More

    ಇಸ್ರೇಲ್​ ಚುನಾವಣೆ: ಭರ್ಜರಿ ಗೆಲುವು ದಾಖಲಿಸಿದ ಬೆಂಜಮಿನ್ ನೆತನ್ಯಾಹು, ಪ್ರಧಾನಿ ಮೋದಿ ಅಭಿನಂದನೆ

    ನವದೆಹಲಿ: ಇಸ್ರೇಲ್​ನ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವು ಗೆಲುವು ದಾಖಲಿಸಿದ್ದು, ನೇತನ್ಯಾಹು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಈವರೆಗೆ ಇಸ್ರೇಲಿ ಪ್ರಧಾನಿಯಾಗಿದ್ದ ಯಾಯಿರ್ ಲ್ಯಾಪಿಡ್ ಗುರುವಾರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದು, ಬಲಪಂಥೀಯ ಪಕ್ಷಗಳ ಒಕ್ಕೂಟವು ಮುಂದಿನ ಸರ್ಕಾರವನ್ನು ರಚಿಸಲು ಮತ್ತು ದೇಶವನ್ನು ಕಾಡುತ್ತಿರುವ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಲು ಸಂಸತ್ತಿನಲ್ಲಿ ಬಹುಮತವನ್ನು ಪಡೆದುಕೊಂಡಿರುವ ವಿರೋಧ ಪಕ್ಷದ ನಾಯಕ ಬೆಂಜಮಿನ್ ನೆತನ್ಯಾಹು ಅವರನ್ನು ಅಭಿನಂದಿಸಿದರು.

    ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿದ ನನ್ನ ಸ್ನೇಹಿತ ನೇತನ್ಯಾಹು ಅವರಿಗೆ ಅಭಿನಂದನೆಗಳು. ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಗೊಳಿಸುವತ್ತ ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ಇಷ್ಟೇ ಅಲ್ಲದೆ, ಉಭಯ ದೇಶಗಳ ಕಾರ್ಯತಂತ್ರದ ಪಾಲುದಾರಿಕೆಗೆ ಆದ್ಯತೆ ನೀಡಿದ ಯಾಯಿರ್ ಲ್ಯಾಪಿಡ್ ಅವರಿಗೆ ಧನ್ಯವಾದ ತಿಳಿಸಿರುವ ಪ್ರಧಾನಿ ಮೋದಿ, ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ಫಲಪ್ರದ ವಿಚಾರ ವಿನಿಮಯವನ್ನು ಮುಂದುವರಿಸಲು ನಾನು ಆಶಿಸುತ್ತೇನೆ ಎಂದಿದ್ದಾರೆ.

    ಅಂದಹಾಗೆ ನೇತನ್ಯಾಹು ನೇತೃತ್ವದ ಬಲಪಂಥೀಯ ಪಕ್ಷಗಳು ಒಟ್ಟು 120 ಸ್ಥಾನಗಳಲ್ಲಿ 64 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಅಭೂತಪೂರ್ವ ಗೆಲುವಿನೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಏರಿದೆ.

    ಚುನಾವಣೆ ಹೇಗೆ ನಡೆಯುತ್ತದೆ
    ಇಸ್ರೇಲ್ ಸಂಸದೀಯ ಪ್ರಜಾಪ್ರಭುತ್ವವಾಗಿದೆ. ಇಲ್ಲಿ ಜನರು ತಾವು ಬೆಂಬಲಿಸುವ ಪಕ್ಷಕ್ಕೆ ಮತ ಹಾಕುತ್ತಾರೆ. ಕನಿಷ್ಠ ಶೇ. 3.25ರಷ್ಟು ಮತಗಳನ್ನು ಪಡೆಯುವ ಪ್ರತಿಯೊಂದು ಪಕ್ಷವು ಅದು ಗೆದ್ದ ಒಟ್ಟು ಮತಗಳ ಶೇಕಡಾವಾರು ಪ್ರಮಾಣವನ್ನು ಆಧರಿಸಿ ನೆಸ್ಸೆಟ್​ನಲ್ಲಿ ನಿರ್ದಿಷ್ಟ ಸಂಖ್ಯೆಯ ಸ್ಥಾನಗಳನ್ನು ಪಡೆಯುತ್ತದೆ. ನೆಸ್ಸೆಟ್​ನಿಂದ ಪ್ರತ್ಯೇಕವಾಗಿ ಪ್ರಧಾನ ಮಂತ್ರಿಯನ್ನು ನೇರವಾಗಿ ಆಯ್ಕೆ ಮಾಡುವ ಪ್ರಯೋಗವನ್ನು ಇಸ್ರೇಲ್ ಹಿಂದೆ ಮಾಡಿತ್ತು. ಆದರೆ, ಮತ್ತೆ ಸಂಸತ್ ಚುನಾವಣೆ ವ್ಯವಸ್ಥೆಗೆ ವಾಪಸಾಯಿತು.

    ಮಂಗಳವಾರ ನಡೆದ ಚುನಾವಣೆಯ ಮತಎಣಿಕೆ ಮುಕ್ತಾಯವಾಗಿದೆ. ಮಾಜಿ ಪ್ರಧಾನಿ ನೆತನ್ಯಾಹು ಅವರ ಬಣವು 120 ಸ್ಥಾನಗಳ ಪೈಕಿ 64 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 70 ವರ್ಷದ ನೆತನ್ಯಾಹು ಅವರು ಇಸ್ರೇಲ್​ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದಾರೆ. 1996 ರಿಂದ 1999ರವರೆಗೆ ಮತ್ತು 2009 ರಿಂದ 2019ರವರೆಗೆ ಅಧಿಕಾರದಲ್ಲಿದ್ದರು. ಈಗ ಅವರು ದಾಖಲೆಯ 5ನೇ ಅವಧಿಗೆ ಪ್ರಧಾನಿಯಾಗಲು ಸಜ್ಜಾಗಿದ್ದಾರೆ.

    ಅಂದಹಾಗೆ ಇಸ್ರೇಲ್​ನಲ್ಲಿ ನಾಲ್ಕು ವರ್ಷಗಳಲ್ಲಿ ಐದನೆಯ ಬಾರಿ ರಾಷ್ಟ್ರೀಯ ಚುನಾವಣೆ ನಡೆದಿದೆ. ಈ ಪುಟ್ಟ-ದಿಟ್ಟ ರಾಷ್ಟ್ರದಲ್ಲಿ ಮೇಲಿಂದ ಮೇಲೆ ಚುನಾವಣೆ ನಡೆಯುತ್ತಿರುವುದಕ್ಕೆ ಪ್ರಮುಖ ಕಾರಣ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿರುವುದು; ಮೈತ್ರಿಕೂಟ ರಚಿಸಿಕೊಂಡು ಆಡಳಿತಕ್ಕೆ ಬರುವ ಸರ್ಕಾರಗಳು ಏಕೈಕ ಸದಸ್ಯನ ಬೆಂಬಲ ಹಿಂತೆಗೆತದಿಂದಲೂ ಉರುಳಿಬೀಳುವಂತಹ ಅತಂತ್ರ ಸ್ಥಿತಿ ನೆಲೆಸಿರುವುದು. ಇದೀಗ ನವೆಂಬರ್ 1ರಂದು ಮತ್ತೆ ರಾಷ್ಟ್ರೀಯ ಚುನಾವಣೆ ನಡೆಯಿತು. ಈ ಹಿಂದೆ ಪ್ರಧಾನಿಯಾಗಿದ್ದ ಬೆಂಜಮಿನ್ ನೆತನ್ಯಾಹು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಮತ್ತೆ ಮತ್ತೆ ಚುನಾವಣೆ; ಪುಟ್ಟ ದೇಶದ ದೊಡ್ಡ ಬವಣೆ

    ಇಮ್ರಾನ್ ಹತ್ಯೆ ಯತ್ನ ವಿಫಲ; ಲಾಂಗ್ ಮಾರ್ಚ್ ರ‍್ಯಾಲಿ ವೇಳೆ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts