More

    ಅಕ್ರಮ ಮಣ್ಣುಗಾರಿಕೆ ಅವ್ಯಾಹತ: ಸೋಂಪುರ ವ್ಯಾಪ್ತಿಯಲ್ಲಿ ಟಿಪ್ಪರ್ ಲಾರಿಗಳದ್ದೇ ಅಬ್ಬರ

    ದಾಬಸ್‌ಪೇಟೆ: ಹೊನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿದೆ. ಮಣ್ಣು ಸಾಗಿಸುವ ಲಾರಿಗಳ ಮೇಲೆ ಆಗಾಗ ದಾಳಿ ಮಾಡುವ ಅಧಿಕಾರಿಗಳು ಅವರಿಗೆ ವಿಧಿಸುವ ದಂಡ ಬರೀ ‘ದಂಡ’ ಎನ್ನುವಂತಾಗಿದೆ. ಸ್ಥಳೀಯ ಪ್ರಭಾವಿಗಳಿಂದ ದೊಡ್ಡಮಟ್ಟದ ಪ್ರಭಾವಿ ರಾಜಕಾರಣಿಗಳ ಸಖ್ಯದಿಂದ ಈ ಅಕ್ರಮಕ್ಕೆ ಬ್ರೇಕ್ ಬೀಳುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.


    ಗ್ರಾಪಂ, ಗ್ರಾಮ ಸ್ವರಾಜ್ ಅಧಿನಿಯಮ ಮತ್ತು ಪಂಚಾಯತ್ ರಾಜ್ ನಿಬಂಧನೆಗಳಡಿ ಯಾವ ಗ್ರಾಪಂ ವ್ಯಾಪ್ತಿಯಲ್ಲಿಯೂ ಮಣ್ಣು ಸಾಗಿಸಕೂಡದು ಎಂಬುದು ಸರ್ಕಾರದ ಆದೇಶ. ಆದರೆ ಅದು ಕಾಗದಕ್ಕೆ ಸೀಮಿತವಾಗಿದೆ. ಇಲ್ಲಿನ ಸರ್ಕಾರಿ ಜಾಗ ಸೇರಿ ಕೆಲವು ರೈತರ ಜಮೀನಿನಲ್ಲಿನ ಫಲವತ್ತಾದ ಮಣ್ಣು ಅಗೆದು ಕಟ್ಟಡ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಅಕ್ರಮವಾಗಿ ಸಾಗಿಸುತ್ತಿರುವ ದೃಶ್ಯ ದಿನನಿತ್ಯ ನಡೆಯುತ್ತಿದೆ.


    ಮಣ್ಣಿಗೆ ಚಿನ್ನದ ಬೆಲೆ: ಸೋಂಪುರ ಕೈಗಾರಿಕಾ ಪ್ರದೇಶವಾದ ಮೇಲೆ ಇಲ್ಲಿಯ ಮಣ್ಣಿಗೆ ಚಿನ್ನದ ಬೆಲೆ ಬಂದಿದೆ. ಒಂದು ಟಿಪ್ಪರ್ ಲಾರಿಗೆ ನಾಲ್ಕೈದು ಸಾವಿರ ರೂ. ದರ ನಿಗದಿಯಾಗುತ್ತಿದ್ದು, ಅಕ್ರಮ ಮಣ್ಣುಗಾರಿಕೆ ಮೂಲಕ ಲಕ್ಷಾಧಿಪತಿಗಳಾಗುತ್ತಿದ್ದಾರೆ. ಒಂದೆಡೆ ಅಕ್ರಮ ಮರಳು ಫಿಲ್ಟರ್‌ಗೆ ಸರ್ಕಾರ ಬ್ರೇಕ್ ಹಾಕುವಲ್ಲಿ ಯಶ ಕಂಡಿದೆಯಾದರೂ ಮಣ್ಣು ಗಣಿಗಾರಿಕೆ ತಡೆಯುವಲ್ಲಿ ವಿಫಲವಾಗಿದೆ. ಸಂಜೆಯಾಗುತ್ತಲೇ ಜೆಸಿಬಿ, ಹಿಟಾಚಿ ಮೂಲಕ ದೊಡ್ಡಮಟ್ಟದಲ್ಲಿ ಮಣ್ಣು ಅಗೆಯುವ ದಂಧೆಕೋರರರು ರಾತ್ರೋರಾತ್ರಿ ಸಾಗಣೆ ಮಾಡುತ್ತಿದ್ದಾರೆ.


    ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ: ಟನ್‌ಗಟ್ಟಲೆ ಮಣ್ಣು ತುಂಬಿಕೊಂಡು ಗ್ರಾಮೀಣ ರಸ್ತೆಯಲ್ಲಿ ಸಾಗುವ ಟಿಪ್ಪರ್ ಲಾರಿಗಳಿಂದ ಸ್ಥಳೀಯರು ದಿನನಿತ್ಯ ಕಿರಿಕಿರಿ ಎದುರಿಸುವಂತಾಗಿದೆ, ಮಣ್ಣು ಸಾಗಣೆ ವೇಳೆ ಯಾವುದೇ ಹೊದಿಕೆ ಬಳಸುವುದಿಲ್ಲವಾದ್ದರಿಂದ ರಸ್ತೆ ತುಂಬೆಲ್ಲ ಧೂಳು ಆವರಿಸಿಕೊಳ್ಳುತ್ತದೆ. ಒಂದು ಲಾರಿ ಸಂಚರಿಸಿದರೆ ಕೆಲವು ನಿಮಿಷಗಳವರೆಗೆ ರಸ್ತೆಯೇ ಕಾಣದಂತೆ ಧೂಳು ಆವರಿಸಿಕೊಳ್ಳುವುದರಿಂದ ಸ್ಥಳೀಯರ ಆರೋಗ್ಯದಲ್ಲೂ ಏರುಪೇರು ಕಂಡುಬರುತ್ತಿದೆ.

    ದಂಡಕ್ಕೂ ಡೋಂಟ್ ಕೇರ್: ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ನಾಲ್ಕೈದು ಲಾರಿಗಳನ್ನು ಹಿಡಿದು ದಂಡ ವಿಧಿಸಿದ್ದು ಆದರೂ ಅದ್ಯಾವುದಕ್ಕೂ ಬಗ್ಗದ ಮಣ್ಣು ಸಾಗಣೆೆದಾರರು ತಮ್ಮ ದಂಧೆ ಮುಂದುವರಿಸಿದ್ದಾರೆ. ಕೆಲ ಖಾಸಗಿ ಕಂಪನಿಗಳ ಮಾಲೀಕರು ಅನುಮತಿ ಪತ್ರ ಇಲ್ಲದೆ ರಾಜಾರೋಷವಾಗಿ ಮಣ್ಣು ಸಾಗಣೆ ಮಾಡುತ್ತಿದ್ದಾರೆ. ನಿಯಮಬಾಹಿರವಾಗಿ ಆಳವಾದ ಗುಂಡಿ ತೋಡಿ ಮಣ್ಣು ಅಗೆಯುತ್ತಿದ್ದು, ಜಾನುವಾರುಗಳು ಬಿದ್ದು ಗಾಯಗೊಳ್ಳುವ ಪ್ರಕರಗಣಳೂ ನಡೆಯುತ್ತಿವೆ ಎಂಬುದು ಸಾರ್ವಜನಿಕರ ದೂರಾಗಿದೆ.


    ಟಿಪ್ಪರ್ ಲಾರಿಗಳು ವಶಕ್ಕೆ: ಮಣ್ಣು ಗಣಿಗಾರಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ನೆಲಮಂಗಲ ತಹಸೀಲ್ದಾರ್ ಹಾಗೂ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಕಾರ್ಯಪ್ರವೃತ್ತರಾದ ದಾಬಸ್‌ಪೇಟೆ ಪೊಲೀಸರು ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.


    ಲವತ್ತಾದ ಭೂಮಿ ಅಗೆದು ಅಕ್ರಮವಾಗಿ ಮಣ್ಣುಗಾರಿಕೆ ನಡೆಸುವುದು ಕಾನೂನು ಬಾಹಿರ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ವ್ಯಕ್ತವಾಗಿವೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ದಂಧೆಯಲ್ಲಿ ಯಾರೇ ಪ್ರಭಾವಿಗಳಿದ್ದರೂ ಕಾನೂನಿನಡಿ ಕ್ರಮ ಜರುಗಿಸಲಾಗುವುದು.

    | ಮಂಜುನಾಥ್ ತಹಸೀಲ್ದಾರ್

    ಅಕ್ರಮ ಮಣ್ಣುಗಾರಿಕೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳ ಮೇಲೆ ಪೊಲೀಸರ ಸಹಾಯದಿಂದ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.
    | ಶಶಿಧರ್ ಉಪತಹಸೀಲ್ದಾರ್ ಸೋಂಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts