More

    ಸಾಗರ ಆಸ್ಪತ್ರೆ ಲಂಚಾವತಾರಕ್ಕೆ ಶಾಸಕ ಗರಂ

    ಸಾಗರ: ಸಾಗರ ಉಪವಿಭಾಗೀಯ ಆಸ್ಪತ್ರೆ ಮತ್ತು ತಾಯಿ-ಮಗು ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ವೈದ್ಯ ಸಿಬ್ಬಂದಿ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಹರತಾಳು ಹಾಲಪ್ಪ ಸೂಚಿಸಿದರು.

    ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲ ವೈದ್ಯರ ಬಗ್ಗೆ ಸಾರ್ವಜನಿಕರಿಂದ ಮತ್ತು ರೋಗಿ ಸಂಬಂಧಿಕರಿಂದ ಸಾಕಷ್ಟು ದೂರು ಬರುತ್ತಿವೆ. ಇದನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಸೂಚಿಸಿದರು.

    ನೀವು ಮಾಡುವ ಕೆಲಸದಿಂದ ಆಸ್ಪತ್ರೆಗೆ ಕೆಟ್ಟ ಹೆಸರು ಬರುವಂತೆ ಆಗಬಾರದು. ಕೆಲವರು ವೈದ್ಯರು ಲಂಚ ಪಡೆಯುತ್ತಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಲೋಕಾಯುಕ್ತರು ಆಸ್ಪತ್ರೆಗೆ ಬಂದು ವಿಚಾರಣೆ ಸಹ ನಡೆಸಿದ್ದಾರೆ. ಇದೆಲ್ಲ ಅತ್ಯಂತ ಬೇಸರದ ಸಂಗತಿ. ರೋಗಿಗಳಿಗೆ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವವರು ಮಾತ್ರ ಇಲ್ಲಿ ಕೆಲಸ ಮಾಡಿ. ರೋಗಿಗಳಿಂದ ಹಣ ಸುಲಿಗೆ ಮಾಡುವುದು, ಆಸ್ಪತ್ರೆಯ ವಾತಾವರಣ ಹಾಳು ಮಾಡುವವರು ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗಬಹುದು ಎಂದು ಕಟ್ಟುನಿಟ್ಟಾಗಿ ಹೇಳಿದರು.

    ಪದೇಪದೆ ಆಪರೇಷನ್ ನಡೆಸಲಾಗುತ್ತಿದೆ. ಸಾಮಾನ್ಯ ಮಾಡುತ್ತಿಲ್ಲ. ಹೆರಿಗೆ ಮಾಡಿಸಲು ಹಣ ಪಡೆಯಲಾಗುತ್ತಿದೆ ಎನ್ನುವ ದೂರುಗಳಿವೆ. ಈಚೆಗೆ ರೈತರೊಬ್ಬರು ತಮ್ಮ ಪತ್ನಿಯನ್ನು ಆಸ್ಪತ್ರೆಗೆ ಹೆರಿಗೆಗೆ ಸೇರಿಸಿದಾಗ ಅವರಿಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಆ ರೈತ ಶಿವಮೊಗ್ಗಕ್ಕೆ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಿ ಬದುಕಿಸಿಕೊಂಡು ಬಂದಿದ್ದೇನೆ ಎಂದು ನನ್ನ ಬಳಿ ತನ್ನ ಅಳಲು ತೋಡಿಕೊಂಡಿದ್ದಾರೆ. ಇದರ ಜತೆಗೆ ಅನಸ್ತೇಶಿಯಾ ಕೊಡಲು ಸಹ ಹಣ ಪಡೆಯುತ್ತಿರುವುದು ಸೇರಿ ಅನೇಕ ದೂರುಗಳಿವೆ. ಇದನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಸೂಚಿಸಿದರು.

    ಆಸ್ಪತ್ರೆಗೆ ಬೇಕಾದ ಸೌಲಭ್ಯ ಕಲ್ಪಿಸಿ ಕೊಡಲಾಗುತ್ತದೆ. ಲಿಫ್ಟ್ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು ಈ ಬಗ್ಗೆ ಕ್ರಿಯಾ ಯೋಜನೆ ತಯಾರಿಸುವಂತೆ ಸೂಚನೆ ನೀಡಲಾಗಿದೆ. ವೈದ್ಯರು ಪರಸ್ಪರ ಸೌಹಾರ್ದತೆಯಿಂದ ಕೆಲಸ ಮಾಡಿಕೊಂಡು ಹೋಗಬೇಕು. ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.

    ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯ ಕೆ.ಆರ್.ಗಣೇಶಪ್ರಸಾದ್, ಆರೋಗ್ಯ ರಕ್ಷಾ ಸಮಿತಿಯ ಸತೀಶ್ ಮೊಗವೀರ್, ಅಶೋಕ್, ಜ್ಯೋತಿ ನಂಜುಂಡಸ್ವಾಮಿ, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ಡಾ. ವಿಕ್ರಂ, ಡಾ. ಕಾವ್ಯಾ, ಡಾ. ಜಯಲ್ಷ್ಮ, ಡಾ. ಸುಚಿತ್ರಾ, ಡಾ. ನಾಗೇಂದ್ರಪ್ಪ, ಡಾ. ಸಿದ್ದನಗೌಡ ಪಾಟೀಲ್, ವೈ.ಮೋಹನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts