More

    ತುಕ್ಕು ಹಿಡಿಯುತ್ತಿವೆ ಕಾರುಗಳು: ಅತ್ತಿಬೆಲೆ ಆರ್‌ಟಿಒ ಕಚೇರಿಯಲ್ಲಿ ಅನಾಥವಾದ ನೂರಾರು ವಾಹನ

    ಆನೇಕಲ್: ವಾಣಿಜ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ. ಬೆಲೆ ಬಾಳುವ ವಾಹನಗಳು ಕಳ್ಳರ ಪಾಲಾಗುತ್ತಿವೆ.
    ಹೌದು. ಅತ್ತಿಬೆಲೆಯಲ್ಲಿದ್ದ ವಾಣಿಜ್ಯ ಇಲಾಖೆ ಕಚೇರಿಯನ್ನು ಮುಚ್ಚಿದ ಬಳಿಕ ಇಲಾಖೆ ಅಧಿಕಾರಿಗಳು ಬಳಸುತ್ತಿದ್ದ ವಾಹನಗಳನ್ನು ಅತ್ತಿಬೆಲೆ ಆರ್‌ಟಿಒ ಕಚೇರಿ ಹಿಂಭಾಗದಲ್ಲಿ ನಿಲ್ಲಿಸಲಾಗಿದೆ. ಈ ಪೈಕಿ ಸ್ಕಾರ್ಪಿಯೊ, ಟಾಟಾ ಸುಮೋ ಸೇರಿ ಸುಸಜ್ಜಿತ ನೂರಕ್ಕೂ ಹೆಚ್ಚು ವಾಹನಗಳಿವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಹನಗಳು ಬಿಸಿಲಿನಲ್ಲಿ ಹಾಳಾಗುತ್ತಿದ್ದು, ಭದ್ರತೆ ಇಲ್ಲದ ಕಾರಣ ಬಿಡಿ ಭಾಗಗಳು ಕಳ್ಳರ ಪಾಲಾಗುತ್ತಿವೆ.


    ಕಚೇರಿ ಸ್ಥಳಾಂತರಗೊಂಡು ಮೂರ್ನಾಲ್ಕು ವರ್ಷವಾಗಿದ್ದು, ವಾಹನಗಳ ಬಿಡಿ ಭಾಗಗಳೆಲ್ಲವೂ ಕಳವಾಗಿವೆ. ಕೆಲವು ವಾಹನಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರ ವಾಹನ ಖರೀದಿಸಿದ್ದರೂ ಸಂಬಂಧಪಟ್ಟ ಇಲಾಖೆಗಳು ಜಾಣ ಕಿವುಡರಂತಾಗಿವೆ.

    ಅಕ್ರಮದ ಅಡ್ಡೆ: ಕೆಲ ವರ್ಷಗಳ ಹಿಂದೆ ವಾಣಿಜ್ಯ ಇಲಾಖೆ ಕಚೇರಿಯನ್ನು ಅತ್ತಿಬೆಲೆಯಿಂದ ಬೇರೆಡೆಗೆ ವರ್ಗಾಯಿಸಲಾಗಿದೆ. ಆದರೆ ಅಧಿಕಾರಿಗಳು ಬಳಕೆ ಮಾಡುತ್ತಿದ್ದ ನೂರಾರು ವಾಹನಗಳನ್ನು ಆರ್‌ಟಿಒ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದೆ. ರಾತ್ರಿ ವೇಳೆ ಈ ಆವರಣದಲ್ಲಿ ಭದ್ರತೆ ಇಲ್ಲದ ಕಾರಣ ಪುಂಡಪೋಕರಿಗಳ ಅಡ್ಡೆಯಾಗುತ್ತಿದೆ. ಇದೇ ಆವರಣದಲ್ಲಿ ಮದ್ಯ ಸೇವಿಸುವ ವ್ಯಸನಿಗಳು ತಮಗೆ ಇಷ್ಟ ಬಂದ ವಾಹನಗಳ ಬಿಡಿ ಭಾಗಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ರಾಜಾರೋಷವಾಗಿ ಕಳವು ಮಾಡುತ್ತಿದ್ದಾರೆ.

    ಸರ್ಕಾರಕ್ಕೆ ಹೊರೆ: ವಾಹನಗಳಿಗೆ ಭದ್ರತೆ ನೀಡದ ಪರಿಣಾಮ ಇಂಜಿನ್, ಟೈಯರ್‌ಗಳು ಕಳವಾಗಿವೆ. ವಾಹನಗಳನ್ನು ಹರಾಜು ಹಾಕಿದ್ದರೂ ಸರ್ಕಾರಕ್ಕೆ ಹಣ ಸಂದಾಯವಾಗುತ್ತಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಲಕ್ಷಾಂತರ ಬೆಲೆಬಾಳುವ ವಾಹನಗಳು ಹಾಳಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೂ ಹೊರೆಯುಂಟಾಗುತ್ತಿದೆ.

    ವಾಣಿಜ್ಯ ಇಲಾಖೆ ಅಧಿಕಾರಿಗಳು ಈ ವಾಹನಗಳನ್ನು ಬಳಕೆ ಮಾಡುತ್ತಿದ್ದರೂ ಅತ್ತಿಬೆಲೆಯಿಂದ ವಾಣಿಜ್ಯ ಇಲಾಖೆಯನ್ನು ನಿಲ್ಲಿಸಿದ ಮೇಲೆ ಅದೇ ಸ್ಥಳದಲ್ಲಿ ಅವುಗಳು ನಿಂತಿವೆ. ಸರ್ಕಾರ ಇದನ್ನು ನಿಯಮದಂತೆ ತೆಗೆಯುವುದರಿಂದ ಯಾವಾಗ ಹರಾಜು ಹಾಕುತ್ತಾರೆ ಗೊತ್ತಿಲ್ಲ.
    | ಅನಿಲ್ ಮೋಟಾರ್ ವಾಹನ ನಿರೀಕ್ಷಕ, ಅತ್ತಿಬೆಲೆ ಆರ್‌ಟಿಒ ಕಚೇರಿ


    ಅತ್ತಿಬೆಲೆ ಆರ್‌ಟಿಒ ಕಚೇರಿ ಹಿಂಭಾಗದಲ್ಲಿ ನಿಲ್ಲಿಸಿರುವ ನೂರಾರು ವಾಹನಗಳ ಬಿಡಿ ಭಾಗಗಳು ಕಳ್ಳರ ಪಾಲಾಗುತ್ತಿವೆ. ಮಳೆಬಿಸಿನಲ್ಲಿ ವಾಹನಗಳು ಹಾಳಾಗುತ್ತಿವೆ. ಹಲವಾರು ಇಲಾಖೆಗಳ ವಾಹನಗಳನ್ನು ಇಲ್ಲಿ ನಿಲ್ಲಿಸಿದ್ದು, ಪ್ರಸ್ತುತ ಬಳಕೆಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ಹರಾಜು ಹಾಕಿದರೂ ಕೋಟಿಗಟ್ಟಲೆ ಹಣ ಸರ್ಕಾರದ ಬೊಕ್ಕಸಕ್ಕೆ ಬರಲಿದೆ.
    | ರಮೇಶ್ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts