರ ಪ್ರಮುಖ ಬೇಡಿಕೆಗಳೇನು ?
    ವಿತರಕರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ವಿಶೇಷ ಸ್ಕಾಲರ್‌ಶಿಪ್‌ ನೀಡಬೇಕು. ವಿತರಕರಿಗೂ ಕರ್ನಾಟಕ ರಾಜ್ಯೋತ್ಸವ ದಿನದಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು. ಅನೇಕರು ತಮ್ಮ ಅಂಗಡಿ ಮುಂಗಟ್ಟು ಮುಂಭಾಗವೇ ವಿತರಣೆಯ ಸ್ಥಳ ಆಯ್ಕೆ ಮಾಡಿಕೊಂಡಿದ್ದು, ಸ್ಥಳೀಯ ಸಂಸ್ಥೆಗಳಿಂದ ತೊಂದರೆ ಆಗುತ್ತಿದೆ. ಅದಕ್ಕಾಗಿ ಶೆಡ್‌ ನಿರ್ಮಿಸಿಕೊಡಬೇಕು. ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ ನೀಡಬೇಕು. ಈ ಹಿಂದೆ ನಿವೇಶನದ ಭರವಸೆ ನೀಡಲಾಗಿದ್ದು, ಅರ್ಹ ವಿತರಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ವಿತರಕ ವಾಸುದೇವ್‌ ಸರ್ಕಾರವನ್ನು ಒತ್ತಾಯಿಸಿದರು.

    2 Attachments • Scanned by Gmail

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts