More

    ತಿರಂಗಾ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ: ಸಚಿವ ಎಂಟಿಬಿ ನಾಗರಾಜ್ ಸಂತಸ

    ಹೊಸಕೋಟೆ: ಕೇಂದ್ರ ಸರ್ಕಾರದ ಆಶಯದಂತೆ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಎಲ್ಲಡೆ ಅಭೂತಪೂರ್ವ ಸ್ಪಂದನೆ ದೊರಕಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಸಂತಸ ವ್ಯಕ್ತಪಡಿಸಿದರು.


    75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ನಗರದ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಾಲಯದ ಬಳಿಯಿಂದ ಭಾನುವಾರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.


    ಮೊದಲಿಗೆ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭ ಕೋರಿದ ಸಚಿವರು, ಸುಮಾರು 1500 ಬೈಕ್‌ಗಳಲ್ಲಿ ತಾವರೆಕೆರೆವರೆಗೆ ಹರ್ ಘರ್ ತಿರಂಗಾ ಕಾರ್ಯಕ್ರಮದ ಭಾಗವಾಗಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.


    ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ದೇಶಾದ್ಯಂತ ಪ್ರತಿ ಮನೆ ಮೇಲೆ ರಾಷ್ಟ್ರಧ್ವಜ ರಾರಾಜಿಸುತ್ತಿದ್ದು, ತಾಲೂಕಿನ ಪ್ರತಿ ಮನೆಗಳಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.


    ಬಿಬಿಎಂಪಿ ಸದಸ್ಯ ನಿತೀಶ್ ಪುರುಷೋತ್ತಮ್ ಮಾತನಾಡಿ, ರಾಷ್ಟ್ರಕ್ಕಾಗಿ ಪ್ರಾಣ ತೆತ್ತ ನಾಯಕರಿಗೆ ಕೃತಜ್ಞತೆ ಸಮರ್ಪಿಸುವ ಸಲುವಾಗಿ ಹಾಗೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸಚಿವ ಎಂಟಿಬಿ ನಾಗರಾಜ್ ಆಶಯದಂತೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
    15 ದಿನಗಳಿಂದಲೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರ್ಯಾಲಿ ಸ್ವಯಂಪ್ರೇರಿತವಾಗಿ ಸಾವಿರಾರು ಜನ ಆಗಮಿಸಿರುವುದು ಸಂತಸದ ವಿಚಾರ ಎಂದರು.


    ನಗರ ಬಿಜೆಪಿ ಘಟಕದ ಅಧ್ಯಕ್ಷ ಡಾ.ಸಿ.ಜಯರಾಜ್ ಮಾತನಾಡಿ, ಸಾವಿರಾರು ಜನ ದೇಶ ಭಕ್ತರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದು, ಅಂತಹ ಹುತಾತ್ಮರಿಗೆ ಗೌರವ ಸಲ್ಲಿಸುವ ಜತೆಗೆ ದೇಶ ಪ್ರೇಮ ಮೆರೆಯುವ ಸಂದರ್ಭ ಇದಾಗಿದೆ ಎಂದರು.

    ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ್ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಸಂಬಂಧ 15 ದಿನಗಳಿಂದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಹಾಗೆಯೇ ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ಸುಮಾರು 40 ಸಾವಿರ ಧ್ವಜಗಳನ್ನು ಮನೆಗಳಿಗೆ ಹಂಚಲಾಗಿದೆ ಎಂದರು.

    ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿನೋದ್ ರೆಡ್ಡಿ, ತಾಲೂಕು ಅಧ್ಯಕ್ಷ ತವಟಹಳ್ಳಿ ರಾಮು, ಉಪಾಧ್ಯಕ್ಷ ಸಂದೀಪ್, ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಎನ್. ಬಾಲಚಂದ್ರನ್, ಮುಖಂಡರಾದ ಚನ್ನಸಂದ್ರ ನಾಗರಾಜ್, ಅರುಣ್ ಕುಮಾರ್ ಭಾಗಿಯಾಗಿದ್ದರು.

    ಎಲ್ಲರಿಗೂ ಹೆಲ್ಮೆಟ್ ವಿತರಣೆ: ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ರ್ಯಾಲಿಯಲ್ಲಿ 1500 ಸಾವಿರಕ್ಕೂ ಹೆಚ್ಚು ಬೈಕ್‌ಗಳಲ್ಲಿ ದೇಶಾಭಿಮಾನಿಗಳು ಪಾಲ್ಗೊಂಡಿದ್ದರು. ಈ ವೇಳೆ ಎಲ್ಲರಿಗೂ ಹೆಲ್ಮೆಟ್ ವಿತರಿಸಲಾಯಿತು. ಬಳಿಕ ನಗರದ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇಗುಲದ ಬಳಿಯಿಂದ ಆರಂಭಗೊಂಡ ರ್ಯಾಲಿ ನಗರದ ತೇರು ಬೀದಿ, ರಾಷ್ಟ್ರೀಯ ಹೆದ್ದಾರಿ ಮೂಲಕ ತಾವರೆಕೆರೆಯ ಹೆತ್ತಕ್ಕಿ ಗ್ರಾಮದಲ್ಲಿ ಮುಕ್ತಾಯಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts