More

    ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ಸಭೆ: ನಿರ್ಣಯ, ಚರ್ಚಿತ ವಿಷಯಗಳ ಮಾಹಿತಿ ಇಲ್ಲಿದೆ..

    ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಕುರಿತಂತೆ ಇಂದು ರಾಮಜನ್ಮಭೂಮಿ ಟ್ರಸ್ಟ್​ ಸಭೆ ನಡೆಯಿತು. ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ನಡೆದ ಟ್ರಸ್ಟ್​ ಸಭೆಯಲ್ಲಿ ಮಂದಿರ ನಿರ್ಮಾಣ ಕುರಿತು ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು.

    ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್​ದಾಸ್ ಜೀ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದಗಿರಿ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮೊದಲಾದವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ‌

    ನೀಲಿಮಿಶ್ರಿತ ಶ್ವೇತಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸುವ ಕುರಿತು ಪ್ರಮುಖವಾಗಿ ನಿರ್ಣಯಿಸಲಾಯಿತು.
    ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ರೂ. ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜಿಎಸ್ ಟಿ ವೆಚ್ಚ, ರಾಯಲ್ಟಿ ಮೊದಲಾದ ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1300 ಕೋಟಿ ರೂ. ತಗುಲಬಹುದೆಂದು ಅಂದಾಜಿಸಲಾಗಿದೆ . ಆದರೆ ಮಂದಿರಕ್ಕಾಗಿ ದೇಶಾದ್ಯಂತ ಭಕ್ತರು ನೀಡುತ್ತಿರುವ ದೇಣಿಗೆಯೂ ಭರಪೂರ ಹರಿದು ಬರುತ್ತಿದೆ. ‌ತಿಂಗಳೊಂದರಲ್ಲಿ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ದೇಣಿಗೆ ಬರುತ್ತಿದ್ದು ಕೆಲವೊಮ್ಮೆ ಈ ಮೊತ್ತ ಕೋಟಿಗೂ ಮೀರಿದೆ. ಆದ್ದರಿಂದ ಈ ತನಕದ ಸುಮಾರು 300 ಕೋಟಿ ಖರ್ಚನ್ನು ಈಗ ಹರಿದು ಬರುತ್ತಿರುವ ಹೆಚ್ಚುವರಿ ದೇಣಿಗೆಯಿಂದಲೇ ನಿರ್ವಹಿಸಲಾಗಿದೆ ಎಂದೂ ಸಭೆಗೆ ತಿಳಿಸಲಾಯಿತು. ಆದ್ದರಿಂದ ಆರಂಭದ ದೇಣಿಗೆ ಸಂಗ್ರಹ ಅಭಿಯಾನದಿಂದ ಬಂದ‌ ಸಾವಿರ ಕೋಟಿಗೂ ಮೀರಿದ ಮೂಲಧನದ ಸಮ್ಯಕ್ ನಿರ್ವಹಣೆಯ ಮಾಡಬೇಕಾದ ಕುರಿತಾಗಿಯೂ ಸಭೆ ಗಂಭೀರ ಚರ್ಚೆ ನಡೆಸಿತು. ಮಂದಿರಕ್ಕೆ ಬೇಕಾಗುವ ಸಾಗುವಾನಿ ಮರವನ್ನು ಮಹಾರಾಷ್ಟ್ರದಿಂದ ತರಿಸಿಕೊಳ್ಳಲಾಗುವುದು. ಈ ಖರ್ಚುಗಳ ವಿವರಗಳನ್ನು ಸಭೆಗೆ ಸಲ್ಲಿಸಿ ಅನುಮೋದನೆ ಪಡೆಯಲಾಯಿತು.

    ಕರ್ನಾಟಕದ ಭಕ್ತರಿಂದ ಸ್ವರ್ಣ ಶಿಖರ: ಪೇಜಾವರ ಶ್ರೀ

    ಕೋಟ್ಯಂತರ ಹಿಂದುಗಳ ಶತಶತಮಾನಗಳ ಕನಸು ಸಾಕಾರಗೊಂಡು ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕೆನ್ನುವ ನಾಡಿನ ಅಸಂಖ್ಯ ಭಕ್ತರ ಇಂಗಿತವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಭೆಯಲ್ಲಿ ಮಂಡಿಸಿದರು.

    ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರವನ್ನು ರಾಜ್ಯದ ಭಕ್ತರ ಸಹಕಾರದಿಂದ ನಿರ್ಮಿಸಿ ವಿಶ್ಚ ಹಿಂದು ಪರಿಷತ್ ನೇತೃತ್ವದಲ್ಲಿ ಕರ್ನಾಟಕದ ಹಂಪೆಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಿ ಅಯೋಧ್ಯೆಗೆ ತಲುಪಿಸುವ ಇರಾದೆಯನ್ನು ಭಕ್ತರು ಹೊಂದಿರುವುದನ್ನು ಶ್ರೀಗಳು ತಿಳಿಸಿದರು.
    ಅದರ ಜೊತೆಗೆ ಮುಂದಿನ ವರ್ಷಾಂತ್ಯಕ್ಕೆ ನಡೆಯುವ ನೂತನ ಮಂದಿರ ಸಮರ್ಪಣೆ ಹಾಗೂ ಶ್ರೀರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ದಿನಾಂಕ ನಿಗದಿ ಪಡಿಸಿದ ಬಳಿಕ ದೇಶದ ಭಕ್ತರನ್ನು ಈ ಉತ್ಸವಕ್ಕೆ ಆಹ್ವಾನಿಸುವ ಸಲುವಾಗಿಯೂ ಒಂದು ಯಾತ್ರೆ ಕೈಗೊಳ್ಳಬಹುದೆಂಬ ಅಭಿಪ್ರಾಯವನ್ನೂ ಶ್ರೀಗಳು ವ್ಯಕ್ತಪಡಿಸಿದರು .
    ವಿಶ್ವಸ್ಥರು, ಗೋರಖಪುರ ಜಿಲಾಧಿಕಾರಿ, ವಿಹಿಂಪ ಮುಖಂಡ ಗೋಪಾಲ್ ಜೀ, ಮಂದಿರ ನಿರ್ಮಾಣದ ಇಂಜಿನಿಯರ್, ವಾಸ್ತುತಜ್ಞರು ಉಪಸ್ಥಿತರಿದ್ದರು. ಮತ್ತೋರ್ವ ವಿಶ್ವಸ್ಥರಾದ ಹಿರಿಯ ನ್ಯಾಯವಾದಿ ಪರಾಶರನ್ ಆನ್​ಲೈನ್​ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

    ನಾಳೆ ರಾಜ್ಯದ ಎಲ್ಲೆಲ್ಲಿ ಜೋರು ಮಳೆ?; ಇಲ್ಲಿದೆ ಅಲರ್ಟ್ ವಿವರ..

    ಕೆರೆ ಬಳಿ ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ!

    ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts