More

    ಆರೋಗ್ಯ ಬಂಧು ಆಪ್ ಮೂಲಕ ವೈದ್ಯಕೀಯ ಸೇವೆ

    ಹುಬ್ಬಳ್ಳಿ: ರೋಗಿಗಳು ಆನ್​ಲೈನ್ ಮೂಲಕ ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗುವುದಕ್ಕಾಗಿ ‘ಆರೋಗ್ಯ ಬಂಧು’ ಎಂಬ ಡಿಜಿಟಲ್ ಆಪ್ ಅನ್ನು ಶಾಸಕ ಅರವಿಂದ ಬೆಲ್ಲದ ಹೊರತಂದಿದ್ದಾರೆ.

    ನಗರದಲ್ಲಿ ಮಂಗಳವಾರ ಈ ಆಪ್ ಬಿಡುಗಡೆಗೊಳಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಶಾಸಕ ಬೆಲ್ಲದ, ಹೆಲ್ತ್ ಸೈನ್ಸ್ ಸಹಯೋಗದೊಂದಿಗೆ ಈ ಆಪ್ ರಚಿಸಿದ್ದಾಗಿ ತಿಳಿಸಿದರು.

    ಕೋವಿಡ್ ಸಂದರ್ಭದಲ್ಲಿ ಅನೇಕ ರೋಗಿಗಳಿಗೆ ವೈದ್ಯರನ್ನು ಸಂರ್ಪಸಲು ಸಾಧ್ಯವಾಗಲಿಲ್ಲ. ಆಗ ಕೇಂದ್ರ ಸರ್ಕಾರ ನ್ಯಾಷನಲ್ ಡಿಜಿಟಲ್ ಹೆಲ್ತ್ ಪಾಲಿಸಿ ಜಾರಿಗೆ ತಂದಿತು. ಅದೇ ನಿಯಮಗಳಡಿ ಈ ಆಪ್ ರಚಿಸಿದ್ದಾಗಿ ಹೇಳಿದರು.

    ರಾಜ್ಯಾದ್ಯಂತ ಈಗಾಗಲೇ 100ಕ್ಕೂ ಹೆಚ್ಚು ವೈದ್ಯರು ಈ ಆಪ್​ನಡಿ ಹೆಸರು ನೋಂದಾಯಿಸಿದ್ದಾರೆ. ಇನ್ನೂ ಹೆಚ್ಚಿನ ವೈದ್ಯರು ಆಪ್​ನೊಂದಿಗೆ ಕೈ ಜೋಡಿಸುವವರಿದ್ದಾರೆ. ರಾಜ್ಯದ ಯಾವುದೇ ಭಾಗದ ರೋಗಿಗಳು ತಮ್ಮ ರೋಗಕ್ಕೆ ಸಲಹೆ, ಸೂಚನೆಗಳನ್ನು ಪಡೆಯಲು ವೈದ್ಯರನ್ನು ಸಂರ್ಪಸಬಹುದು. ರೋಗಿಗಳಿಂದ ವೈದ್ಯರಿಗೆ ಆನ್​ಲೈನ್ ಮೂಲಕ ಶುಲ್ಕ ಪಾವತಿಯಾಗಲಿದೆ. ರೋಗಿಗಳ ರಕ್ತತಪಾಸಣೆ ವರದಿ ಹಾಗೂ ಔಷಧಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು. ವ್ಯಕ್ತಿಯ ರೋಗಕ್ಕೆ ಸಂಬಂಧಿಸಿದ ಮಾಹಿತಿ ಅಥವಾ ದಾಖಲೆಗಳನ್ನು ನಿರ್ವಹಿಸಲಾಗುವುದು ಎಂದರು.

    ತುರ್ತು ಚಿಕಿತ್ಸೆಯ ಅವಕಾಶವನ್ನೂ ಆಪ್​ನಲ್ಲಿ ಕಲ್ಪಿಸಲಾಗಿದೆ. ಆಪ್ ಅನ್ನು ಮೊಬೈಲ್ ಮೂಲಕ ಉಚಿತವಾಗಿ ಡೌನ್​ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದರು.

    ಗ್ರಾಮೀಣ ಪ್ರದೇಶದಲ್ಲಿ ರೋಗಿಗಳು ಈ ಆಪ್ ಮೂಲಕ ವೈದ್ಯರನ್ನು ಸಂರ್ಪಸಲು ಅನುಕೂಲವಾಗುವುದಕ್ಕಾಗಿ ಸ್ಥಳೀಯ ಔಷಧಿ ಅಂಗಡಿ ಅಥವಾ ಆರ್​ಎಂಪಿ ವೈದ್ಯರ ಆಸ್ಪತ್ರೆಗಳಲ್ಲಿ ಆರೋಗ್ಯ ಬಂಧು ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

    ಹೆಲ್ತ್ ಸೈನ್ಸ್​ನ ಸಂಸ್ಥಾಪಕ ಹನುಮಂತರಾವ್, ಡಾ. ಕ್ರಾಂತಿಕಿರಣ, ಹೆಸ್ಕಾಂ ನಿರ್ದೇಶಕ ಪ್ರಕಾಶ ಗೋಡಬೋಲೆ, ಪಾಲಿಕೆ ಮಾಜಿ ಸದಸ್ಯ ರಾಮಣ್ಣ ಬಡಿಗೇರ ಉಪಸ್ಥಿತರಿದ್ದರು.

    ಮೂರು ತಿಂಗಳಲ್ಲಿ ವರದಿ: ನವಲೂರ ಸೇತುವೆ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದು, ಬಿಆರ್​ಟಿಎಸ್ ಈ ಕುರಿತು 3 ತಿಂಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ಬಿಆರ್​ಟಿಎಸ್ ಉತ್ತಮ ಯೋಜನೆಯಾಗಿದ್ದು, ಲೋಪಗಳನ್ನು ಸರಿಪಡಿಸಲಾಗುವುದು. ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದ ವ್ಯಾಜ್ಯ ಹೈಕೋರ್ಟ್​ನಲ್ಲಿದ್ದು, ಡಿ. 30ಕ್ಕೆ ವ್ಯಾಜ್ಯ ಮುಂದೂಡಲಾಗಿದೆ ಎಂದರು.

    ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಇತರ ಶಾಸಕರಂತೆ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ ಈ ಬಯಕೆಗಾಗಿ ಯಾರೊಬ್ಬರ ಮುಂದೆಯೂ ಬೇಡಿಕೆ ಇಟ್ಟಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. ನಾನು ಯಾವ ಜವಾಬ್ದಾರಿ ನಿರ್ವಹಿಸಬೇಕು ಎಂಬುದನ್ನು ಸರ್ಕಾರ ಹಾಗೂ ಪಕ್ಷ ತೀರ್ವನಿಸುತ್ತದೆ. ಯಾವುದೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು. ಮರಾಠ ಅಭಿವೃದ್ಧಿ ನಿಗಮಕ್ಕೆ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕನ್ನಡದ ಬಗ್ಗೆ ಅಭಿಮಾನ ಇಲ್ಲದ ಸಂಘಟನೆಗಳು ಬಂದ್ ಕರೆ ನೀಡಿವೆ ಎಂದರು. ವಾಟಾಳ್ ನಾಗರಾಜ್ ಅವರಿಗೆ ಯಾವುದೇ ಕೆಲಸವಿಲ್ಲ. ಸದಾ ಸುದ್ದಿಯಲ್ಲಿ ಇರಬೇಕೆಂಬ ಕಾರಣಕ್ಕಾಗಿ ಈ ನಿಗಮದ ವಿರುದ್ಧ ಅಪಸ್ವರ ಎತ್ತಿದ್ದಾರೆ. ವಾಟಾಳ್ ಅವರಂತಹ ಅನೇಕರು ರೋಲ್​ಕಾಲ್ ಹೋರಾಟಗಾರರಾಗಿದ್ದಾರೆ ಎಂದು ಟೀಕಿಸಿದರು. ಕರ್ನಾಟಕದಲ್ಲಿರುವ ಮರಾಠ ಸಮುದಾಯದವರು ಕನ್ನಡಿಗರು. ಅವರಲ್ಲಿ ಅನೇಕರಿಗೆ ಮರಾಠಿ ಭಾಷೆ ಬರುವುದಿಲ್ಲ. ಹಲವಾರು ಜನಪ್ರತಿನಿಧಿಗಳು ಮರಾಠಿಗರಾಗಿದ್ದಾರೆ. ಈ ಹಿಂದೆ ಇದೇ ಸಮುದಾಯದ ಕೆಲವರು ಸಚಿವರೂ ಆಗಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts