More

    ಮಾತು ವಿಷಯಕ್ಕೆ ಸೂಕ್ತವಾಗಿರಲಿ ; ಸಭೆ ನಡವಳಿಕೆ ಬಗ್ಗೆ ಸದಸ್ಯರಿಗೆ ಶಾಸಕ ಶ್ರೀನಿವಾಸಗೌಡ ಪಾಠ

    ಕೋಲಾರ: ಸಭೆಯಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು, ಮಾತು ವಿಷಯಕ್ಕೆ ಸೂಕ್ತವಾಗಿರಲಿ ಎಂದು ಸದಸ್ಯರಿಗೆ ಸಭಾ ನಡವಳಿಕೆಯ ಬಗ್ಗೆ ಪಾಠ ಮಾಡಿದ ಶಾಸಕ ಕೆ.ಶ್ರೀನಿವಾಸಗೌಡ ನಗರದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

    ನಗರಸಭೆ ಅಧ್ಯಕ್ಷೆ ಆರ್.ಶ್ವೇತಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಿಂದಿನ ಸಭೆಯ ನಡಾವಳಿಗಳ ಬಗ್ಗೆ ಚರ್ಚೆಗೆ ತೆಗೆದುಕೊಂಡಾಗ ಸದಸ್ಯರ ನಡುವೆ ವಾಗ್ವಾದ ನಡೆದು ಗೊಂದಲದ ಗೂಡಲಾಗಿತ್ತು. ಶಾಸಕರು ಮಧ್ಯ ಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಿದರಾದರೂ ಪದೇ ಪದೆ ಸಭೆ ಪುನರಾವರ್ತನೆಯಾಗಿದ್ದನ್ನು ಕಂಡು ಬೇಸತ್ತರು.

    ನಾನು ಪ್ರೈಮರಿ ಹಂತದಿಂದ ಸಹಕಾರ ವಲಯದಿಂದ ರಾಜಕೀಯಕ್ಕೆ ಹೋಗಿದ್ದು, ಅಧ್ಯಕ್ಷರ ಅಪ್ಪಣೆ ಮೇರೆಗೆ ಸಭೆ ನಡೆಯಬೇಕು. ಇದ್ದಕ್ಕಿದ್ದಂತೆ ಎದ್ದು ಮಾತನಾಡುವುದು ಘನತೆಯಲ್ಲ, ಮಧ್ಯೆ ಯಾರೂ ಮಾತನಾಡಬಾರದು ಎಂದು ಬುದ್ಧಿ ಹೇಳಿದರೂ ವರ್ತನೆ ಬದಲಿಸಿಕೊಳ್ಳದಿದ್ದಾಗ ಬೇಸರಿಸಿಕೊಂಡ ಶಾಸಕರು ಹೀಗೆ ಸಭೆ ನಡೆಸೋದಾದ್ರೆ ನಾನು ಹೊಗ್ತೀನಪ್ಪ ಎಂದಾಗ ಸಭೆ ಮೌನಕ್ಕೆ ಜಾರಿತು. ಪತ್ರಿಕೆಗಳಲ್ಲಿ ಹೆಸರು ಹೈಲೈಟ್ ಆಗಬೇಕೆಂದು ಒಬ್ಬರೇ ಮಾತನಾಡಬೇಡಿ, ಬೇರೆಯವರಿಗೂ ಅವಕಾಶ ನೀಡಿ ಎಂದು ಕಿವಿಮಾತು ಹೇಳಿದರು.

    ನಗರದಲ್ಲಿ ಎರಡು ರಸ್ತೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಪ್ರಭಾತ್ ಟಾಕೀಸ್ ರಸ್ತೆಯಿಂದ ಶಾರದಾ ಟಾಕೀಸ್ ರಸ್ತೆ, ಶ್ರೀನಿವಾಸಪುರ ರಸ್ತೆ ವೃತ್ತದಿಂದ ಗಾಂಧಿವನ, ಖಾದ್ರಿಪುರ ರಸ್ತೆ, ಅಂತರಗಂಗೆ ರಸ್ತೆ ಅಭಿವೃದ್ಧಿಯಾಗಬೇಕು. ಚುನಾವಣೆಯಲ್ಲಿ ರಾಜಕಾರಣ ಮಾಡಿ, ಅಭಿವೃದ್ಧಿ ಬಂದಾಗ ಅಭಿವೃದ್ಧಿಯೇ ಪಕ್ಷವಾಗಬೇಕು, ಸಿಸಿ ರಸ್ತೆಗೆ ಒತ್ತು ನೀಡಿ, ನಗರೋತ್ಥಾನ ಅನುದಾನ ಬಳಕೆಗೆ ಸದಸ್ಯರ ಸಮಿತಿ ರಚಿಸಿ ಏನೇನು ಅಭಿವೃದ್ಧಿ ಕೈಗೊಳ್ಳಬೇಕೆಂಬುದನ್ನು ನಿರ್ಧರಿಸಿ. ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಡಲಾಗುವುದು ಎಂದರು.

    ಕೆ.ಸಿ.ರೆಡ್ಡಿ ಪುತ್ಥಳಿ: ರಾಜ್ಯದ ಮೊದಲ ಸಿಎಂ ಕೆ.ಸಿ.ರೆಡ್ಡಿ ಪುತ್ಥಳಿಯನ್ನು ಮೆಕ್ಕೆ ವೃತ್ತದ ಬಳಿ ಸ್ಥಾಪಿಸುವ ಬಗ್ಗೆ ಡಿಸಿಗೆ ಮನವಿ ಮಾಡಿದ್ದೇನೆ. ನಗರಸಭೆ ಒಪ್ಪಿಗೆ ಸೂಚಿಸಬೇಕೆಂದು ಶ್ರೀನಿವಾಸಗೌಡ ಕೋರಿದಾಗ ಸದಸ್ಯರು ಒಪ್ಪಿಗೆ ಸೂಚಿಸಿದರು.

    ತೆರಿಗೆ ವಸೂಲಿ: ಆರ್.ಎಲ್.ಜಾಲಪ್ಪ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಬಾಕಿ ಇರುವ 13 ಕೋಟಿ ರೂ. ವಸೂಲಿಗೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲವೆಂಬ ಸದಸ್ಯರ ಟೀಕೆಗೆ ಈ ಬಗ್ಗೆ ಡಿಸಿ ಜತೆಗೆ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿ ಜತೆ ಚರ್ಚಿಸಲಾಗಿದೆ ಎಂದು ಪೌರಾಯುಕ್ತ ಎಸ್. ಪ್ರಸಾದ್ ಹೇಳಿದರು. ಪ್ರಕರಣ ಕೋರ್ಟ್‌ನಲ್ಲಿರುವ ಬಗ್ಗೆ ಕಂದಾಯ ನಿರೀಕ್ಷಕ ಚಂದ್ರು ಮಾಹಿತಿ ನೀಡಿದರು.

    ನಗರಸಭೆಯ ಪ್ರಕರಣಗಳಲ್ಲಿ ಹೈಕೋರ್ಟ್‌ಗೆ ನೇಮಿಸಿಕೊಂಡಿರುವ ವಕೀಲರನ್ನು ಬದಲಿಸಬೇಕು, ನಗರಸಭೆಯಿಂದ ಆಶ್ರಯ ನಿವೇಶನಕ್ಕೆ ಎಕರೆಗೆ 22 ಲಕ್ಷ ರೂ.ಗೆ ಜಮೀನು ನೀಡುವಂತೆ ನಾಲ್ಕು ಸಲ ನೋಟಿಫಿಕೇಷನ್ ಹೊರಡಿಸಿದ್ದರೂ ರೈತರು ಮುಂದೆ ಬರುತ್ತಿಲ್ಲ, ಕೈಗಾರಿಕಾ ಪ್ರದೇಶದಲ್ಲಿ ಎಕರೆಗೆ 1 ಕೋಟಿ ರೂ. ಇರುವುದರಿಂದ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನ ದರ ನಿಗದಿಪಡಿಸಿದರೆ ಜಮೀನು ಸಿಗಬಹುದು ಎಂದು ಎಸ್.ಆರ್.ಮುರಳಿಗೌಡ ಹೇಳಿದರು.

    ಅಮೃತ್ ಯೋಜನೆಯಡಿ 8.5 ಎಂಎಲ್‌ಡಿ ಸಾಮರ್ಥ್ಯದ ಯುಜಿಡಿ ಎಸ್‌ಟಿಪಿ ಘಟಕ ಸ್ಥಾಪನೆಗೆ ಜಿಪಂನಿಂದ ನಿರಾಪೇಕ್ಷಣಾ ಪತ್ರ ಕೊಡಿಸುವಂತೆ ಬಿ.ಎಂ.ಮುಬಾರಕ್ ಸಭೆಯ ಗಮನಕ್ಕೆ ತಂದರು. ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಗೋಲ್‌ಮಾಲ್ ಆಗಿದೆ ಎಂದು ಆರೋಪಿಸಿದ ಸದಸ್ಯ ಪ್ರಸಾದ್‌ಬಾಬು, ನಗರಸಭೆ ಆಸ್ತಿಗಳಿಗೆ ಫೆನ್ಸಿಂಗ್ ಹಾಕಿಸುವಂತೆ ಆಗ್ರಹಿಸಿದರು. ನಗರಭೆಯ ಕಾರ್ಯಾಲಯ ಮಳೆಗೆ ಸೋರುತ್ತಿದೆ, ಹೊಸ ಕಟ್ಟಡಕ್ಕೆ 5 ಕೋಟಿ ರೂ. ಮಂಜೂರು ಮಾಡಿಸುವಂತೆ ಸುರೇಶ್‌ಬಾಬು ಶಾಸಕರನ್ನು ಮನವಿ ಮಾಡಿದರು.

    ನನ್ನ ನಡವಳಿಕೆಯಿಂದ ತಪ್ಪಾಗಿದೆ:ಅಂಬೇಡ್ಕರ್ ಭವನದ ವಿಚಾರದಲ್ಲಿ ಹಿಂದಿನ ಸಭೆಯಲ್ಲಿ ತಾವು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ಘಟನೆ ಸಂಬಂಧ ಡಿಸಿಗೆ ದೂರು ನೀಡಿದ್ದ ಅಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆಯಲ್ಲಿ ನೀರಿನ ಬಾಟಲು ಎಸೆದಿರುವ ಪ್ರಕರಣದಲ್ಲಿ ರಾಜಿ ಮಾಡಿಸಿದ್ದಾರೆ. ನಾನು ಸಮುದಾಯದ ಹಕ್ಕು ಕೇಳಿದ್ದೇನೆ, ನನ್ನ ನಡವಳಿಕೆಯಲ್ಲಿ ತಪ್ಪಾಗಿದೆ, ಹಿರಿಯರು ಬುದ್ದಿ ಹೇಳಬಹುದಿತ್ತು ಎಂದು ಅಂಬರೀಷ್ ನುಡಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts