More

    ಮತ್ತೆ ಮತ್ತೆ ಚುನಾವಣೆ; ಪುಟ್ಟ ದೇಶದ ದೊಡ್ಡ ಬವಣೆ

    ಇಸ್ರೇಲ್​ನಲ್ಲಿ ನಾಲ್ಕು ವರ್ಷಗಳಲ್ಲಿ ಐದನೆಯ ಬಾರಿ ರಾಷ್ಟ್ರೀಯ ಚುನಾವಣೆ ನಡೆದಿದೆ. ಈ ಪುಟ್ಟ-ದಿಟ್ಟ ರಾಷ್ಟ್ರದಲ್ಲಿ ಮೇಲಿಂದ ಮೇಲೆ ಚುನಾವಣೆ ನಡೆಯುತ್ತಿರುವುದಕ್ಕೆ ಪ್ರಮುಖ ಕಾರಣ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿರುವುದು; ಮೈತ್ರಿಕೂಟ ರಚಿಸಿಕೊಂಡು ಆಡಳಿತಕ್ಕೆ ಬರುವ ಸರ್ಕಾರಗಳು ಏಕೈಕ ಸದಸ್ಯನ ಬೆಂಬಲ ಹಿಂತೆಗೆತದಿಂದಲೂ ಉರುಳಿಬೀಳುವಂತಹ ಅತಂತ್ರ ಸ್ಥಿತಿ ನೆಲೆಸಿರುವುದು.

    ಇಸ್ರೇಲ್​ನಲ್ಲಿ ನವೆಂಬರ್ 1ರಂದು ಮತ್ತೆ ರಾಷ್ಟ್ರೀಯ ಚುನಾವಣೆ ನಡೆದಿದೆ. ಈ ಹಿಂದೆ ಪ್ರಧಾನಿಯಾಗಿದ್ದ ಬೆಂಜಮಿನ್ ನೆತನ್ಯಾಹು ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ಸ್ಪಷ್ಟವಾಗಿದೆ. ನೆತನ್ಯಾಹು ಅವರ ಲಿಕುಡ್ ಪಕ್ಷವು ನೆಸ್ಸೆಟ್ ಅಂದರೆ ಸಂಸತ್​ನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    ಬೆಂಜಮಿನ್ ನೆತನ್ಯಾಹು ಇಸ್ರೇಲ್ ಇತಿಹಾಸದಲ್ಲಿ ಬೇರೆಯವರಿಗಿಂತ ಹೆಚ್ಚು ಕಾಲ ಪ್ರಧಾನ ಮಂತ್ರಿಯಾದ ಹೆಗ್ಗಳಿಕೆ ಹೊಂದಿದ್ದಾರೆ. ಲಂಚ, ವಂಚನೆ ಸೇರಿದಂತೆ ಭ್ರಷ್ಟಾಚಾರದ ವಿಚಾರಣೆಯನ್ನು ಈಗ ಎದುರಿಸುತ್ತಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಸೈದ್ಧಾಂತಿಕವಾಗಿ ಅವರೊಂದಿಗೆ ಒಪ್ಪುವ ಮಧ್ಯ-ಬಲ ಪಂಥದ ಕೆಲವು ಉನ್ನತ ರಾಜಕಾರಣಿಗಳು ವೈಯಕ್ತಿಕ ಅಥವಾ ರಾಜಕೀಯ ಕಾರಣಗಳಿಗಾಗಿ ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹಿಂದಿನ ಚುನಾವಣೆಗಳಲ್ಲಿ ಆಡಳಿತಕ್ಕೆ ಬರಲು ಅವರಿಗೆ ಸಾಧ್ಯವಾಗಲಿಲ್ಲ. ಕಳೆದ ವರ್ಷ ವಿರೋಧಿಗಳು ಅವರನ್ನು ಅಧಿಕಾರದಿಂದ ದೂರವಿಡಲು ಹಿಂದೆಂದೂ ಕಂಡರಿಯದಂತಹ ಮೈತ್ರಿಕೂಟವನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರು. ಆದರೆ ಈ ಮೈತ್ರಿಕೂಟದ ನಾಯಕರಾದ ಯಾಯಿರ್ ಲ್ಯಾಪಿಡ್ ಮತ್ತು ನಫ್ತಾಲಿ ಬೆನೆಟ್ ಸಮ್ಮಿಶ್ರ ಪಕ್ಷಗಳ ಸರ್ಕಾರವನ್ನು ಮುಂದುವರಿಸಲಾಗದೆ ಹೊಸ ಚುನಾವಣೆಗೆ ಕರೆ ನೀಡಿದರು. ಬೆನೆಟ್ ಸರ್ಕಾರ ಒಂದು ವರ್ಷ ಮೂರು ತಿಂಗಳು ಕಾಲ ಮಾತ್ರ ಅಸ್ತಿತ್ವದಲ್ಲಿತ್ತು. ಹೀಗಾಗಿ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಐದನೇ ಬಾರಿಗೆ ಹೊಸ ನೆಸ್ಸೆಟ್, ಅಂದರೆ ದೇಶದ ಸಂಸತ್ತನ್ನು ಆಯ್ಕೆ ಮಾಡಲು ಈಗ ಚುನಾವಣೆಗಳು ನಡೆದಿವೆ.

    ಹೀಗೆ ನಡೆಯುತ್ತದೆ ಎಲೆಕ್ಷನ್

    ಇಸ್ರೇಲ್ ಸಂಸದೀಯ ಪ್ರಜಾಪ್ರಭುತ್ವವಾಗಿದೆ. ಇಲ್ಲಿ ಜನರು ತಾವು ಬೆಂಬಲಿಸುವ ಪಕ್ಷಕ್ಕೆ ಮತ ಹಾಕುತ್ತಾರೆ. ಕನಿಷ್ಠ ಶೇ. 3.25ರಷ್ಟು ಮತಗಳನ್ನು ಪಡೆಯುವ ಪ್ರತಿಯೊಂದು ಪಕ್ಷವು ಅದು ಗೆದ್ದ ಒಟ್ಟು ಮತಗಳ ಶೇಕಡಾವಾರು ಪ್ರಮಾಣವನ್ನು ಆಧರಿಸಿ ನೆಸ್ಸೆಟ್​ನಲ್ಲಿ ನಿರ್ದಿಷ್ಟ ಸಂಖ್ಯೆಯ ಸ್ಥಾನಗಳನ್ನು ಪಡೆಯುತ್ತದೆ. ನೆಸ್ಸೆಟ್​ನಿಂದ ಪ್ರತ್ಯೇಕವಾಗಿ ಪ್ರಧಾನ ಮಂತ್ರಿಯನ್ನು ನೇರವಾಗಿ ಆಯ್ಕೆ ಮಾಡುವ ಪ್ರಯೋಗವನ್ನು ಇಸ್ರೇಲ್ ಹಿಂದೆ ಮಾಡಿತ್ತು. ಆದರೆ, ಮತ್ತೆ ಸಂಸತ್ ಚುನಾವಣೆ ವ್ಯವಸ್ಥೆಗೆ ವಾಪಸಾಯಿತು.

    ಜ್ವಲಂತ ಸಮಸ್ಯೆಗಳು

    ಪ್ರಸ್ತುತ ಚುನಾವಣೆಯಲ್ಲಿ ಹಲವು ಜ್ವಲಂತ ಸಮಸ್ಯೆಗಳು ಚರ್ಚೆಗೆ ಬಂದಿವೆ. ಜೀವನ ನಿರ್ವಹಣೆ ವೆಚ್ಚ ಅಧಿಕವಾಗಿರುವುದು, ಶೇ. 5.2 ರಷ್ಟು ಹಣದುಬ್ಬರ ದರ, ಗಗನಕ್ಕೇರುತ್ತಿರುವ ಬೆಲೆಗಳು ಇವುಗಳಲ್ಲಿ ಪ್ರಮುಖವಾಗಿವೆ. ಕೋವಿಡ್ ಸಾಂಕ್ರಾಮಿಕ ಮತ್ತು ರಷ್ಯಾ-ಯೂಕ್ರೇನ್ ಯುದ್ಧದ ಪರಿಣಾಮವನ್ನು ನಿಯಂತ್ರಿಸಲು ಸರ್ಕಾರವು ಸಾಕಷ್ಟು ಕೆಲಸ ಮಾಡಿಲ್ಲ ಎಂಬುದು ವಿರೋಧ ಪಕ್ಷಗಳ ಆಪಾದನೆಯಾಗಿದೆ. ದೇಶೀಯ ಭದ್ರತೆ, ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ದೀರ್ಘಕಾಲದ ಸಂಘರ್ಷ, ಲೆಬನಾನ್​ನೊಂದಿಗಿನ ಇಸ್ರೇಲ್​ನ ಕಡಲ ಗಡಿ ಒಪ್ಪಂದದಂತಹ ಸಮಸ್ಯೆಗಳು ಕೂಡ ಪ್ರಮುಖವಾಗಿ ಚರ್ಚೆಗೆ ಬಂದಿವೆ.

    ದಾಖಲೆಯತ್ತ ನೆತನ್ಸಾಹು

    ಮಂಗಳವಾರ ನಡೆದ ಚುನಾ ವಣೆಯ ಮತಎಣಿಕೆ ಮುಕ್ತಾಯ ಹಂತ ತಲುಪಿದೆ. ಶೇ. 90ಕ್ಕೂ ಹೆಚ್ಚು ಮತಗಳ ಎಣಿಕೆ ಮಾಡಲಾಗಿದ್ದು, ಮಾಜಿ ಪ್ರಧಾನಿ ನೆತನ್ಯಾಹು ಅವರ ಬಣವು 120 ಸ್ಥಾನಗಳ ಪೈಕಿ 65 ಸ್ಥಾನ ಗೆಲ್ಲುವ ಸಾಧ್ಯತೆಗಳು ನಿಚ್ಚಳ ವಾಗಿವೆ. ‘ನಾವು ದೊಡ್ಡ ಗೆಲುವಿನ ಸಮೀಪದಲ್ಲಿದ್ದೇವೆ’ ಎಂದು ನೆತನ್ಯಾಹು ಅವರು ಜೆರುಸಲೆಮ್ಲ್ಲಿ ಹೇಳಿದ್ದಾರೆ. ಆದರೂ ನೆತನ್ಯಾಹು ಅವರು ಅಧಿಕಾರಕ್ಕೆ ಬರಲು ಕಟ್ಟರ್ ರಾಷ್ಟ್ರೀಯ- ಧಾರ್ವಿುಕವಾದಿ ಪಕ್ಷವಾದ ಜಿಯೋನಿಸಂ ಪಾರ್ಟಿ ಬೆಂಬಲವನ್ನು ಅವಲಂಬಿಸಬೇಕಾಗುತ್ತದೆ. 70 ವರ್ಷದ ನೆತನ್ಯಾಹು ಅವರು ಇಸ್ರೇಲ್​ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದಾರೆ. 1996 ರಿಂದ 1999ರವರೆಗೆ ಮತ್ತು 2009 ರಿಂದ 2019ರವರೆಗೆ ಅಧಿಕಾರದಲ್ಲಿದ್ದರು. ಈಗ ಅವರು ದಾಖಲೆಯ 5ನೇ ಅವಧಿಗೆ ಪ್ರಧಾನಿಯಾಗಲು ಸಜ್ಜಾಗಿದ್ದಾರೆ.

    ಹುಳಿ ರೊಟ್ಟಿ ರಗಳೆ

    ಈ ವರ್ಷದ ಏಪ್ರಿಲ್​ನಲ್ಲಿ ಸಂಸತ್ ಸದಸ್ಯೆ ಇಡಿತ್ ಸಿಲ್ಮನ್ ಅವರು ಪ್ರಧಾನಮಂತ್ರಿ ನಫ್ತಾಲಿ ಬೆನೆಟ್ ಅವರ ಧಾರ್ವಿುಕ-ರಾಷ್ಟ್ರೀಯವಾದಿ ಯಾಮಿನಾ ಪಕ್ಷಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಆ ಪಕ್ಷ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿತು. ಆಗ ಬೆನೆಟ್, ‘ನೆತನ್ಯಾಹು ಬೆಂಬಲಿಗರಿಂದ ಸಿಲ್ಮನ್ ಒಂದು ತಿಂಗಳ ಕಾಲ ತೀವ್ರ ಕಿರುಕುಳಕ್ಕೆ ಒಳಗಾಗಿದ್ದಾರೆ’ ಎಂದು ಆರೋಪಿಸಿದರು ಎಂದು ‘ಜೆರುಸಲೆಮ್ ಪೋಸ್ಟ್’ ಪತ್ರಿಕೆ ವರದಿ ಮಾಡಿತು. ಈ ಕಿರುಕುಳದಿಂದಾಗಿಯೇ ಸಿಲ್ಮನ್ ಮೈತ್ರಿಕೂಟ ತೊರೆದಿದ್ದಾರೆ ಎಂದೂ ಪತ್ರಿಕೆ ಹೇಳಿತು.

    ಆದರೆ, ಸಿಲ್ಮನ್ ಹೇಳಿದ್ದೇ ಬೇರೆ ಕಥೆಯನ್ನು. ಪಾಸೋವರ್ ಹಬ್ಬದ ಸಂದರ್ಭದಲ್ಲಿ ಪ್ರವಾಸಿಗರು ಹುಳಿ ರೊಟ್ಟಿಯೊಂದಿಗೆ ಆಸ್ಪತ್ರೆಗಳ ಆವರಣ ಪ್ರವೇಶಿಸಲು ಅವಕಾಶ ನೀಡುವಂತೆ ದೇಶದ ಆರೋಗ್ಯ ಸಚಿವ ನಿಟ್ಜಾನ್ ಹೊರೊವಿಟ್ಜ್ ಸೂಚನೆ ನೀಡಿರುವ ವಿವಾದವು ತಮ್ಮ ರಾಜೀನಾಮೆಗೆ ಹೆಚ್ಚಿನ ಸಂಬಂಧ ಹೊಂದಿದೆ ಎಂದು ಸಿಲ್ಮನ್ ಹೇಳಿದರು. ಈ ರೀತಿ ಅಸ್ಪತ್ರೆ ಪ್ರವೇಶಿಸುವುದನ್ನು ಯಹೂದಿ ಧಾರ್ವಿುಕ ಕಾನೂನುಗಳ ಅಡಿಯಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, ಇಸ್ರೇಲ್​ನ ಸವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಹೊರೊವಿಟ್ಜ್ ಸೂಚನೆ ನೀಡಿದ್ದಾರೆ.

    ಸಿಲ್ಮನ್ ರಾಜೀನಾಮೆ ಎಂಟು ಪಕ್ಷಗಳ ಮೈತ್ರಿಕೂಟದ ಅಸಮಾಧಾನಕ್ಕೆ ಕಾರಣವಾಗಿ, ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿತು. ಇಸ್ರೇಲ್ ಸಂಸದೀಯ ವ್ಯವಸ್ಥೆ ಹೊಂದಿದ್ದು, ಯಾವುದೇ ಪಕ್ಷವು ಏಕಾಂಗಿಯಾಗಿ ನೆಸ್ಸೆಟ್​ನಲ್ಲಿ ಸಂಪೂರ್ಣ ಬಹುಮತ ಪಡೆದುಕೊಂಡಿರಲಿಲ್ಲ. ಸರ್ಕಾರವನ್ನು ರಚಿಸಲು ಅಗತ್ಯವಿರುವ 61 ಸ್ಥಾನಗಳನ್ನು ತಲುಪಲು ಅನೇಕ ಪಕ್ಷಗಳು ಸೇರಿ ಮೈತ್ರಿಕೂಟ ರಚಿಸಿಕೊಂಡಿದ್ದವು. ಈ ಮೈತ್ರಿಯನ್ನು ಉಳಿಸಿಕೊಳ್ಳಲು ಪ್ರತಿಯೊಂದು ಪಕ್ಷ ಹಾಗೂ ಪ್ರತಿಯೊಬ್ಬರ ಸಂಸದರ ಮೇಲೆ ಅವಲಂಬಿತವಾಗಿರುವ ಪರಿಸ್ಥಿತಿ ತಲೆದೋರಿತ್ತು. ಹೀಗಾಗಿ, ಸಿಲ್ಮನ್ ಅವರೊಬ್ಬರು ರಾಜೀನಾಮೆ ನೀಡಿದ್ದು ಕೂಡ ರಾಜಕೀಯ ಅಸ್ಥಿರತೆಗೆ ಇಂಬು ನೀಡಿತು. ಸಿಲ್ಮನ್ ಭಿನ್ನಾಭಿಪ್ರಾಯವೊಂದೇ ಮೈತ್ರಿಕೂಟ ಮುರಿದುಬೀಳಲು ಕಾರಣವಾಗಿರಲಿಲ್ಲ. ಕೆಲವು ದಿನಗಳಿಂದ ನಡೆಯುತ್ತಿದ್ದ ಆಂತರಿಕ ಘರ್ಷಣೆಗಳು, ಪಕ್ಷಗಳಲ್ಲಿನ ಭಿನ್ನಭಿನ್ನ ಸಿದ್ಧಾಂತ ಮತ್ತು ನಂಬಿಕೆಗಳು ಮೈತ್ರಿಕೂಟದಲ್ಲಿ ಆಳವಾದ ಬಿರುಕುಗಳನ್ನು ಉಂಟು ಮಾಡಿದ್ದವು.

    ಕಶ್ರುತ್ ವಿವಾದ

    ಹಿಂದಿನ ಸರ್ಕಾರದಲ್ಲಿ ತಲೆದೋರಿದ ಪ್ರಮುಖ ಸಮಸ್ಯೆಯೆಂದರೆ ಕಶ್ರುತ್ ವಿವಾದ. ಹರೆಡಿ ಸಮುದಾಯಕ್ಕೆ ಸಂಬಂಧಿಸಿದ ಕಶ್ರುತ್ ಸುಧಾರಣೆಯತ್ತ ಸರ್ಕಾರ ಗಮನ ಕೇಂದ್ರೀಕರಿಸಿತ್ತು. ಕಶ್ರುತ್ ಎಂಬುದು ಯಹೂದಿ ಸಮುದಾಯದ ಆಹಾರದ ಕಾನೂನುಗಳಿಗೆ ಸಂಬಂಧಿಸಿದ್ದಾಗಿದೆ. ಕಶ್ರುತ್ ಸುಧಾರಣೆಯಿಂದ ಆಹಾರದ ಬೆಲೆಗಳು ಕಡಿಮೆ ಆಗುತ್ತವೆ ಎಂಬುದು ಸರ್ಕಾರದ ಪ್ರತಿಪಾದನೆಯಾಗಿತ್ತು. ಆದರೆ, ಹರೆಡಿ ಸಮುದಾಯವು, ‘ಸರ್ಕಾರವು ಧರ್ಮ ಮತ್ತು ರಾಜ್ಯದ ವಿಷಯಗಳಲ್ಲಿ ದೀರ್ಘಕಾಲದಿಂದ ಸ್ಥಾಪಿತವಾಗಿರುವ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ’ ಎಂದು ತಕರಾರು ವ್ಯಕ್ತಪಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts