More

    8 ತಿಂಗಳ ಮಗುವಿನ ಗಂಟಲಲ್ಲಿತ್ತು 2 ಸೆಂಮೀ ಅಗಲದ ಬಾಟಲ್‌ ಮುಚ್ಚಳ!: ವೈದ್ಯರಿಂದ ಯಶಸ್ವಿ ಚಿಕಿತ್ಸೆ

    ಬೆಂಗಳೂರು: ಆಕಸ್ಮಿಕವಾಗಿ 2 ಸೆಂ.ಮೀ.ನ ಬಾಟಲ್‌ನ ರಬ್ಬರ್ ಮುಚ್ಚಳವನ್ನು ನುಂಗಿದ್ದ 8 ತಿಂಗಳ ಮಗುವಿನ ಪ್ರಾಣ ಉಳಿಸುವಲ್ಲಿ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಮಗುವಿಗೆ ಯಾವುದೇ ತೊಂದರೆ ಆಗದಂತೆ ಆ ಬಾಟಲ್ ಮುಚ್ಚಳವನ್ನು ಹೊರಗೆ ತೆಗೆದಿದ್ದಾರೆ.

    8 ತಿಂಗಳ ಗಂಡು ಮಗು ಮನೆಯಲ್ಲಿ ಆಟವಾಡುತ್ತಿರುವ ವೇಳೆ ಕೈಗೆ ಸಿಕ್ಕಿದ ಬಾಟಲ್‌ನ ರಬ್ಬರ್‌ ಮುಚ್ಚಳವನ್ನು ನುಂಗಿದೆ. ಆದರೆ, ಆ ಕ್ಷಣಕ್ಕೆ ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ಬಗ್ಗೆ ಪೋಷಕರಿಗೂ ತಿಳಿದಿಲ್ಲ. ಆದರೆ, ಒಂದು ವಾರದೊಳಗೆ ಮಗುವಿನ ಧ್ವನಿ ಕ್ಷೀಣಿಸುತ್ತಾ ಬಂದಿದೆ, ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಹಾರ ಸೇವಿಸುತ್ತಿರಲಿಲ್ಲ. ಗಂಟಲಿನಿಂದ ಶಿಳ್ಳೆಯ ರೀತಿಯಲ್ಲಿ ದನಿ ಹೊರಡುತ್ತಿತ್ತು. ಇದರಿಂದ ಗಾಬರಿಯಾದ ಕುಟುಂಬಸ್ಥರು ಫೋರ್ಟಿಸ್‌ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಇಎನ್‌ಟಿ ತಜ್ಞ ಡಾ. ಎಚ್‌.ಕೆ. ಸುಶೀನ್‌ ದತ್‌ ಹಾಗೂ ಡಾ ನರೇಂದ್ರನಾಥ್‌ ಅವರ ತಂಡ, ಮಗುವಿನ ಗಂಟಲಲ್ಲಿದ್ದ ಮುಚ್ಚಳ ತೆಗೆದು ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದೆ.

    “ಪ್ರಾರಂಭದಲ್ಲಿ ಶ್ವಾಸಕೋಶದ ಸಮಸ್ಯೆ ಇರಬಹುದೆಂದು ತಿಳಿದಿದ್ದೆವು. ಆದರೆ, ಕೆಲ ಅನುಮಾನದಿಂದ ಲಾರಿಂಗೋಸ್ಕೋಪಿ ಮೂಲಕ ಗಂಟಲಿನ ಪರೀಕ್ಷೆ ನಡೆಸಿದಾಗ 2 ಸೆಂ.ಮೀ ಅಗಲದ ಬಿಳಿ ಆಕಾರದ ಮುಚ್ಚಳ ಇರುವುದು ಗೊತ್ತಾಯಿತು. ಕೂಡಲೇ ಆ ಮುಚ್ಚಳವನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾದೆವು. ಒಂದು ವೇಳೆ ಈ ವಿಷಯ ತಿಳಿಯದೇ ಕೇವಲ ಮಾತ್ರೆ, ಇಂಜಕ್ಷನ್‌ ನೀಡಿದ್ದರೆ, ಮುಂದಿನ ದಿನಗಳಲ್ಲಿ ಅನ್ನನಾಳದ ಮೇಲ್ಭಾಗ, ಎದೆಯ ಸೋಂಕು ಅಥವಾ ಶ್ವಾಸಕೋಶದ ಸೋಂಕು ಇತ್ಯಾದಿ ಬಹುದೊಡ್ಡ ಆರೋಗ್ಯ ಸಮಸ್ಯೆ ಉಂಟಾಗುತ್ತಿತ್ತು” ಎಂದು ಡಾ ನರೇಂದ್ರನಾಥ್‌ ಹೇಳಿದ್ದಾರೆ.

    “ಮನೆಯಲ್ಲಿ ಸಣ್ಣ ಮಕ್ಕಳ ಕೈಗೆ ಇಂತಹ ಸಣ್ಣ ಪದಾರ್ಥಗಳು ಸಿಗದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯಕ. ಮಕ್ಕಳಿಗೆ ತಿಳಿಯದೇ ಅದನ್ನು ನುಂಗಬಹುದು. ಹೀಗಾಗಿ ಮನೆಯಲ್ಲಿ ಮಗುವಿನ ಆರೈಕೆ ಬಗ್ಗೆ ಹೆಚ್ಚು ಗಮನ ನೀಡಬೇಕು” ಎನ್ನುತ್ತಾರೆ ಡಾ. ಎಚ್ ಕೆ ಸುಶೀನ್ ದತ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts