More

    ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ

    ಗಂಗಾವತಿ: ಸುಗಮ ಸಂಚಾರಕ್ಕಾಗಿ ರಸ್ತೆ ಬದಿಯ ವ್ಯಾಪಾರಿಗಳನ್ನು ನಗರದ ಗುಂಡಮ್ಮಕ್ಯಾಂಪ್ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಮುಖ್ಯ ಮತ್ತು ಒಳ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

    ನಗರದ ಎಪಿಎಂಸಿ ಗಂಜ್ ಪ್ರಾಂಗಣದಲ್ಲಿ ಎಪಿಎಂಸಿ ವಾರ್ಷಿಕ ಕ್ರಿಯಾಯೋಜನೆಯಡಿ 3.13 ಕೋಟಿ ರೂ.ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ಹಿಂದಿನ ಆಡಳಿತಾವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಅವೈಜ್ಞಾನಿಕ ಕ್ರಿಯಾಯೋಜನೆ ರೂಪಿಸಿದ್ದು, 13 ಕೋಟಿ ರೂ. ಹೆಚ್ಚುವರಿಯಾಗಿತ್ತು. ಪುನರ್ ಪರಿಶೀಲನೆಗೆ ದೂರು ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ ಹೆಚ್ಚುವರಿಯಾಗಿರುವುದು ಕಂಡುಬಂದಿತ್ತು. ಹೆಚ್ಚುವರಿ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು. ಬೀದಿ ಬದಿ ವ್ಯಾಪಾರಿಗಳು ಸೇರಿ ಹಣ್ಣು, ತರಕಾರಿ, ಹೂವು, ಮಾಂಸ, ಮೀನು ವ್ಯಾಪಾರಿಗಳನ್ನು ಪ್ರಾಂಗಣಕ್ಕೆ ಸ್ಥಳಾಂತರಿಸಲಾಗುವುದು ಎಂದರು.

    ಶೀಘ್ರ ಹಂಚಿಕೆ: ತಾಲೂಕಿನ ಹೊಸಳ್ಳಿಯಲ್ಲಿ ರೂಪಿಸಿರುವ ಆಶ್ರಯ ಕಾಲನಿಯಲ್ಲಿ ನಿವೇಶನ ರಹಿತ ಅರ್ಹ ಲಾನುಭವಿಗಳಿಗೆ ನೀಡಲಾಗುತ್ತಿದ್ದು, ಮೊದಲಿದ್ದ ಪಟ್ಟಿ ಪರಮಾರ್ಶಿಸಲಾಗುತ್ತಿದೆ. ಒಂದೇ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ಮತ್ತು ಸ್ಥಿತಿವಂತರಿಗೆ ವಿತರಿಸಿದ್ದರೆ ಕೂಡಲೇ ರದ್ದುಪಡಿಸಲಾಗುವುದು. ಅರ್ಹ ಲಾನುಭವಿಗಳಿಗೆ ಶೀಘ್ರವೇ ನಿವೇಶನದ ಹಕ್ಕುಪತ್ರ ವಿತರಿಸಲಾಗುವುದು. ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ, ರಸ್ತೆ, ಚರಂಡಿ, ಕುಡಿವ ನೀರು ಸೇರಿ ಮೂಲ ಸೌಕರ್ಯಕ್ಕಾಗಿ ಅನುದಾನ ಕ್ರೊಡೀಕರಿಸಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಅಭಿವದ್ಧಿ ಮಂಡಳಿ ಯೋಜನೆಯಡಿ ಅನುದಾನ ಮಂಜೂರಾಗುವ ವಿಶ್ವಾಸವಿದೆ. ಕೆರೆ ತುಂಬಿಸುವ ಯೋಜನೆಯಡಿ ಅನುದಾನ ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆ ಕೈಗೊಂಡು ವರದಿ ನೀಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಎಪಿಎಂಸಿ ಸಹ ಕಾರ್ಯದರ್ಶಿ ಹರೀಶ್ ಪತ್ತಾರ್, ಎಇಇ ಶರಣಪ್ಪ, ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಮುಖಂಡರಾದ ಡಿ.ಕೆ.ಆಗೋಲಿ, ಚನ್ನವೀರನಗೌಡ ಆರಾಳ್, ಅಮರಜ್ಯೋತಿ ನರಸಪ್ಪ, ವೀರೇಶ ಬಲ್ಕುಂದಿ, ರಮೇಶ ನಾಯಕ ಹೊಸ್ಮಲಿ, ಯಮನೂರ ಚೌಡ್ಕಿ, ಬೆಟ್ಟಪ್ಪ ಚಿಕ್ಕಬೆಣಕಲ್ ಇತರರಿದ್ದರು.

    ಬಿಜೆಪಿಯೊಂದಿಗೆ ಕೆಆರ್‌ಪಿಪಿ ಯಾವುದೇ ಕಾರಣಕ್ಕೂ ವಿಲೀನಗೊಳ್ಳಲ್ಲ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಪಕ್ಷ ಬಲಿಷ್ಟ ಗೊಳಿಸಲಾಗುವುದು. ಹೊಂದಾಣಿಕೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರೊಂದಿಗೆ ಯಾವುದೇ ಮಾತುಕತೆಯಾಗಿಲ್ಲ.
    ಗಾಲಿ ಜನಾರ್ದನರೆಡ್ಡಿ ಶಾಸಕ, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts