More

    ಚರ್ಮಗಂಟು ವ್ಯಾಧಿಗೆ 15 ಆಕಳು ಬಲಿ: ಜಿಲ್ಲೆಯಾದ್ಯಂತ 30 ಸಾವಿರ ರಾಸುಗಳಿಗೆ ಲಸಿಕೆ

    ಬೆಂಗಳೂರು ಗ್ರಾಮಾಂತರ: ನೆರೆಯ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಉಲ್ಬಣಿಸಿರುವ ರಾಸುಗಳ ಚರ್ಮಗಂಟು ರೋಗ ಜಿಲ್ಲೆಯಲ್ಲೂ ವ್ಯಾಪಕವಾಗುತ್ತಿದ್ದು, ತಿಂಗಳಿಂದ ಚರ್ಮಗಂಟು ವ್ಯಾಧಿಗೆ 15 ಆಕಳುಗಳು ಬಲಿಯಾಗಿವೆ.


    ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ಸೋಮತ್ತನಹಳ್ಳಿಯಲ್ಲಿ ಮೊದಲಿಗೆ ಚರ್ಮಗಂಟು ಸೋಂಕಿನ ರೋಗಲಕ್ಷಣ ಕಾಣಿಸಿಕೊಂಡಿತ್ತು. ಈಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸೋಂಕು ಹರಡುತ್ತಿದ್ದು, ರೈತಾಪಿ ಜನರು ಕಂಗಾಲಾಗಿದ್ದಾರೆ.


    ಸಮರೋಪಾದಿಯಲ್ಲಿ ಲಸಿಕೆ: ಪ್ರಸ್ತುತ ಮೇಕೆ ಸಿಡುಬು ಲಸಿಕೆಯನ್ನೇ ಚರ್ಮಗಂಟು ವ್ಯಾಧಿ ನಿಯಂತ್ರಣಕ್ಕೆ ಬಳಕೆ ಮಾಡಲಾಗುತ್ತಿದ್ದು, ಇದುವರೆಗೆ ಜಿಲ್ಲೆಯಲ್ಲಿ 30 ಸಾವಿರ ರಾಸುಗಳಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ 1.56 ಲಕ್ಷ ಮಿಶ್ರತಳಿ ರಾಸುಗಳಿವೆ, ಹಾಗೆಯೇ 14 ಸಾವಿರ ದೇಸಿ ತಳಿಯ ರಾಸುಗಳಿದ್ದು, ಬಾಕಿ ಇರುವ ರಾಸುಗಳಿಗೆ ಲಸಿಕಾಕರಣ ನಡೆಸಲು ಪಶುಪಾಲನಾ ಇಲಾಖೆ ಸಮರೋಪಾದಿಯಲ್ಲಿ ಮುಂದಡಿ ಇಟ್ಟಿದೆ, ಆದರೆ ಸರ್ಕಾರದಿಂದ ಅಗತ್ಯವಿರುವಷ್ಟು ಲಸಿಕೆ ಪೂರೈಕೆ ಇಲ್ಲದೆ ತೀವ್ರತರ ಲಸಿಕಾಕರಣಕ್ಕೆ ತೊಡಕಾಗಿದೆ. ಬಮುಲ್ ಸಹಯೋಗದಲ್ಲಿಯೂ ಲಸಿಕಾಕರಣ ನಡೆಯುತ್ತಿದ್ದು, ತುರ್ತಾಗಿ ಖಾಸಗಿಯಾಗಿಯೂ ಲಸಿಕೆ ಖರೀದಿಸಿ ವ್ಯಾಧಿ ನಿಯಂತ್ರಣಕ್ಕೆ ಹರಸಾಹಸ ನಡೆಸುತ್ತಿದೆ.


    ರೋಗ ಲಕ್ಷಣಗಳೇನು?: ಸೋಂಕು ತಗುಲಿದ ರಾಸುಗಳಲ್ಲಿ ಇದ್ದಕ್ಕಿದ್ದಂತೆ ಹಾಲು ಕರೆಯುವ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ, ದೈಹಿಕವಾಗಿ ನಿಶ್ಯಕ್ತವಾಗಿ ಬಳಲುತ್ತವೆ, ಮೇವು ತಿನ್ನಲು ಹಿಂದೇಟು ಹಾಕುತ್ತವೆ, ದೇಹದ ತುಂಬೆಲ್ಲ ಗಂಟುಗಳು ಕಾಣಿಸಿಕೊಳ್ಳುತ್ತವೆ, ಕಾಲುಗಳು ಊತ ಬರುತ್ತವೆ, ದೇಹ ಬಡಕಲಾಗುತ್ತದೆ, ದೇಹದ ಮೇಲೆ ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ, ಅತಿ ಜ್ವರ ಬಾಧಿಸುತ್ತದೆ ಎಂದು ಪಶು ಇಲಾಖೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ವೈರಸ್‌ನಿಂದ ಹರಡುವ ಸೋಂಕು: ಚರ್ಮಗಂಟು ಕಾಯಿಲೆ ವೈರಸ್‌ನಿಂದ ಹರಡುತ್ತದೆ, ಸೊಳ್ಳೆ, ನೊಣ, ಉಣ್ಣೆಗಳಿಂದ, ಕಲುಷಿತ ನೀರು ಅಥವಾ ಮೇವಿನಿಂದಲೂ ವೈರಸ್ ಹರಡುತ್ತದೆ, ಸೋಂಕಿತ ರಾಸುಗಳ ಜೊಲ್ಲು, ವೀರ್ಯ, ರಕ್ತ, ಕಣ್ಣು ಮತ್ತು ಮೂಗಿನ ಸ್ರವಿಕೆಯಲ್ಲಿಯೂ ಈ ವೈರಸ್ ಇರುತ್ತದೆ. ಸೋಂಕಿತ ರಾಸುವಿನ ನೇರಸಂಪರ್ಕದಿಂದ ಮತ್ತೊಂದು ರಾಸುಗಳಿಗೆ ವೇಗವಾಗಿ ಸೋಂಕು ತಗಲುತ್ತದೆ, ದೇಸಿ ತಳಿಗಳಿಗೆ ಹೋಲಿಸಿದರೆ ಮಿಶ್ರತಳಿ ಹಸುಗಳು ಹಾಗೂ ಕರುಗಳಲ್ಲಿ ಈ ಸೋಂಕು ಹೆಚ್ಚು ಬಾಧಿಸುತ್ತದೆ.

    ಹತೋಟಿ ಹೇಗೆ?: ಸೋಂಕಿತ ಹಸುಗಳಿಂದ ಆರೋಗ್ಯವಂತ ಹಸುಗಳನ್ನು ದೂರವಿಡಬೇಕು. ಕೊಟ್ಟಿಗೆಯಲ್ಲಿ ಸೊಳ್ಳೆ, ನೊಣ ನಿಯಂತ್ರಿಸಬೇಕು, ಗಾಯದ ನಿಯಂತ್ರಣದ ಜತೆಗೆ ರೋಗ ನಿರೋಧಕ ಔಷಧೋಪಚಾರ ನಡೆಸಬೇಕು, ವೈದ್ಯರ ಮಾರ್ಗದರ್ಶನ ಪಡೆಯಬೇಕು. ಸೋಡಿಯಂ ಹೈಪೊಕ್ಲೋರ್ವೆಟ್ ದ್ರಾವಣವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕೊಟ್ಟಿಗೆಯಲ್ಲಿ ಸಿಂಪಡಿಸಿ ಸ್ವಚ್ಛಗೊಳಿಸಬೇಕು, ಸೋಂಕಿನಿಂದ ಮೃತಪಟ್ಟ ರಾಸುಗಳ ಕಳೆಬರವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.

    ಕಲ್ಯಾಣ ನಿಧಿ ಬಳಕೆ: ರಾಸುಗಳಲ್ಲಿ ಚರ್ಮ ಗಂಟು ರೋಗ ಉಲ್ಬಣವಾಗುತ್ತಿದ್ದು, ಸರ್ಕಾರದಿಂದ ಉಚಿತ ಲಸಿಕೆ ನೀಡುವುದು ವಿಳಂಬವಾಗುತ್ತಿದೆ. ಹೀಗಾಗಿ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿನ ಧರ್ಮ ನಿಧಿ, ಕಲ್ಯಾಣ ನಿಧಿಯಲ್ಲಿನ ಹಣವನ್ನು ಬಳಕೆ ಮಾಡಿಕೊಂಡು ರಾಸುಗಳಿಗೆ ಲಸಿಕೆ ಹಾಕಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಅನಂದಕುಮಾರ್ ತಿಳಿಸಿದ್ದಾರೆ. ರೋಗ ಹೆಚ್ಚಾಗಿರುವ ಗ್ರಾಮಗಳಿಗೆ ಬಮುಲ್‌ನಿಂದಲೇ ಲಸಿಕೆ ಕಳುಹಿಸಲಾಗಿದೆ. ಆದರೆ ಎಲ್ಲ ಕಡೆ ಲಸಿಕೆ ನೀಡಲು ಕಷ್ಟವಾಗಲಿದೆ. ಹೀಗಾಗಿ ಡೇರಿ ಆಡಳಿತ ಮಂಡಳಿಗಳು ತುರ್ತು ಸಭೆ ನಡೆಸಿ ಲಸಿಕೆ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.


    ಈಗಾಗಲೇ ಜಿಲ್ಲಾದ್ಯಂತ ರಾಸುಗಳಿಗೆ ಚರ್ಮಗಂಟು ಲಸಿಕಾಕರಣ ತೀವ್ರಗೊಳಿಸಲಾಗಿದೆ. ಸೋಂಕಿತ ಹಸುಗಳ ಚಿಕಿತ್ಸೆಗೆ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ, ಮೇಕೆ ಸಿಡುಬು ಲಸಿಕೆ ನೀಡಲಾಗುತ್ತಿದ್ದು, ರೈತರಿಗೆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಚುರುಕುಗೊಳಿಸಲಾಗಿದೆ. ನಿಗದಿತ ಅವಧಿಯೊಳಗೆ ಎಲ್ಲ ರಾಸುಗಳಿಗೆ ಲಸಿಕೆ ಹಾಕುವ ಗುರಿಯೊಂದಿಗೆ ಇಲಾಖೆ ಕಾರ್ಯತತ್ಪರವಾಗಿದೆ.

    | ಡಾ.ನಾಗರಾಜ್ ಉಪನಿರ್ದೇಶಕ ಪಶುಪಾಲನ ಇಲಾಖೆ ಬೆಂ.ಗ್ರಾಮಾಂತರ

    ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಚರ್ಮಗಂಟು ವ್ಯಾಧಿ ನಿಯಂತ್ರಣದಲ್ಲಿದೆ. ಹಾಗೆಯೇ ಸಾವಿನ ಪ್ರಮಾಣವೂ ತೀರ ಕಡಿಮೆ ಇದೆ. ಆದರೂ ಪಶುಪಾಲನಾ ಇಲಾಖೆ ಸಮರೋಪಾದಿಯಲ್ಲಿ ಲಸಿಕಾಕರಣ ಆರಂಭಿಸಿದೆ, ಜಿಲ್ಲೆಯಲ್ಲಿ ಇದುವರೆಗೆ 30 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಸೋಂಕಿತ ರಾಸುಗಳಿಗೆ ಸೂಕ್ತ ಚಿಕಿತ್ಸ್ಸೆ ವ್ಯವಸ್ಥೆ ಮಾಡಲಾಗುತ್ತಿದೆ.
    | ಡಾ.ಅನಿಲ್‌ಕುಮಾರ್ ಪಶುವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts